ಪ್ರತಿಯೊಬ್ಬರೂ ಆರೋಗ್ಯದ ಕಾಳಜಿ‌ ವಹಿಸಿ

| Published : Oct 31 2025, 02:45 AM IST

ಸಾರಾಂಶ

ಸುತ್ತಲಿನ ವಾತಾವರಣದ ಸ್ವಚ್ಛತೆ, ನೈರ್ಮಲ್ಯ ಕಾಪಾಡುವ ಜತೆಗೆ ಶುದ್ಧ ನೀರು, ಪೌಷ್ಟಿಕ ಆಹಾರ‌‌ ಸೇವಿಸಬೇಕು

ಯಲಬುರ್ಗಾ: ಪ್ರತಿಯೊಬ್ಬರೂ ಆರೋಗ್ಯದ ಕಾಳಜಿ‌ ವಹಿಸಬೇಕು ಎಂದು ಆಡಳಿತ ವೈದ್ಯಾಧಿಕಾರಿ ಡಾ. ದಯಾನಂದಸ್ವಾಮಿ ಹೇಳಿದರು.

ತಾಲೂಕಿನ ಯಡ್ಡೋಣಿ ಗ್ರಾಮದಲ್ಲಿ ಆರೋಗ್ಯ ಇಲಾಖೆ ಹಾಗೂ ಜನಪದ ಕಲಾ ತಂಡದಿಂದ ಆಯೋಜಿಸಿದ್ದ ಸಾಂಕ್ರಾಮಿಕ ಹಾಗೂ ಅಸಾಂಕ್ರಾಮಿಕ ರೋಗಗಳ ನಿಯಂತ್ರಣ ಮತ್ತು ಬಾಲ್ಯ ವಿವಾಹದಿಂದಾಗುವ ದುಷ್ಪರಿಣಾಮಗಳ ಕುರಿತ ಜಾಗೃತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಸುತ್ತಲಿನ ವಾತಾವರಣದ ಸ್ವಚ್ಛತೆ, ನೈರ್ಮಲ್ಯ ಕಾಪಾಡುವ ಜತೆಗೆ ಶುದ್ಧ ನೀರು, ಪೌಷ್ಟಿಕ ಆಹಾರ‌‌ ಸೇವಿಸಬೇಕು. ಇದರಿಂದ ಯಾವುದೇ ರೋಗ ರುಜಿನ ಹತ್ತಿರ ಸುಳಿಯುವುದಿಲ್ಲ. ಸಾರ್ವಜನಿಕರಲ್ಲಿ ಯಾವುದೇ ಆರೋಗ್ಯ ತೊಂದರೆ‌ ಕಂಡು ಬಂದರೆ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದರು.

ಗ್ರಾಮೀಣ ಪ್ರದೇಶಗಳಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಮದುವೆ ಮಾಡುವುದು ಕಂಡು ಬಂದರೆ ತಕ್ಷಣ ಸಂಬಂಧಿಸಿದ ಇಲಾಖೆಗೆ‌ ಮಾಹಿತಿ ನೀಡಬೇಕು. ಅಲ್ಲದೆ ಬಾಲ್ಯ ವಿವಾಹದಿಂದ ಮಕ್ಕಳ ಮೇಲಾಗುವ ದುಷ್ಪರಿಣಾಮಗಳ ಕುರಿತು ಸಮುದಾಯಕ್ಕೆ ಜಾಗ್ರತೆ ಮೂಡಿಸಬೇಕು. ಬಾಲ್ಯ ವಿವಾಹ ತಡೆಗಟ್ಟುವಲ್ಲಿ ಸಮಾಜದ ಜವಾಬ್ದಾರಿ ಸಾಕಷ್ಟಿದೆ‌ ಎಂದರು.

ಈ ಸಂದರ್ಭ ಆರೋಗ್ಯ ನಿರೀಕ್ಷಣಾಧಿಕಾರಿ ಮಲ್ಲಯ್ಯ, ಆಶಾ ಕಾರ್ಯಕರ್ತೆಯರಾದ ಕಮಲಾಕ್ಷಿ ಹಿರೇಮಠ, ರೇಣುಕಾ ಬಡಗಿ, ಅಂಗನವಾಡಿ ಕಾರ್ಯಕರ್ತೆಯರಾದ ಹನುಮಕ್ಕ ಗುನ್ನಾಳ, ಪದ್ಮಾ ಹಿರೇವಂಕಲಾಕುಂಟಾ ಹಾಗೂ ಗ್ರಾಮದ ಗಣ್ಯರು ಸೇರಿದಂತೆ ಇತರರು ಇದ್ದರು.