ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ಇತ್ತೀಚೆಗೆ ನಿಧನರಾದ ಜಿಲ್ಲೆಯ ಹಿರಿಯ ಸಹಕಾರಿ ಧುರೀಣರು, ಧಾರ್ಮಿಕ, ಸಹಕಾರಿ ಕ್ಷೇತ್ರದ ಹಿರಿಯ ನಾಯಕ, ಸಹಕಾರಿ ಕ್ಷೇತ್ರದಲ್ಲಿ ಛಾಪು ಮೂಡಿಸಿದ್ದ ನಿಪ್ಪಾಣಿ ತಾಲೂಕಿನ ಬೋರಗಾಂವ ಗ್ರಾಮದ ರಾವಸಾಹೇಬ ಪಾಟೀಲ ಮನೆಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಶನಿವಾರ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿದರು.ಬೋರಗಾಂವ ಪಟ್ಟಣದಲ್ಲಿರುವ ರಾವಸಾಹೇಬ ಪಾಟೀಲ ಮನೆಗೆ ಭೇಟಿ ನೀಡಿದ ಸಚಿವರು, ರಾವಸಾಹೇಬ ಕುಟುಂಬಸ್ಥರಿಗೆ ಧೈರ್ಯ ಹೇಳಿದರು. ಈ ವೇಳೆ ಮಾತನಾಡಿದ ಅವರು, ರಾವಸಾಹೇಬ್ ಪಾಟೀಲ ಅವರು ರೈತ ಕುಟುಂಬದಿಂದ ಬಂದವರು, ತಮ್ಮ ಕುಟುಂಬದಿಂದ ಸಾಮಾಜಿಕ ಕಾರ್ಯಗಳನ್ನು ತಮ್ಮ ತಂದೆ ಮತ್ತು ತಾಯಿಯಿಂದ ಕಲಿತವರು. ಬೋರಗಾಂವ ಹಾಗೂ ಸುತ್ತಲಿನ ಪ್ರದೇಶದ ಅಭಿವೃದ್ಧಿಗಾಗಿ ಅವಿರತ ಪ್ರಯತ್ನ ಮಾಡಿದ್ದರು. ಅನೇಕ ಸವಾಲುಗಳನ್ನು ಎದುರಿಸುತ್ತಿರುವ ಸಹಕಾರ ಮತ್ತು ಸಾಮಾಜಿಕ ಕಾರ್ಯಗಳೊಂದಿಗೆ ಧಾರ್ಮಿಕ ಕಾರ್ಯಗಳನ್ನು ಸಂಯೋಜಿಸಿದವರು. ಅವರು ತಮ್ಮ ಜೀವನದಲ್ಲಿ ಅನೇಕ ಹೋರಾಟಗಳ ಮೂಲಕ ಯಶಸ್ವಿಯಾಗಿದ್ದರು ಎಂದು ಸ್ಮರಿಸಿದರು.ಜೈನ ಸಮುದಾಯದ ಪ್ರತಿಷ್ಠೆ ಎಂದು ಪರಿಗಣಿಸಲಾಗಿರುವ ದಕ್ಷಿಣ ಭಾರತದ ಜೈನ ಸಭಾದ ಅಧ್ಯಕ್ಷರಾಗಿ ರಾವಸಾಹೇಬ ಪಾಟೀಲ ಕಳೆದ ನಾಲ್ಕು ದಶಕಗಳಿಂದ ಕಾರ್ಯನಿರ್ವಹಿಸುತ್ತಿದ್ದರು. ಸಂಸ್ಕೃತಿ, ಶಿಕ್ಷಣ ಮತ್ತು ಆರೋಗ್ಯಕ್ಕೆ ಒತ್ತು ನೀಡಿದ್ದ ಅವರು, ಸಮಾಜದ ಪ್ರತಿ ಮಗು ಉನ್ನತ ಶಿಕ್ಷಣ ಪಡೆಯಲು ವಿದ್ಯಾರ್ಥಿ ವೇತನ ಯೋಜನೆಯನ್ನು ಕೈಗೊಂದ್ದರು. ಇಂದು ಈ ಸ್ಕಾಲರ್‌ಶಿಪ್ ಯೋಜನೆಯಲ್ಲಿ ಕೋಟ್ಯಂತರ ರೂಪಾಯಿ ಹಣ ಲಭ್ಯವಿದೆ. ಈ ಮೂಲಕ ಅನೇಕ ಜನರು ಶಿಕ್ಷಣ ಪಡೆದುಕೊಂಡಿದ್ದಾರೆ. ಬಡವರು ಆರೋಗ್ಯ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಇಂತಹ ಕೆಲಸ ಮಾಡಿದ್ದ ರಾವಸಾಹೇಬ ಪಾಟೀಲ ಕಾರ್ಯ ಶ್ಲಾಘನೀಯ ಎಂದರು.ಇದೇ ವೇಳೆ ದಿ.ರಾವಸಾಹೇಬ ಪಾಟೀಲ ಅವರ ಪುತ್ರರಾದ ಅಭಿನಂದನ ಪಾಟೀಲ ಹಾಗೂ ಉತ್ತಮ ಪಾಟೀಲ ಅವರಿಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಧೈರ್ಯ ತುಂಬಿದರು.ಕೆಪಿಸಿಸಿ ಕಾರ್ಯದರ್ಶಿ ಸುನೀಲ ಹನಮನ್ನವರ, ಮಾಜಿ ಸಚಿವ ವೀರಕುಮಾರ ಪಾಟೀಲ, ಮಾಜಿ ಶಾಸಕ ಕಾಕಾಸಾಹೇಬ್ ಪಾಟೀಲ, ಬುಡಾ ಅಧ್ಯಕ್ಷ ಲಕ್ಷಣರಾವ್ ಚಿಂಗಳೆ, ಸಚಿವರ ಅಪ್ತ ಸಹಾಯಕ ಕಿರಣ ರಜಪೂತ, ಪಂಕಜ ಪಾಟೀಲ ಸೇರಿದಂತೆ ಕಾಂಗ್ರೆಸ್ ಮುಖಂಡರು ಇದ್ದರು.
ಜೈನ ಸಮಾಜದ ಪ್ರತಿಷ್ಠೆ ಎಂದು ಪರಿಗಣಿಸಲಾಗಿದ್ದ ದಕ್ಷಿಣ ಭಾರತದ ಜೈನ ಸಭಾದ ಅಧ್ಯಕ್ಷರಾಗಿ ರಾವಸಾಹೇಬ ಪಾಟೀಲ ಕಳೆದ ನಾಲ್ಕು ದಶಕಗಳಿಂದ ಕಾರ್ಯನಿರ್ವಹಿಸುತ್ತಿದ್ದರು. ಸಮಾಜದ ಪ್ರತಿ ಮಗು ಉನ್ನತ ಶಿಕ್ಷಣ ಪಡೆಯಲು ವಿದ್ಯಾರ್ಥಿ ವೇತನ ಯೋಜನೆ ಕೈಗೊಂಡಿದ್ದರು. ಈ ಮೂಲಕ ಅನೇಕ ಜನರು ಶಿಕ್ಷಣ ಪಡೆದುಕೊಂಡಿದ್ದಾರೆ. ಬಡವರು ಆರೋಗ್ಯ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ರಾವಸಾಹೇಬ ಪಾಟೀಲ ಕಾರ್ಯ ಶ್ಲಾಘನೀಯ.-ಸತೀಶ ಜಾರಕಿಹೊಳಿ,
ಸಚಿವ.