ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆ ಮಾಡಿ

| Published : Jun 06 2024, 12:33 AM IST

ಸಾರಾಂಶ

ಪರಿಸರವನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಗೀತಾಂಜಲಿ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ ಪರಿಸರವನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಗೀತಾಂಜಲಿ ಹೇಳಿದರು. ನಗರದ ನ್ಯಾಯಾಲಯದ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಗಿಡನೆಡುವ ಮೂಲಕ ಪರಿಸರ ದಿನ ಆಚರಿಸಿ ಮಾತನಾಡಿದರು.

ಮಾನವನು ಪ್ರಕೃತಿಯಿಂದ ಎಲ್ಲವನ್ನು ವರದಾನವಾಗಿ ಪಡೆದಿದ್ದಾನೆ. ಅಭಿವೃದ್ಧಿ ಹೆಸರಿನಲ್ಲಿ ಇಂದು ಪ್ರಕೃತಿಯನ್ನು ನಾಶವಾಗುತ್ತಿದೆ. ಅರಣ್ಯ ನಾಶದಿಂದಾಗಿ ಪ್ರಾಣಿಗಳೆಲ್ಲ ನಗರದತ್ತ ಬರುತ್ತಿವೆ. ಆದ್ದರಿಂದ ಪರಿಸರ ಸಂರಕ್ಷಣೆ ಮಾಡುವ ಕೆಲಸ ಪ್ರತಿಯೊಬ್ಬರದ್ದಾಗಬೇಕು ಎಂದರು. ವಲಯ ಅರಣ್ಯಾಧಿಕಾರಿ ನವನೀತ್ ಮಾತನಾಡಿ, ಕಾಡು ಬೆಳೆಸಿ, ನಾಡು ಉಳಿಸಿ, ಪರಿಸರ ಸಂರಕ್ಷಣೆ, ಅರಣ್ಯ ಸಂಪತ್ತು ಉಳಿಸಿ, ಎಂಬುದು ಕೇವಲ ಘೋಷಣೆಗೆ ಸೀಮಿತವಾಗಬಾರದು. ಎಲ್ಲರೂ ತಮ್ಮ ಮನೆಯ ಸುತ್ತಮುತ್ತಲಿನಲ್ಲಿ ಒಂದೊಂದು ಗಿಡಗಳನ್ನು ಬೆಳೆಸಿ, ಸಂರಕ್ಷಿಸಬೇಕು. ಆಗ ಮಾತ್ರ ಪರಿಸರ ಸಂರಕ್ಷಣೆ ಸಾಧ್ಯ ಎಂದರು. ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎಚ್. ಗುರುಮೂರ್ತಿ ಗೌಡ ಮಾತನಾಡಿ, ಈ ಹಿಂದೆ ಇದ್ದ ಅರಣ್ಯ, ಹೊಲ ಗದ್ದೆಗಳು ಕಣ್ಮರೆಯಾಗಲು ಮೂಲ ಕಾರಣ ಅತಿಯಾದ ನಗರೀಕರಣವಾಗಿದೆ. ಹಾಗೆಂದು ನಗರೀಕರಣ ತಪ್ಪೆಂದಲ್ಲ. ಬದಲಾಗಿ ಪ್ರಾಕೃತಿಕ ಸಂಪನ್ಮೂಲ ಉಳಿಸುವ ಜತೆಗೆ ಅಭಿವೃದ್ಧಿಗೆ ಒತ್ತು ನೀಡಬೇಕು. ಆದ್ದರಿಂದ ಪರಿಸರ ಸಂರಕ್ಷಣೆಗೆ ಎಲ್ಲರೂ ಕೈಜೋಡಿಸಿ ಎಂದರು. ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ಎಚ್.ಪಿ.ಧರಣೇಶ್ ಗೌಡ, ವಕೀಲರಾದ ಬಿ.ಆರ್.ರಾಮಕೃಷ್ಣ, ಬಿ.ಸಿ.ರಾಜಣ್ಣ, ರವೀಶ್ ಹಾಜರಿದ್ದರು.