ಕೂಡ್ಲಿಗಿ: ಪರಿಸರ ಅಸಮತೋಲನದಿಂದ ಪ್ರಸುತ್ತ ಹಲವು ಸಮಸ್ಯೆ ಎದರಿಸಬೇಕಾದ ಅನಿವಾರ್ಯತೆ ಇದೆ. ಇದಕ್ಕೆ ಪ್ರತಿಯಾಗಿ ಪ್ರತಿಯೊಬ್ಬರೂ ಒಂದು ಗಿಡ ನೆಡುವ ಮೂಲಕ ಪ್ರಕೃತಿಯ ಸಂರಕ್ಷಣೆಗೆ ಕೈಜೋಡಿಸಬೇಕೆಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.
ತಾಲೂಕಿನ ಚಿಕ್ಕಜೋಗಿಹಳ್ಳಿಯಲ್ಲಿ ಶುಕ್ರವಾರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಅಮ್ಮನಿಗಾಗಿ ಒಂದು ಗಿಡ ಎಂಬ ಅಭಿಯಾನಕ್ಕೆ ಗಿಡ ನೆಡುವ ಮೂಲಕ ಚಾಲನೆ ನೀಡಿ, ನಂತರ ನಡೆದ ವೇದಿಕೆಯಲ್ಲಿ ಅವರು ಮಾತನಾಡಿದರು.ಸಾವಿರ ಮಕ್ಕಳಿಂದ ಸಾವಿರ ಗಿಡಗಳನ್ನು ಹಾಕಿದ್ದು ಐತಿಹಾಸಿಕ ಕ್ಷಣವಾಗಿದೆ. ವಿಜಯನಗರ ಸಾಮ್ರಾಜ್ಯ ಕಟ್ಟಿದ್ದ ಈ ನೆಲದಲ್ಲಿ ಮಿಯಾವಾಕಿ ಕಾಡು ಕೃಷಿಕ ಡಾ.ಆರ್.ಕೆ. ನಾಯರ್ ನೇತೃತ್ವದಲ್ಲಿ ಹಸಿರು ಮೂಡಿಸುವ ಪ್ರಯತ್ನವಾಗಿ ೨ ವರ್ಷದಲ್ಲಿ ೧ ಲಕ್ಷ ಗಿಡಗಳನ್ನು ನೆಡುವ ಗುರಿ ಹೊಂದಲಾಗಿದೆ. ಪ್ರತಿದಿನವು ಒಬ್ಬೊಬ್ಬರು ಸಸಿ ನೆಡಿ ಎಂದು ಪ್ರಧಾನಿ ಹೇಳುತ್ತಾರೆ. ಕೃಷಿಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಪ್ರತಿ ಕಾರ್ಯಕ್ರಮದಲ್ಲೂ ಸಸಿಗಳನ್ನು ನೆಡುತ್ತಾರೆಂದು ಸ್ಮರಿಸಿದರು.
ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಮಾತನಾಡಿ, ತಾಲೂಕಿನಲ್ಲಿ ಶೇ.೮೦ರಷ್ಟು ಭೂಮಿ ಇದ್ದು, ಗುಳೆ ಹೋಗುವುದನ್ನು ತಪ್ಪಿಸುವ ಮೂಲ ಆಶಯದಿಂದ ಕಾಡು ಕೃಷಿಗೆ ಆದ್ಯತೆ ನೀಡಲಾಗಿದೆ. ಪರಿಸರ ಉಳಿಸಲು ಎಲ್ಲರೂ ಕಟಿಬದ್ಧರಾಗಬೇಕು. ತಾಲೂಕಿನಲ್ಲಿ ೧ ಸಾವಿರ ಎಕರೆಯಷ್ಟು ಅರಣ್ಯ ಮಾಡುವ ಮೂಲಕ ಪ್ರಪಂಚದಲ್ಲೇ ದೊಡ್ಡ ಕಾಡು ಮಾಡಬೇಕಿದೆ. ತಾಲೂಕಿಗೆ ತಾಯಿ ಪ್ರೀತಿ ನೀಡಿದ ಸಚಿವೆಗೆ ಋಣಿಯಾಗಿರುವೆ. ರಾಜ್ಯ ಸರ್ಕಾರವು ೫೦ ಎಕರೆ ಜಾಗದಲ್ಲಿ ಕೃಷಿ ವಿಜ್ಞಾನ ಕೇಂದ್ರಕ್ಕೆ ಅನುಮೋದನೆ ನೀಡಿದೆ. ಕೇಂದ್ರ ಸರ್ಕಾರದಿಂದ ಕೃಷಿ ವಿಜ್ಞಾನ ಕೇಂದ್ರಕ್ಕೆ ಅನುಮೋದನೆ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸಚಿವರಲ್ಲಿ ಮನವಿ ಮಾಡಿದರು.ಗ್ರೀನ್ ಹೀರೋ ಆಫ್ ಇಂಡಿಯಾದ ಡಾ.ಆರ್.ಕೆ. ನಾಯರ್ ಮಾತನಾಡಿ, ಸಾವಯವ ಕೃಷಿ ಯೋಜನೆ ಮೂಲಕ ಪ್ರಕೃತಿಯ ಸಂರಕ್ಷಣೆ ಮಾಡಬೇಕಿದೆ. ರಾಸಾಯನಿಕ ಕೃಷಿಯಿಂದ ಭೂಮಿ ಹಾಳಾಗಿದೆ. ಭೂಮಿಯು ಅಮ್ಮನಂತೆ ಎಲ್ಲವನ್ನೂ ಕೊಟ್ಟಿದೆ. ಕಾಡು ಕೃಷಿಯಿಂದ ಸೂಕ್ಷ್ಮಾಣು ಜೀವಿಗಳಿಗೆ ಅನುಕೂಲವಾಗಲಿದೆ. ೩-೪ ಕಂಪನಿಗಳು ಕೂಡ್ಲಿಗಿಗೆ ಬರುವಂತಾಗಲು ಈ ಯೋಜನೆ ರೂಪಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಚಿವರು ಐದು ಸ್ವಹಾಯ ಸಂಘಗಳಿಗೆ ತಲಾ ₹೫ ಲಕ್ಷ ಚೆಕ್ ವಿತರಿಸಿದರು. ಆರಂಭದಲ್ಲಿ ನೆರೆದ ಜನಸಮೂಹಕ್ಕೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕನ್ನಡದಲ್ಲಿ ಪರಿಸರ ದಿನಾಚರಣೆ ಶುಭಾಶಯ ಕೋರಿದರು. ನಂತರ ಗ್ರಾಪಂ ಕಚೇರಿಗೆ ತೆರಳಿ ಅಲ್ಲಿ ಸ್ವ ಸಹಾಯ ಸಂಘದ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿದರು.
ವೇದಿಕೆಯಲ್ಲಿ ವಿಜಯ್ ರಂಜನ್ ಸಿಂಗ್, ಎಸ್‌ಬಿಐನ ರಾಜ್ಯ ಮುಖ್ಯ ಜನರಲ್ ಮ್ಯಾನೇಜರ್ ಜೂಲಿ ಸ್ಮೀತಾ ಸಿನ್ಹಾ, ಹಣಕಾಸು ಇಲಾಖೆಯ ಅನಿರುದ್ಧ ಶ್ರವಣ್, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಪಂ ಸಿಇಒ ನೊಂಗ್ಜಾಯ್ ಮಹಮ್ಮದ್ ಅಕ್ರಮ್ ಅಲಿ ಷಾ, ಎಸ್ಪಿ ಎಸ್.ಜಾಹ್ನವಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಅನುಪಮಾ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಗುಂಡುಮುಣಗು ಕೆ.ತಿಪ್ಪೇಸ್ವಾಮಿ, ಎಪಿಎಂಸಿ ಅಧ್ಯಕ್ಷ ಬೋಸಯ್ಯ ಆಯುಕ್ತ ವಿವೇಕಾನಂದ ತಹಸೀಲ್ದಾರ್ ವಿ.ಕೆ.ನೇತ್ರಾವತಿ, ಬಿಇಒ ಮೈಲೇಶ್ ಬೇವೂರ್, ತಾಪಂ ಇಒ ನರಸಪ್ಪ, ಬಿಸಿಎಂ ಅಧಿಕಾರಿ ಶ್ಯಾಮಪ್ಪ, ತೋಟಗಾರಿಕಾ ಅಧಿಕಾರಿ ಕುಬೇರಾಚಾರಿ ಇದ್ದರು.