ಸಾರಾಂಶ
ಯಲಬುರ್ಗಾ: ಕುಷ್ಟರೋಗ ನಿರ್ಮೂಲನೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಮುಖ್ಯ ವೈದ್ಯಾಧಿಕಾರಿ ಕೃಷ್ಣಾ ಹೊಟ್ಟಿ ಹೇಳಿದರು.ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ಇಲಾಖೆಯಿಂದ ಆಯೋಜಿಸಿದ್ದ ಕುಷ್ಟರೋಗ ಪತ್ತೆ ಹಚ್ಚುವ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕುಷ್ಟರೋಗಿಗಳನ್ನು ಪತ್ತೆ ಹಚ್ಚುವ ಉದ್ದೇಶದಿಂದ ಜ.೧೧ರವರೆಗೂ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.ಕುಷ್ಟರೋಗ ಮುಕ್ತ ಮಾಡುವ ಸಂಕಲ್ಪ ಹಿನ್ನೆಲೆಯಲ್ಲಿ ಶಂಕಿತರನ್ನು ಪತ್ತೆ ಹಚ್ಚಲು ಸ್ಥಳೀಯ ಮಟ್ಟದ ಆಶಾ ಕಾರ್ಯಕರ್ತೆಯರಿಗೆ ಹೆಚ್ಚಿನ ಜವಾಬ್ದಾರಿ ನೀಡಲಾಗಿದೆ. ಕುಷ್ಟರೋಗದ ಲಕ್ಷಣಗಳು ಕಂಡು ಬಂದರೆ ತಕ್ಷಣವೇ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದುಕೊಳ್ಳಲು ಮುಂದಾಗಬೇಕು. ಜನರ ಆರೋಗ್ಯ ಕಾಪಾಡುವ ಉದ್ದೇಶದಿಂದ ಇಲಾಖೆ ವಿನೂತನ ಕಾರ್ಯಕ್ರಮಗಳನ್ನು ಜಾರಿಗೆ ತಂದು ಆರೋಗ್ಯವಂತ ಸಮಾಜ ನಿರ್ಮಿಸುವಲ್ಲಿ ಎಲ್ಲರೂ ಶ್ರಮಿಸಬೇಕು ಎಂದು ಹೇಳಿದರು.ಆರೋಗ್ಯ ರಕ್ಷಾ ಸಮಿತಿಯ ಸದಸ್ಯ ಪ್ರಕಾಶ ಛಲವಾದಿ, ಸಹಾಯಕ ಆಡಳಿತಾಧಿಕಾರಿ ಚಂದ್ರಶೇಖರ ಅಣ್ಣಿಗೇರಿ, ಕುಷ್ಟರೋಗ ನಿರ್ಮೂಲನಾ ಮೇಲ್ವಿಚಾರಕ ರಾಜಶೇಖರ, ಸಮಾಲೋಚಕ ಶರಣಪ್ಪ ಉಪ್ಪಾರ, ಆರೋಗ್ಯ ಸಹಾಯಕಿಯರಾದ ಶ್ರೀದೇವಿ, ಶಿಲ್ಪಾ ಭಜಂತ್ರಿ, ಆಶಾ ಕಾರ್ಯಕರ್ತೆಯರು ಮತ್ತಿತರರು ಇದ್ದರು.