ಕನ್ನಡಪ್ರಭ ವಾರ್ತೆ ಹಲಗೂರು
ದೇಶದಲ್ಲಿ ಹುಟ್ಟಿದ ಪ್ರತಿಯೊಬ್ಬರೂ ಸಮಾನತೆಯಿಂದ ಬದುಕಬೇಕು. ಎಲ್ಲಾ ಸಮುದಾಯಗಳು ಸಹಬಾಳ್ವೆ, ಸಹೋದರತ್ವದಿಂದ ಬದುಕಬೇಕು ಎಂದು ವೃತ ನಿರೀಕ್ಷಕ ಬಿ.ಎಸ್.ಶ್ರೀಧರ್ ಕರೆ ನೀಡಿದರು.ಸಮೀಪದ ದಳವಾಯಿ ಕೋಡಿಹಳ್ಳಿ ಗ್ರಾಮ ಪಂಚಾಯ್ತಿ ಸಭಾಂಗಣದಲ್ಲಿ ಆಯೋಜಿಸಿದ್ದ ಅಶ್ಪೃಶತೆ ಆಚರಣೆ ನಿಷೇಧ ಕಾಯ್ದೆ ಬಗ್ಗೆ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ, ದೇಶದ ಸಂವಿಧಾನವು ಎಲ್ಲಾ ವರ್ಗದ ಜನರಿಗೂ ಸಮಾನ ಹಕ್ಕು ಅವಕಾಶಗಳನ್ನು ಒದಗಿಸಿಕೊಟ್ಟಿದೆ ಎಂದರು.
ಯಾರೇ ಆದರೂ ಜಾತಿ, ಧರ್ಮ, ಲಿಂಗ ಅಥವಾ ಬಣ್ಣದ ಆಧಾರದ ಮೇಲೆ ಯಾವುದೇ ತಾರತಮ್ಯ ಮಾಡಬಾರದು. ಸಮಾಜದಲ್ಲಿನ ಅಸಮಾನತೆ ತೊಡೆದು ಹಾಕಲು ಕಾಯ್ದೆಯ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು ಎಂದರು.ಪಿಎಸ್ಐ ಲೋಕೇಶ್ ಮಾತನಾಡಿ, ಭಾರತೀಯ ಸಂವಿಧಾನದ 17ನೇ ವಿಧಿಯು ಅಸ್ಪೃಶತೆಯನ್ನು ಶಿಕ್ಷಾರ್ಹ ಕಾಯಿದೆ ಎಂದು ಘೋಷಿಸಿದೆ. ಇದರ ಪ್ರಕಾರ ಸಮಾಜದ ಎಲ್ಲಾ ವರ್ಗದ ಜನರಿಗೂ ಸಾರ್ವಜನಿಕ ಸ್ಥಳಗಳಲ್ಲಿ ಮುಕ್ತ ಅವಕಾಶವಿದೆ. ಸಾರ್ವಜನಿಕ ಸೇವೆಗಳನ್ನು ಗೌರವ ಮತ್ತು ಘನತೆಯಿಂದ ಬಳಸಬಹುದು. ಒಂದು ವೇಳೆ ಅಸ್ಪೃಶತೆ ಆಚರಣೆ ಮಾಡಿರುವುದು ಕಂಡು ಬಂದಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಸಿದರು.
ಈ ವೇಳೆ ಪ್ರೊಬೇಷನರಿ ಪಿಎಸ್ಐ ಜಯಂತ್, ಸುನೀಲ್, ಗ್ರಾಪಂ ಪಿಡಿಒ ವಿಜಯ್ ಕುಮಾರ್, ಮುಖಂಡರಾದ ಶಿವಕೆಂಚೇಗೌಡ, ತಮ್ಮಣ್ಣಗೌಡ, ಕೃಷ್ಣ, ರವೀಶ್, ಸಂಪತ್, ನಂಜುಂಡಯ್ಯ, ಶಿವರಾಜು ಸೇರಿದಂತೆ ಹಲವರು ಭಾಗವಹಿಸಿದ್ದರು.
ಕಣಿವೆ ಯೋಗೇಶ್ ಕುಟುಂಬಕ್ಕೆ ಹೆಚ್ಚಿನ ಪರಿಹಾರ: ಸಿಎಸ್ಪಿ ಭರವಸೆಪಾಂಡವಪುರ: ರಸ್ತೆ ಅಪಘಾತದಲ್ಲಿ ಮೃತಪಟ್ಟ ವಕೀಲ ಕಣಿವೆ ಯೋಗೇಶ್ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಸಾರಿಗೆ ಇಲಾಖೆಯಿಂದ ಇನ್ನೂ ಹೆಚ್ಚಿನ ಪರಿಹಾರ ದೊರಕಿಸಿಕೊಡುವುದಾಗಿ ಭರವಸೆ ನೀಡಿದರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಶವಗಾರದ ಬಳಿ ಆಗಮಿಸಿ ಮೃತ ಯೋಗೇಶ್ ಅವರ ಪತ್ನಿ, ಪುತ್ರ ಹಾಗೂ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.ಬಳಿಕ ಸ್ಥಳಕ್ಕೆ ಆಗಮಿಸಿದ ಸಾರಿಗೆ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ತಾತ್ಕಾಲಿಕ ಪರಿಹಾರ ದೊರಕಿಸಿಕೊಟ್ಟರು. ಇಲಾಖೆಯೊಂದಿಗೆ ಚರ್ಚಿಸಿ ಇನ್ನೂ ಹೆಚ್ಚಿನ ಪರಿಹಾರ ದೊರಕಿಸಿಕೊಡಿವುದಾಗಿ ಭರವಸೆ ನೀಡಿದರು.
ಬಳಿಕ ತಾಲೂಕಿನ ಕಣಿವೆಕೊಪ್ಪಲು ಗ್ರಾಮದ ಸ್ವಜಮೀನಿನಲ್ಲಿ ಅಂತ್ಯ ಸಂಸ್ಕಾರ ನೆರವೇರಿತು. ಅಂತ್ಯಕ್ರಿಯೆಯಲ್ಲಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಮಾಜಿ ಶಾಸಕ ಕೆ.ಅನ್ನದಾನಿ, ಮನ್ಮುಲ್ ನಿರ್ದೇಶಕ ಸಿ.ಶಿವಕುಮಾರ್, ಜಿಪಂ ಮಾಜಿ ಸದಸ್ಯ ಸಿ.ಅಶೋಕ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.