ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್
ಜಾತಿ, ಧರ್ಮ, ಪಕ್ಷ, ಪರಿವಾರಕ್ಕೆ ತೋರಿಸುವಂಥ ಪ್ರೀತಿ, ಕಾಳಜಿ, ಉತ್ಸಾಹವನ್ನು ಇಂದು ಪ್ರತಿಯೊಬ್ಬರು ದೇಶದ ಏಕತೆ ಮತ್ತು ಅಖಂಡತೆಗೆ ತೋರಿಸಬೇಕಿದೆ. ದೇಶದ ಹಿತ ಮತ್ತು ರಕ್ಷಣೆಗೆ ಸಂಕಲ್ಪ ಮಾಡಬೇಕು. ದೇಶಕ್ಕಾಗಿ ಪ್ರತಿಯೊಬ್ಬ ದೇಶ ವಾಸಿಯೂ ಸೈನಿಕರಂತೆ ದುಡಿಯಲು, ಮಡಿಯಲು ಸನ್ನದ್ಧರಾಗುವ ಅಗತ್ಯವಿದೆ ಎಂದು ಜೈ ಭಾರತ ಮಾತಾ ಸೇವಾ ಸಮಿತಿ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷ ಸದ್ಗುರು ಹವಾ ಮಲ್ಲಿನಾಥ ಮಹಾರಾಜ (ನಿರಗುಡಿ ಮುತ್ತ್ಯಾ) ಕರೆ ನೀಡಿದರು.ಜೈ ಭಾರತ ಮಾತಾ ಸೇವಾ ಸಮಿತಿಯಿಂದ ಶುಕ್ರವಾರ ಬೀದರ್- ಭಾಲ್ಕಿ ರಸ್ತೆ ವರ್ತುಲ ರಸ್ತೆ ತಿರುವಿನ ಬಳಿ ಹಮ್ಮಿಕೊಂಡ ಕಾರ್ಗಿಲ್ ವಿಜಯ್ ದಿವಸ್ ಹಾಗೂ ನಿವೃತ್ತ ಸೈನಿಕರ ಗೌರವ ಸನ್ಮಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಸಂದೇಶ ನೀಡಿದ ಅವರು, ದೇಶವೇ ನಮ್ಮ ಮನೆಯಾಗಬೇಕು. ದೇಶಕ್ಕೇ ಎಲ್ಲರೂ ಮೊದಲು ಪೂಜಿಸಬೇಕು. ದೇಶ ಉಳಿದರೆ ಮಾತ್ರ ನಮ್ಮ ಸಂವಿಧಾನ, ಜಾತಿ, ಧರ್ಮ, ಪಕ್ಷ, ಪರಿವಾರ ಎಲ್ಲವೂ ಉಳಿಯುತ್ತದೆ. ದೇಶ ಉಳಿಯದಿದ್ದರೆ ಯಾವುದೂ ಉಳಿಯಲ್ಲ ಎಂದು ಎಚ್ಚರಿಸಿದರು.
ಹಿರಿಯ ಪತ್ರಕರ್ತ ಸದಾನಂದ ಜೋಶಿ ಮಾತನಾಡಿ, ಜಾತಿ, ಮತ, ಪಂಥ ಎನ್ನದೇ ದೇಶ ಮೊದಲು, ರಾಷ್ಟ್ರಧರ್ಮವೇ ಸರ್ವ ಶ್ರೇಷ್ಠ ಎಂದು ಕೆಲಸ ಮಾಡುತ್ತಿರುವ ಹವಾ ಮಲ್ಲಿನಾಥ ಮಹಾರಾಜರು ಅಪರೂಪದ ರಾಷ್ಟ್ರ ಸಂತರಾಗಿದ್ದಾರೆ. ದೇಶದ ಹಿತ ಮತ್ತು ದೇಶದ ಅಸ್ತಿತ್ವಕ್ಕೆ ಧಕ್ಕೆ ತರುವಂಥ ಕುಕೃತ್ಯಗಳು ನಡೆಯುತ್ತಿರುವ ಇಂದಿನ ದಿನಮಾನದಲ್ಲಿ ಧರ್ಮ ಗುರುಗಳು ದೇಶದ ಉಳಿವಿಗಾಗಿ ಸಮಾಜಕ್ಕೆ ಉತ್ತಮ ಮಾರ್ಗದರ್ಶನ ಮಾಡುವ ಅಗತ್ಯವಿದೆ. ಧರ್ಮ ಗುರುಗಳು ಸಹ ಜಾತಿ ಜಂಜಾಟದಲ್ಲಿ ದೇಶ ಮರೆತರೆ ಆಪತ್ತು ತಪ್ಪಿದ್ದಲ್ಲ ಎಂದು ಎಚ್ಚರಿಸಿದರು.ಜೈ ಭಾರತ ಮಾತಾ ಸೇವಾ ಸಮಿತಿ ರಾಷ್ಟ್ರೀಯ ವಕ್ತಾರ ವೈಜಿನಾಥ ಝಳಕಿ ಮಾತನಾಡಿಹವಾ ಮಲ್ಲಿನಾಥ ಮಹಾರಾಜರು, ದೇಶಾದ್ಯಂತ 3 ಸಾವಿರಕ್ಕೂ ಹೆಚ್ಚು ಮಠ ಹೊಂದಿದ್ದರೂ ಯಾವುದೇ ಮಠ, ಪೀಠಕ್ಕೆ ಅಂಟಿಕೊಳ್ಳದೆ ದೇಶ ಸೇವೆಯಲ್ಲಿ ತೊಡಗಿದ್ದಾರೆ ಎಂದು ಹೇಳಿದರು.ನಿವೃತ್ತ ಸೈನಿಕರಿಗೆ ಗೌರವ ಸನ್ಮಾನ:
ಕಾರ್ಯಕ್ರಮದಲ್ಲಿ ಜಿಲ್ಲೆಯ ನಿವೃತ್ತ ಯೋಧರಿಗೆ ಗೌರವ ಸನ್ಮಾನ ನೀಡಿ, ಅವರ ಸೇವೆಗೆ ನಮಸ್ಕರಿಸಲಾಯಿತು. ನಿವೃತ್ತ ಸೈನಿಕರಾದ ನಾಗನಾಥ ಮೇತ್ರೆ, ಅಶೋಕರಾವ್ ಮದಕಟ್ಟಿ, ಶಂಕರರಾವ್ ತೇಲಂಗ, ಅನೀಲ ಮೇತ್ರೆ, ಸುಧಾಕರ ಕುಲಕರ್ಣಿ, ಚಂದ್ರಕಾಂತ ಚಂದನಕೇರೆ, ಅಮೋಲ್ ಕುಲಕರ್ಣಿ, ಷಣ್ಮುಖಯ್ಯ ಸ್ವಾಮಿ, ಮಲ್ಲಿಕಾರ್ಜುನ ಭರಶೆಟ್ಟಿಗೆ ಹವಾ ಮಲ್ಲಿನಾಥ ಮಹಾರಾಜರು ಸತ್ಕರಿಸಿ ಆಶೀರ್ವದಿಸಿದರು. ಸಮಿತಿ ಹಿರಿಯರಾದ ನಿವೃತ್ತ ಪೊಲೀಸ್ ಅಧಿಕಾರಿ ಗುರುಸಿದ್ದಪ್ಪ ಬೆನಕನಳ್ಳಿ, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷರೆಡ್ಡಿ ಆಣದೂರ, ಜೆಡಿಎಸ್ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಜಾಫೆಟ್ ರಾಜ್ ಕಡ್ಯಾಳ್, ಪ್ರಮುಖರಾದ ವೀರೇಶ ಸ್ವಾಮಿ, ವಿಷ್ಣು, ಶರಣು ಪಾಟೀಲ್, ಪುಷ್ಪಕ್ ಜಾಧವ್ ಇತರರಿದ್ದರು.ಸಮಿತಿ ಭಾಲ್ಕಿ ತಾಲೂಕು ಅಧ್ಯಕ್ಷ ಪಪ್ಪು ಪಾಟೀಲ್ ಖಾನಾಪುರ ಸ್ವಾಗತಿಸಿ, ವಂದಿಸಿದರು. ಕಾರ್ಯಕ್ರಮಕ್ಕೂ ಮುನ್ನ ಸಿಕ್ಕಿಂನಲ್ಲಿ ಹುತಾತ್ಮರಾದ ಕಮಲನಗರ ತಾಲೂಕಿನ ಕರ‍್ಯಾಳ ಗ್ರಾಮದ ಯೋಧ ಅನೀಲ ಅವರ ಆತ್ಮಕ್ಕೆ ಶಾಂತಿಕೋರಿ ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಕೋಟ್:ಕಾರ್ಗಿಲ್ ವಿಜಯೋತ್ಸವ ದೇಶದ ಪ್ರತಿಯೊಬ್ಬರ ವಿಜಯೋತ್ಸವ. ರಾಷ್ಟ್ರವನ್ನು ರಕ್ಷಿಸಲು ಸರ್ವಸ್ವ ತ್ಯಾಗ, ಬಲಿದಾನ ಮಾಡುವ ಸೈನಿಕರ ಬಗ್ಗೆ ಎಲ್ಲರಿಗೂ ಹೆಮ್ಮೆ, ಗೌರವ, ಅಭಿಮಾನ ಇರಬೇಕು. ನಾವು ದೇಶವನ್ನು ರಕ್ಷಿಸಿದರೆ, ದೇಶ ನಮ್ಮನ್ನು ರಕ್ಷಿಸುತ್ತದೆ. ನಿಸರ್ಗ ನಿಯಮ, ಸರ್ವಧರ್ಮ ಸಮಭಾವ ಮತ್ತು ಸಂವಿಧಾನದ ಸಿದ್ಧಾಂತ ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಿದರೆ ಸಶಕ್ತ, ವಿಶ್ವಗುರು ಭಾರತ ನಿರ್ಮಾಣ ಸಾಧ್ಯ.- ಹವಾ ಮಲ್ಲಿನಾಥ ಮಹಾರಾಜ, ಜೈ ಭಾರತ ಮಾತಾ ಸೇವಾ ಸಮಿತಿ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷರು.