ಸಾರಾಂಶ
ಸಂವಿಧಾನ ನಮಗೆ ನೀಡಿರುವ ಹಕ್ಕುಗಳು ಎಷ್ಟು ಮುಖ್ಯವೋ ಕರ್ತವ್ಯ ಕೂಡ ಅಷ್ಟೇ ಮುಖ್ಯ ಎನ್ನುವುದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ಸಂವಿಧಾನ ನಮಗೆ ನೀಡಿರುವ ಹಕ್ಕುಗಳ ದುರುಪಯೋಗ ಮಾಡಿಕೊಳ್ಳಬಾರದು.
ಕನ್ನಡಪ್ರಭ ವಾರ್ತೆ ಹುಣಸಗಿ
ಪ್ರತಿಯೊಬ್ಬರೂ ದೇಶದ ಸಂವಿಧಾನದ ಶ್ರೇಷ್ಠತೆ ಹಾಗೂ ಮಹತ್ವದ ಬಗ್ಗೆ ಅರಿತುಕೊಳ್ಳಬೇಕು ಎಂದು ತಹಸೀಲ್ದಾರ್ ಬಸಲಿಂಗಪ್ಪ ನೈಕೋಡಿ ಹೇಳಿದರು.ತಾಲೂಕಿನ ನಾರಾಯಣಪೂರ ಪಟ್ಟಣದಲ್ಲಿ ಆರಂಭವಾದ ಸಂವಿಧಾನ ಜಾಗೃತಿ ಜಾಥಾ ರಥಯಾತ್ರೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಂವಿಧಾನ ನಮಗೆ ನೀಡಿರುವ ಹಕ್ಕುಗಳು ಎಷ್ಟು ಮುಖ್ಯವೋ ಕರ್ತವ್ಯ ಕೂಡ ಅಷ್ಟೇ ಮುಖ್ಯ ಎನ್ನುವುದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ಸಂವಿಧಾನ ನಮಗೆ ನೀಡಿರುವ ಹಕ್ಕುಗಳ ದುರುಪಯೋಗ ಮಾಡಿಕೊಳ್ಳಬಾರದು ಎಂದರು.
ಸಮಾಜ ಕಲ್ಯಾಣ ಉಪನಿರ್ದೇಶಕ ಪ್ರವೀಣಕುಮಾರ ಮಾತನಾಡಿ, ಸರ್ಕಾರದ ಆದೇಶದ ಮೇರೆಗೆ ಸಮಾಜ ಕಲ್ಯಾಣ ಇಲಾಖೆಯಿಂದ “ಸಂವಿಧಾನ ಜಾಗೃತಿ ಜಾಥಾ” ರಾಜ್ಯಾದ್ಯಾಂತ ಹಮ್ಮಿಕೊಂಡಿದ್ದು, ಅದರಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸಂವಿಧಾನ ಜಾಗೃತಿ ಜಾಥಾದ ರಥವು ಸಂಚರಿಸಿ ಗ್ರಾಮಸ್ಥರಲ್ಲಿ ಅರಿವು ಮೂಡಿಸಲಾಗುತ್ತಿದೆ. ಸಂವಿಧಾನವು ಸಮಾನತೆ, ಭ್ರಾತೃತ್ವ, ರಾಷ್ಟ್ರೀಯ ಏಕತೆ ತರುವಲ್ಲಿ ತನ್ನದೇ ಆದ ಪಾತ್ರವಹಿಸಿದ್ದು, ಸಂವಿಧಾನದ ಮಹತ್ವವನ್ನು ಮನೆ ಮನೆಗೆ ತಲುಪಿಸುವ ಪ್ರಯತ್ನವನ್ನು ರಾಜ್ಯ ಸರ್ಕಾರ ಜಾಗೃತಿ ಜಾಥಾ ಮೂಲಕ ಮಾಡುತ್ತಿದೆ ಎಂದು ಹೇಳಿದರು.ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಗ್ರಾಪಂ ಅಧಿಕಾರಿಗಳು ಹಾಗೂ ವಿವಿಧ ಸಮಾಜದ ಮುಖಂಡರು ಸಂವಿಧಾನ ಜಾಗೃತಿ ಜಾಥಾ ಹಾಗೂ ಡಾ. ಅಂಬೇಡ್ಕರ್ ಅವರ ಸ್ಥಬ್ಧ ಚಿತ್ರವನ್ನು ವಿವಿಧ ವಾದ್ಯ ಮೇಳದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು ಹೆಮ್ಮೆಯ ವಿಷಯವಾಗಿದೆ.
ತಾಲೂಕಿನ ನಾರಯಣಪೂರ ಗ್ರಾಮದಿಂದ ಆರಂಭವಾದ ಸಂವಿಧಾನ ಜಾಗೃತಿ ಜಾತಿವು ಜೋಗಂಡಭಾವಿ, ಮಾರನಾಳ, ಬರದೇವನಾಳ, ಹಗರಟಗಿಯಲ್ಲಿ ಸಂಚರಿಸಿ ಕೊಡೇಕಲ್ ಪಟ್ಟಣದಲ್ಲಿ ವಾಸ್ತವ್ಯ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.ವಿವಿಧ ಸಂಘಟನೆಗಳ ಪ್ರಮುಖರು ಹಾಗೂ ಗ್ರಾಮಸ್ಥರು ಸಂವಿಧಾನ ಜಾಗೃತಿ ಜಾಥಾ ಮೆರವಣಿಗೆಯಲ್ಲಿ ಭಾಗಿಯಾದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾಥಾ ಸಂಚರಿಸಿ ಗ್ರಾಮಸ್ಥರಲ್ಲಿ ಅರಿವು ಮೂಡಿಸಿತು.
ಸಮಾಜ ಕಲ್ಯಾಣ ಉಪನಿರ್ದೇಶಕ ಪ್ರವೀಣಕುಮಾರ, ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕಿ ಡಾ. ಶ್ರುತಿ ಎಂ., ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಮಹ್ಮದ್ ಸಲೀಮ್, ಬಿಒ ಯಲ್ಲಪ್ಪ ಕಾಡ್ಲೋರ್, ಸಿಡಿಪಿಒ ಅನೀಲ್ ಕುಮಾರ ಎಂ. ಕಾಂಬ್ಳೆ, ತಾಪಂ ಅಧಿಕಾರಿ ಬಸವರಾಜಯ್ಯ ಹಿರೇಮಠ, ಗ್ರಾಪಂ ಅಧ್ಯಕ್ಷ ಮತ್ತು ದಲಿತ ಮುಖಂಡರಾದ ಅಮರೇಶ ಕೋಳೂರ, ರಮೇಶ ಗೌಡ್ರ, ಶಿವು ಬಿರಾದಾರ್, ರಮೇಶ ಕೋಳೂರ ಇತರರಿದ್ದರು.