ಪ್ರಾಣಹಾನಿ ಸಂಭವಿಸಿದರೆ ಮೆಸ್ಕಾಂ ಎಂಜಿನಿಯರ್‌ ಹೊಣೆ: ಖಾದರ್‌

| Published : Jul 01 2024, 01:53 AM IST

ಪ್ರಾಣಹಾನಿ ಸಂಭವಿಸಿದರೆ ಮೆಸ್ಕಾಂ ಎಂಜಿನಿಯರ್‌ ಹೊಣೆ: ಖಾದರ್‌
Share this Article
  • FB
  • TW
  • Linkdin
  • Email

ಸಾರಾಂಶ

ಇತ್ತೀಚೆಗೆ ವಿದ್ಯುತ್ ಆಘಾತದಿಂದ ಜಿಲ್ಲೆಯಲ್ಲಿ ಮೂರು ಸಾವು ಸಂಭವಿಸಿದ ಹಿನ್ನೆಲೆಯಲ್ಲಿ ಸ್ಪೀಕರ್‌ ಖಾದರ್‌, ಮಂಗಳೂರಿನ ಮೆಸ್ಕಾಂ ಭವನದಲ್ಲಿ ಭಾನುವಾರ ಅಧಿಕಾರಿಗಳ ಮಹತ್ವದ ಸಭೆ ನಡೆಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ವಿದ್ಯುತ್ ಆಘಾತದಿಂದ ಜಿಲ್ಲೆಯಲ್ಲಿ ಇನ್ಮುಂದೆ ಸಾವು ನೋವು ಸಂಭವಿಸಿದರೆ ಸಂಬಂಧಪಟ್ಟ ಮೆಸ್ಕಾಂನ ಅಧಿಕಾರಿಗಳೇ ಸಂಪೂರ್ಣ ಜವಾಬ್ದಾರಿ ಅಗಲಿದ್ದಾರೆ. ಆಯಾ ವ್ಯಾಪ್ತಿಯ ಎಕ್ಸಿಕ್ಯೂಟಿವ್ ಎಂಜಿನಿಯರ್‌ಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಎಚ್ಚರಿಕೆ ನೀಡಿದ್ದಾರೆ.

ಇತ್ತೀಚೆಗೆ ವಿದ್ಯುತ್ ಆಘಾತದಿಂದ ಜಿಲ್ಲೆಯಲ್ಲಿ ಮೂರು ಸಾವು ಸಂಭವಿಸಿದ ಹಿನ್ನೆಲೆಯಲ್ಲಿ ನಗರದಲ್ಲಿರುವ ಮೆಸ್ಕಾಂ ಭವನದಲ್ಲಿ ಭಾನುವಾರ ಅಧಿಕಾರಿಗಳ ಮಹತ್ವದ ಸಭೆ ನಡೆಸಿ ಅವರು ಮಾತನಾಡಿದರು.

ವಿದ್ಯುತ್‌ ಜಾಲಕ್ಕೆ ಸಂಬಂಧಿಸಿ ಮಳೆಗಾಲದಲ್ಲಿ ಸಾವು ನೋವು ಸಂಭವಿಸಬಹುದಾದ ಅಪಾಯಕಾರಿ ಸ್ಥಳಗಳನ್ನು ಮೊದಲೇ ಗುರುತಿಸಿ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಮಾತ್ರವಲ್ಲದೆ ಜನರಿಗೆ ಈ ಬಗ್ಗೆ ಮಾಹಿತಿ ನೀಡುವ ಕಾರ್ಯ ಕೂಡ ಆಗಬೇಕು. ಇದರಲ್ಲಿ ನಿರ್ಲಕ್ಷ್ಯ ಸಲ್ಲದು ಎಂದು ಸೂಚಿಸಿದರು.

ಮರ ತೆರವಿಗೆ ವಿಳಂಬ ಏಕೆ?:

ತಂತಿ ಮೇಲೆ ಮರ ಉರುಳುವ ಸಂಭವ, ವಿದ್ಯುತ್ ಕಂಬ ಬೀಳುವ ಸಾಧ್ಯತೆ ಇತ್ಯಾದಿಗಳನ್ನು ಮೊದಲೇ ಗುರುತಿಸಿ ನಿರ್ವಹಣೆ ಮಾಡಬೇಕು. ಇದಕ್ಕಾಗಿ ಮೆಸ್ಕಾಂ, ಪಿಡಬ್ಲ್ಯೂಡಿ ಮತ್ತು ಅರಣ್ಯ ಇಲಾಖೆಗಳು ಪರಸ್ಪರ ಹೊಂದಾಣಿಕೆಯಿಂದ ಕೆಲಸ ಮಾಡಬೇಕು. ವಿದ್ಯುತ್ ತಂತಿಗೆ ಬೀಳುವ ಮರಗಳನ್ನು ತೆರವು ಮಾಡಲು ವಿಳಂಬ ಏಕೆ? ಆಧುನಿಕ ಕಾಲಘಟ್ಟದಲ್ಲಿ ಎಲ್ಲ ರೀತಿಯ ಸಲಕರಣೆಗಳಿದ್ದರೂ ಕೂಡ ಕಾಲಕಾಲಕ್ಕೆ ಇಂಥ ಕೆಲಸಗಳನ್ನು ಏಕೆ ಮಾಡುತ್ತಿಲ್ಲ? ಇತ್ತೀಚೆಗೆ ಮೂರು ಸಾವು ಸಂಭವಿಸಲು ಇದೇ ಕಾರಣ. ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಇರುವ ಇಂತಹ ಸ್ಪಾಟ್‌ಗಳನ್ನು ಗುರುತಿಸಿ ಯುದ್ಧೋಪಾದಿಯಲ್ಲಿ ಸಮಸ್ಯೆ ಬಗೆಹರಿಸುವ ಕೆಲಸ ಮಾಡಬೇಕು. ಅಲ್ಲದೆ ಇಂತಹ ಸ್ಪಾಟ್‌ಗಳು ಕಂಡುಬಂದರೆ ಜನರಿಗೆ ಮಾಹಿತಿ ನೀಡಲು ಸೂಕ್ತ ವೇದಿಕೆ ಕಲ್ಪಿಸಬೇಕು ಎಂದು ಖಾದರ್‌ ತಾಕೀತು ಮಾಡಿದರು.

ಪಾಂಡೇಶ್ವರದಲ್ಲಿ ರಿಕ್ಷಾ ಚಾಲಕರಿಬ್ಬರ ಸಾವು ಪ್ರಕರಣದ ಕುರಿತು ಸ್ಪಷ್ಟನೆ ನೀಡಿದ ಮೆಸ್ಕಾಂ ಅಧಿಕಾರಿ, ಘಟನೆ ನಡೆದ ಪ್ರದೇಶದಲ್ಲಿ ಸಂಪೂರ್ಣ ಅಂಡರ್ ಗ್ರೌಂಡ್ ಕೇಬಲ್ ಕಾಮಗಾರಿ ನಡೆದಿದೆ. ಆದರೆ ಆ ರಸ್ತೆಯಲ್ಲಿ ಬೀದಿ ದೀಪಗಳು ಇರಬೇಕು ಎಂದು ಮಹಾನಗರ ಪಾಲಿಕೆಯವರು ತಿಳಿಸಿದ್ದರಿಂದ ಆ ಎಚ್‌.ಟಿ. ತಂತಿಯನ್ನು ಹಾಗೇ ಉಳಿಸಲಾಗಿತ್ತು. ಇದೇ ತಂತಿಯ ಮೇಲೆ ಮರ ಬಿದ್ದು ದುರ್ಘಟನೆ ಸಂಭವಿಸಿದೆ ಎಂದು ಹೇಳಿದರು.

ಮಳೆಗಾಲ ಸಂದರ್ಭದಲ್ಲಿ ಸಮುದ್ರ ಬದಿ, ನದಿ, ರಾಜಕಾಲುವೆ, ಚರಂಡಿ ಬಳಿ ವಿದ್ಯುತ್ ಅಪಘಾತ ಸಂಭವಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದ ಯು.ಟಿ. ಖಾದರ್, ವಿದ್ಯುತ್ ತಂತಿ ಬಿದ್ದು ಸಾವು ನೋವು ಸಂಭವಿಸುವ ಮೊದಲು ಕಡಿದು ಬೀಳುವ ತಂತಿಯಲ್ಲಿ ವಿದ್ಯುತ್ ಪ್ರವಹಿಸದಂತೆ ಸ್ವಿಚ್‌ಗಳನ್ನು ಅಳವಡಿಸುವ ಕೆಲಸ ಸಮರೋಪಾದಿಯಲ್ಲಿ ನಡೆಯಬೇಕು ಎಂದು ತಾಕೀತು ಮಾಡಿದರು.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಎಂ.ಪಿ. ಮಾತನಾಡಿ, ವಿದ್ಯುತ್ ಅಪಘಾತಗಳ ಸಂದರ್ಭದಲ್ಲಿ ಸಾರ್ವಜನಿಕರು ಯಾವ ರೀತಿ ವರ್ತಿಸಬೇಕು ಎಂಬ ಕುರಿತಾದ ಜಾಗೃತಿ ವಿಡಿಯೋಗಳನ್ನು ಮಾಡುವುದು ಮತ್ತು ಕರಪತ್ರಗಳನ್ನು ಮುದ್ರಿಸಿ ಹಂಚಬೇಕು ಎಂದು ಸೂಚನೆ ನೀಡಿದರು.

ಮೆಸ್ಕಾಂ ಎಂಡಿ ಪದ್ಮಾವತಿ, ಡಿಸಿಎಫ್ ಅಂತೋನಿ ಮರಿಯಪ್ಪ ಇದ್ದರು..........................ಮಂಗಳೂರು ನಗರದಲ್ಲಿ ಖಾಲಿ ಜಾಗ ಕೊರತೆ ಇರುವುದರಿಂದ ಮುಂದಿನ ವರ್ಷಗಳಲ್ಲಿ ಕಾಲೇಜುಗಳು, ಉದ್ಯಮಗಳು ಇತ್ಯಾದಿ ಅಭಿವೃದ್ಧಿ ಕೆಲಸಗಳು ಉಳ್ಳಾಲ, ಮೂಲ್ಕಿ ಭಾಗಕ್ಕೆ ಬರಲಿವೆ. ಹಾಗಾಗಿ ಇಂತಹ ಅಭಿವೃದ್ಧಿಶೀಲ ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಆಗದಂತೆ ಮುಂದಿನ 30 ವರ್ಷಗಳ ಮುಂದಾಲೋಚನೆ ಇಟ್ಟುಕೊಂಡು ಮೆಸ್ಕಾಂ ತನ್ನ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಯು.ಟಿ. ಖಾದರ್ ಸೂಚನೆ ನೀಡಿದರು. ಇಂತಹ ಕಾಮಗಾರಿ ನಡೆಸುವ ವೇಳೆ ಸರ್ಕಾರದ ಮಟ್ಟದಲ್ಲಿ ಸಮಸ್ಯೆ ಕಂಡುಬಂದರೆ ಅವುಗಳನ್ನು ತಾನು ಬಗೆಹರಿಸುವುದಾಗಿ ಭರವಸೆ ನೀಡಿದರು.