ಕನ್ನಡ ಉಳಿಸಲು ಪಣ ತೊಡಬೇಕು: ಚಂದ್ರಶೇಖರ ವಸ್ತ್ರದ

| Published : Jan 21 2025, 12:31 AM IST

ಸಾರಾಂಶ

ಗ್ರಾಮೀಣ ಕೈಗಾರಿಕೋದ್ಯಮದಲ್ಲಿ ಜಾನಪದ, ಶಿಲ್ಪಕಲೆ ಬಿತ್ತರಿಸುವ ಕೆಲಸ ಆಗಬೇಕಿದೆ. ವಿಶೇಷವಾಗಿ ಜಾನಪದವನ್ನು ವಾಣಿಜ್ಯೀಕರಣ ಮಾಡಬೇಕಿದೆ ಎಂದು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಚಂದ್ರಶೇಖರ ವಸ್ತ್ರದ ಹೇಳಿದರು.

ಗದಗ: ಕನ್ನಡ ನಾಡಿನಲ್ಲಿಯೇ ಕನ್ನಡ ನಶಿಸುತ್ತಿದೆ. ಕನ್ನಡ ಮಾಧ್ಯಮ ಶಾಲೆಗಳು ಬಂದ್ ಆಗುತ್ತಿದ್ದು, ಅವುಗಳನ್ನು ಉಳಿಸಲು ಎಲ್ಲರೂ ಪಣ ತೊಡಬೇಕು ಎಂದು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಚಂದ್ರಶೇಖರ ವಸ್ತ್ರದ ಹೇಳಿದರು.

ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಸರ್ವಾಧ್ಯಕ್ಷ ಭಾಷಣ ಮಾಡಿದ ಅವರು, ಕಾಸರಗೋಡು ಕೇರಳ ಪಾಲಾಯಿತು. ಬೆಳಗಾವಿ ಬೀದರಿನಲ್ಲಿ ಮರಾಠಿ ಭಾಷೆ ಹೆಚ್ಚುತ್ತಿದೆ. ರಾಯಚೂರು ತೆಲುಗು ಭಾಷಿಕರ ಪಾಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಗ್ರಾಮೀಣ ಕೈಗಾರಿಕೋದ್ಯಮದಲ್ಲಿ ಜಾನಪದ, ಶಿಲ್ಪಕಲೆ ಬಿತ್ತರಿಸುವ ಕೆಲಸ ಆಗಬೇಕಿದೆ. ವಿಶೇಷವಾಗಿ ಜಾನಪದವನ್ನು ವಾಣಿಜ್ಯೀಕರಣ ಮಾಡಬೇಕಿದೆ. ಜಾನಪದ ವಿಶ್ವವಿದ್ಯಾಲಯ, ಶಿಕ್ಷಣ ಸಂಸ್ಥೆಗಳಲ್ಲಿ ಇದ್ದರೆ ಅದು ಬೆಳೆಯುವುದಿಲ್ಲ. ಜಾನಪದಗಳು ಕಲಾವಿದರಿಂದ ಮಾತ್ರ ಬೆಳೆಯಲು ಸಾಧ್ಯ. ಗದಗ ಜಿಲ್ಲೆ ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ. ಕರ್ನಾಟಕ ಏಕೀಕರಣ ಸೇರಿದಂತೆ ನಾಡು-ನುಡಿಗಾಗಿ ಸಾಕಷ್ಟು ಶ್ರಮಿಸಿದ್ದಾರೆ. ಐತಿಹಾಸಿಕ ಬೆಲೂರಿನ ಶಿಲಾ ಬಾಲಿಕೆಯಲ್ಲಿ ಒಂದು ಶಿಲೆಯನ್ನು ಕೆತ್ತಿದವರು ಗದಗ ಜಿಲ್ಲೆಯವರು ಎಂದು ನಾಡಿನ ಶಿಲ್ಪಕಲೆಗಳ ಬಗ್ಗೆ ಅವರು ವಿವರಿಸಿದರು. ಜಿಲ್ಲೆಯಲ್ಲಿ ಚಾಮರಸನ ಬಗ್ಗೆ ಸಂಶೋಧನೆ ನಡೆಯಲಿಲ್ಲ. ಚೆನ್ನವೀರ ಕಣವಿ ಅವರ ಸ್ಮಾರಕ, ಅಂದಾನಪ್ಪ ದೊಡ್ಡಮೇಟಿ ಅವರ ಸ್ಮಾರಕ ಸ್ಥಾಪನೆ ಇನ್ನೂ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳನ್ನು ಅನುಷ್ಠಾನ ಮಾಡಲು ಸರ್ಕಾರ ಸ್ಪಷ್ಟ ನಿಲುವು ತಾಳಬೇಕು ಎಂದು ಒತ್ತಾಯಿಸಿದರು.

ಸರ್ವಾಧ್ಯಕ್ಷರ ಆಗ್ರಹಗಳು:

ಸಾಹಿತಿ, ಸಂಗೀತಗಾರ, ಕಲಾವಿದರ ಅಭಿವೃದ್ಧಿಗೆ ಜಿಲ್ಲೆಯಲ್ಲಿ ಅಕಾಡೆಮಿ ಸ್ಥಾಪನೆ.

ರೈತ-ಗ್ರಾಹಕರಿಗೆ ಅನುಕೂಲ ಆಗಲು ಗದಗನಲ್ಲಿ ''ಶನಿವಾರ ಸಂತೆ'' ಸ್ಥಾಪನೆ

ಕಪ್ಪತಗುಡ್ಡ ರಕ್ಷಣೆಗೆ ಒಕ್ಕೊರಲಿನ ನಿರ್ಣಯ.

ಜಿಲ್ಲೆಯ ಎಲ್ಲ ಐತಿಹಾಸಿಕ ಸ್ಥಳಗಳ ಉತ್ಖನನಕ್ಕೆ ಆಗ್ರಹ.

ಜಿಲ್ಲೆಯ ನೀರಾವರಿ ಯೋಜನೆಗಳಿಗೆ ವೇಗ.

ಸರ್ಕಾರಿ ಶಾಲೆಗಳಿಗೆ ಶಿಕ್ಷಕರ ನೇಮಕ, ಮೂಲಭೂತ ಸೌಕರ್ಯ ಒದಗಿಸುವುದು.