ಸಾರಾಂಶ
ವೈದ್ಯರನ್ನು ಗೌರವಿಸಿದರೆ ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡಲು ಆಸಕ್ತಿ ವಹಿಸುತ್ತಾರೆ. ಎಲ್ಲಾ ವೈದ್ಯರು ಹಣದ ಹಿಂದೆ ಹೋಗುವುದಿಲ್ಲ. ಸಮಾಜ ಸೇವೆ ಮಾಡಬೇಕೆಂಬ ಹಂಬಲ ಅವರಲ್ಲಿಯೂ ಇರುತ್ತದೆ.
ಭಾರತೀನಗರ: ಪ್ರತಿಯೊಬ್ಬರು ವೈದ್ಯರನ್ನು ಪ್ರೀತಿಸಿ, ಗೌರವಿಸುವಂತಹ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಅಸೋಷಿಯೇಷನ್ ಆಫ್ ಅಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್ ಜಿಲ್ಲಾ ರಾಜ್ಯಪಾಲಕ ಕೆ.ಟಿ.ಹನುಮಂತು ತಿಳಿಸಿದರು.
ಕೆ.ಎಂ.ದೊಡ್ಡಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅಸೋಷಿಯೇಷನ್ ಆಫ್ ಅಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್ ವತಿಯಿಂದ ರಾಷ್ಟ್ರೀಯ ವೈದ್ಯ ದಿನಾಚರಣೆಯಲ್ಲಿ ಮಾತನಾಡಿದರು.ಹಲವು ರೋಗಗಳಿಂದ ಬಳಲುವ ನಮಗೆ ಗುಣಮುಖರನ್ನಾಗಿ ಮಾಡುತ್ತಾರೆ. ಕೊರೋನಾದಲ್ಲಿ ತಮ್ಮ ಜೀವವನ್ನೇ ಲೆಕ್ಕಿಸದೆ ರೋಗಿಗಳಿಗೆ ಚಿಕಿತ್ಸೆ ನೀಡಿದಂತಹ ಉದಾಹರಣೆಗಳಿವೆ. ಆದ್ದರಿಂದ ವೈದ್ಯರಿಲ್ಲದೇ ನಾವಿಲ್ಲ ಎಂದರು.
ಪ್ರಸಿದ್ಧ ವೈದ್ಯ ಹಾಗೂ ಭಾರತ ರತ್ನ ಪುರಸ್ಕೃತ ಡಾ.ಬಿ.ಸಿ.ರಾಯ್ ಅವರ ಜನ್ಮ ದಿನದ ಅಂಗವಾಗಿ ವೈದ್ಯರ ದಿನಾಚರಣೆಯನ್ನು ರಾಷ್ಟ್ರಾದ್ಯಂತ ಆಚರಣೆ ಮಾಡಲಾಗುತ್ತಿದೆ. ಇದರ ಅಂಗವಾಗಿ ವೈದ್ಯರನ್ನು ಸನ್ಮಾನಿಸಲಾಗುತ್ತಿದೆ ಎಂದರು.ತಾಲೂಕು ಆಡತ ವೈದ್ಯಾಧಿಕಾರಿ ಡಾ.ರವೀಂದ್ರ ಬಿ.ಗೌಡ ಮಾತನಾಡಿ, ವೈದ್ಯರನ್ನು ಗೌರವಿಸಿದರೆ ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡಲು ಆಸಕ್ತಿ ವಹಿಸುತ್ತಾರೆ. ಎಲ್ಲಾ ವೈದ್ಯರು ಹಣದ ಹಿಂದೆ ಹೋಗುವುದಿಲ್ಲ. ಸಮಾಜ ಸೇವೆ ಮಾಡಬೇಕೆಂಬ ಹಂಬಲ ಅವರಲ್ಲಿಯೂ ಇರುತ್ತದೆ ಎಂದು ವಿವರಿಸಿದರು.
ಈ ವೇಳೆ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಜಗದೀಶ್, ಡಾ.ರವೀಶ್, ಡಾ.ಅರ್ಜುನ್, ಡಾ.ಮಧುರ, ಡಾ.ಸೌಮ್ಯ, ಡಾ.ರಮ್ಯ ಅವರನ್ನು ಅಭಿನಂದಿಸಲಾಯಿತು. ಕ್ಲಬ್‌ನ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೆ.ಎಸ್.ಚಂದ್ರಶೇಖರ್, ಪ್ರಾಂತ್ಯ ಅಧ್ಯಕ್ಷ ಕೆ.ಎನ್.ಮೀನಾ ಪಟೇಲ್, ಪರಿಸರ ಜಾಗೃತಿ ವೇದಿಕೆ ತಾಲೂಕು ಅಧ್ಯಕ್ಷ ಅಣ್ಣೂರು ಸತೀಶ್, ಭಾರತೀನಗರ ಅಲಯನ್ಸ್ ಸಂಸ್ಥೆ ಅಧ್ಯಕ್ಷೆ ವಸಂತಮ್ಮ, ಸದಸ್ಯರಾದ ಸುಜಾತ, ಗೀತ, ಅನುಪಮ, ಶಶಿಕಲಾ, ಪ್ರಭಾವತಿ, ಶಿವಮ್ಮ, ಮಮತ, ಲೀಲಮ್ಮ, ನಾಗರತ್ನ ಹೆಲ್ತ್ ಇನ್ಸ್‌ಪೆಕ್ಟರ್ ಶಿವರಾಜು, ಸೇರಿ ಹಲವರಿದ್ದರು.