ಕುವೆಂಪು ಅವರು ರಚಿಸಿದ ಜಯ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ ಎಂಬ ನಾಡಗೀತೆಯನ್ನು ಎಲ್ಲಾ ಸರ್ಕಾರಿ ಕಾರ್ಯಕ್ರಮಗಳಲ್ಲಿ ಮತ್ತು ಎಲ್ಲಾ ಶಾಲಾ ಕಾಲೇಜುಗಳಲ್ಲಿ ಪ್ರತಿದಿನ ಗಾಯನ ಮಾಡುತ್ತೇವೆ. ಈ ನಾಡಗೀತೆಗೆ ನೂರು ವರ್ಷಗಳ ತುಂಬಿದ ಸಂಭ್ರಮದಲ್ಲಿದ್ದೇವೆ. ಈ ನಾಡಗೀತೆಯು ಕನ್ನಡ ನಾಡಿನ ಹಿರಿಮೆ ಗರಿಮೆ, ಕಲೆ ಸಂಸ್ಕೃತಿ ಸಾರುತ್ತದೆ ಎಂದು ಡಾ.ಆರ್.ಎಸ್ ದೊಡ್ಡನಿಂಗಪ್ಪಗೋಳ ಹೇಳಿದರು.

ಕನ್ನಡಪ್ರಭ ವಾರ್ತೆ ಅಥಣಿ

ಕನ್ನಡ ನಾಡಿಗೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ರಾಷ್ಟ್ರಕವಿ ಕುವೆಂಪು ಅವರ ಸಾಹಿತ್ಯವನ್ನು ಪ್ರತಿಯೊಬ್ಬರು ಅಧ್ಯಯನ ಮಾಡಬೇಕು. ಅವರ ಕಾವ್ಯಗಳಲ್ಲಿರುವ ಮಾನವೀಯ ಮೌಲ್ಯಗಳನ್ನು, ಅವರು ಸಾರಿದ ವಿಶ್ವಮಾನವ ಸಂದೇಶ ಮೈಗೂಡಿಸಿಕೊಂಡಾಗ ಉತ್ತಮ ಸಮಾಜ ಕಟ್ಟಲು ಸಹಕಾರಿಯಾಗುತ್ತದೆ ಎಂದು ಸಾಹಿತಿ, ಚುಟುಕು ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷ ಡಾ.ಆರ್.ಎಸ್ ದೊಡ್ಡನಿಂಗಪ್ಪಗೋಳ ಹೇಳಿದರು.

ಇಲ್ಲಿನ ಬಡಕಂಬಿ ತೋಟದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಚ್ ಶಿವರಾಮೇಗೌಡರ ಸಾರಥ್ಯದ ಕರ್ನಾಟಕ ರಕ್ಷಣಾ ವೇದಿಕೆ ಅಥಣಿ ತಾಲೂಕ ಘಟಕದಿಂದ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದ ಅಂಗವಾಗಿ ಸೋಮವಾರ ಆಯೋಜಿಸಿದ್ದ ವಿಶ್ವಮಾನವ ದಿನಾಚರಣೆ ಹಾಗೂ ನಾಡಗೀತೆಯ ಶತಮಾನ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರತಿಯೊಬ್ಬರೂ ಹುಟ್ಟುತ್ತಲೇ ವಿಶ್ವಮಾನವರಾಗಿ ಹುಟ್ಟುತ್ತೇವೆ, ಬೆಳೆಯುತ್ತಲೇ ನಮ್ಮ ಸಾಮಾಜಿಕ ವ್ಯವಸ್ಥೆಯ ಜಾತಿ ಮತ ಪಂಥಗಳಿಗೆ ಸೀಮಿತವಾಗುತ್ತವೆ. ಜಾತಿ-ಮತಗಳನ್ನು ಬಹಿಷ್ಕರಿಸುವ ಬಸವ, ಬುದ್ಧ, ಅಂಬೇಡ್ಕರ್ ಅವರ ವಿಚಾರಗಳನ್ನು ಹೊಸ ರೂಪದಲ್ಲಿ ಕುವೆಂಪು ಅವರು ನಾಡಿಗೆ ಪರಿಚಯಿಸಿ ವಿಶ್ವಮಾನವ ಸಂದೇಶ ಜಗತ್ತಿಗೆ ಸಾರಿದ್ದಾರೆ ಎಂದು ಹೇಳಿದರು.

ಸಮಾರಂಭ ಉದ್ಘಾಟಿಸಿದ ಅಥಣಿ ಗ್ರಾಮೀಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಂಕರ ಗಡದೆ ಮಾತನಾಡಿ, ಮಾನವ ತನ್ನ ಮನಸನ್ನು ವಿಶ್ವದಷ್ಟು ವಿಶಾಲವಾಗಿ ಇಟ್ಟುಕೊಳ್ಳಬೇಕು. ಹೃದಯವಂತಿಕೆ ಸಜ್ಜನಿಕೆ, ಅಭಿಮಾನ, ಪ್ರೀತಿ, ಸಹನೆ ಹಾಗೂ ಕರುಣೆ ಎಲ್ಲವೂ ಮುಖ್ಯ ಎನ್ನುವುದನ್ನು ತಮ್ಮ ಕಾವ್ಯಗಳ ಮೂಲಕ ಕುವೆಂಪು ಅವರು ಜಗತ್ತಿಗೆ ಪರಿಚಯಿಸಿದರು ಎಂದು ಸ್ಮರಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಶ್ರೀಕಾಂತ ತಮ್ಮಣ್ಣ ಬಡಕಂಬಿ ಮಾತನಾಡಿ, ರಾಷ್ಟ್ರಕವಿ ಕುವೆಂಪು ಜಯಂತಿ ಕಾರ್ಯಕ್ರಮವನ್ನು ಕರ್ನಾಟಕ ರಕ್ಷಣಾ ವೇದಿಕೆಯವರು ನಮ್ಮ ಶಾಲೆಯಲ್ಲಿ ಆಯೋಜನೆ ಮಾಡಿರುವುದು ಸಂತಸ. ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸುವ ಅಭಿಯಾನದ ಜೊತೆಗೆ ಕನ್ನಡ ನಾಡು ನುಡಿಗಾಗಿ ಶ್ರಮಿಸಿದ ಮಹನೀಯರ ಸ್ಮರಣೆ ನೋಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ರಾಷ್ಟ್ರಕವಿ ಅವರ ವೈಚಾರಿಕತೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆ ಅನನ್ಯವಾದುದು ಎಂದರು.

ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿದ್ದ ಶೆಟ್ಟರ ಮಠದ ಮರುಳುಸಿದ್ದ ಸ್ವಾಮೀಜಿ ಕುವೆಂಪು ಅವರ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿ ಅವರ ಆದರ್ಶ ಬಣ್ಣಿಸಿ, ಆಶೀರ್ವಚನ ನೀಡಿದರು. ಈ ವೇಳೆ ನಾಡಗೀತೆಯ ಶತಮಾನದ ಸಂಭ್ರಮ ನಿಮಿತ್ತ ಶಾಲೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಗಣ್ಯರು ಸೇರಿದಂತೆ ಕರವೇ ಕಾರ್ಯಕರ್ತರು ಸಾಮೂಹಿಕವಾಗಿ ನಾಡಗೀತೆ ಗಾಯನ ಮಾಡುವ ಮೂಲಕ ನಮನ ಸಲ್ಲಿಸಲಾಯಿತು.

ಶಾಲೆಯ ವಿದ್ಯಾರ್ಥಿಗಳಿಗಾಗಿ ಕುವೆಂಪು ಅವರ ಭಾವಚಿತ್ರ ಬಿಡಿಸಿದ ಹಾಗೂ ಅವರ ಕುರಿತ ಭಾಷಣ ಮಾಡಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಮತ್ತು ನಗದು ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.

ಕರವೇ ಜಿಲ್ಲಾ ಕಾರ್ಯಧ್ಯಕ್ಷ ಜಗನ್ನಾಥ ಬಾಮನೆ, ತಾಲೂಕು ಅಧ್ಯಕ್ಷ ಉದಯ ಮಕಾಣಿ, ಕುಮಾರ ಬಡಿಗೇರ, ವಿಜಯಗೌಡ ನೇಮಗೌಡ, ಸುಕುಮಾರ ಮಾದರ, ಪರಶುರಾಮ ಕಾಂಬಳೆ, ವಿಲಾಸ್ರಾವ ಕುಲಕರ್ಣಿ, ಸಂಜೀವ ಕಾಳಗಿ, ಜಮಖಂಡಿ ಮೇಸ್ತ್ರಿ, ಅನಿಲ ಒಡಿಯರ, ಶಿಕ್ಷಕರಾದ ಎ.ಎಂ.ಹನಗಂಡಿ, ಯು.ಜೆ ಹೊನಕಾಂಡೆ, ಎಸ್.ಎ ಹಳ್ಯಾಳ, ಚೈತ್ರಾ ಶೆಟ್ಟಿ, ಸುನಂದ ನಾಯಕ, ಪಿ.ಎಸ್ ಮಾಳೇಗಾರ ಸೇರಿದಂತೆ ಕರವೇ ಕಾರ್ಯಕರ್ತರು, ಶಾಲೆಯ ವಿದ್ಯಾರ್ಥಿಗಳು ಇದ್ದರು. ಶಾಲೆ ಮುಖ್ಯೋಪಾಧ್ಯಾಯ ಅಶೋಕ ಪೂಜಾರಿ ಸ್ವಾಗತಿಸಿದರು. ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಣ್ಣಾಸಾಹೇಬ ತೆಲಸಂಗ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಆರ್.ಆರ್.ಪಠಾಣ ನಿರೂಪಿಸಿದರು. ಕರವೇ ತಾಲೂಕು ಅಧ್ಯಕ್ಷ ಉದಯ ಮಾಕಾಣಿ ವಂದಿಸಿದರು.ಕುವೆಂಪು ಅವರು ರಚಿಸಿದ ಜಯ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ ಎಂಬ ನಾಡಗೀತೆಯನ್ನು ಎಲ್ಲಾ ಸರ್ಕಾರಿ ಕಾರ್ಯಕ್ರಮಗಳಲ್ಲಿ ಮತ್ತು ಎಲ್ಲಾ ಶಾಲಾ ಕಾಲೇಜುಗಳಲ್ಲಿ ಪ್ರತಿದಿನ ಗಾಯನ ಮಾಡುತ್ತೇವೆ. ಈ ನಾಡಗೀತೆಗೆ ನೂರು ವರ್ಷಗಳ ತುಂಬಿದ ಸಂಭ್ರಮದಲ್ಲಿದ್ದೇವೆ. ಈ ನಾಡಗೀತೆಯು ಕನ್ನಡ ನಾಡಿನ ಹಿರಿಮೆ ಗರಿಮೆ, ಕಲೆ ಸಂಸ್ಕೃತಿ ಸಾರುತ್ತದೆ ಎಂದು ಡಾ.ಆರ್.ಎಸ್ ದೊಡ್ಡನಿಂಗಪ್ಪಗೋಳ ಹೇಳಿದರು.