ಸಾಧಕ ಆಧ್ಯಾತ್ಮವಾದಿಯಾದರೆ ಎಲ್ಲ ಸಾಧಿಸಬಹುದು: ಮೂರುಸಾವಿರಮಠದ ಶ್ರೀ

| Published : Feb 18 2024, 01:41 AM IST / Updated: Feb 18 2024, 04:05 PM IST

Photo
ಸಾಧಕ ಆಧ್ಯಾತ್ಮವಾದಿಯಾದರೆ ಎಲ್ಲ ಸಾಧಿಸಬಹುದು: ಮೂರುಸಾವಿರಮಠದ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಒಬ್ಬ ಸಾಧಕ ಆಧ್ಯಾತ್ಮವಾದಿಯಾದರೆ, ಅದರಲ್ಲಿ ಆಸಕ್ತಿ ತಾಳಿ ಆಳಕ್ಕೆ ಇಳಿದರೆ ಏನೆಲ್ಲ ಸಾಧಿಸಬಲ್ಲ.

ಕನ್ನಡಪ್ರಭ ವಾರ್ತೆ ಹಿರೇಕೆರೂರು

ಒಬ್ಬ ಸಾಧಕ ಆಧ್ಯಾತ್ಮವಾದಿಯಾದರೆ, ಅದರಲ್ಲಿ ಆಸಕ್ತಿ ತಾಳಿ ಆಳಕ್ಕೆ ಇಳಿದರೆ ಏನೆಲ್ಲ ಸಾಧಿಸಬಲ್ಲ. ಇದಕ್ಕೆ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ಉದಾಹರಣೆಯಾಗಿ ಒಂದು ಗುಡ್ಡವನ್ನು ಸುಕ್ಷೇತ್ರವನ್ನಾಗಿ ಪರಿವರ್ತಿಸಿದ್ದಾರೆ ಎಂದು ಹುಬ್ಬಳ್ಳಿ ಮೂರುಸಾವಿರಮಠದ ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.

ತಾಲೂಕಿನ ಚನ್ನಳ್ಳಿ ಸಮೀಪದ ಕಡೇನಂದಿಹಳ್ಳಿ ಶ್ರೀ ಗುರು ರೇವಣಸಿದ್ಧೇಶ್ವರ ಪುಣ್ಯಾಶ್ರಮದಲ್ಲಿ ಜರುಗಿದ ಧರ್ಮ ಸಮಾರಂಭದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

೫೯ ವರ್ಷಗಳ ನಂತರ ಶ್ರೀ ಜಗದ್ಗುರು ರೇಣುಕ ವಿಜಯ ಪುರಾಣವನ್ನು ಇಂದು ಕೇಳಿ ಸಂತೋಷವಾಯಿತು. ತಮ್ಮ ಬಾಲ್ಯದಲ್ಲಿ ಕೇಳುತ್ತಿದ್ದ ರೇಣುಕರ ಪುರಾಣ ಪ್ರವಚನದ ಫಲವಾಗಿ ಉತ್ತಮ ಸಂಸ್ಕಾರ ದೊರೆಯಿತು. ಅದರ ಫಲವಾಗಿ ಜಗದ್ಗುರುತ್ವ ಪ್ರಾಪ್ತಿಯಾಯಿತು. ಶ್ರೀ ಆದಿ ಜಗದ್ಗುರು ರೇಣುಕಾಚಾರ್ಯರು ಮಹಾನ್ ಕ್ರಿಯಾಯೋಗ ಸಿದ್ಧರಾಗಿದ್ದರು. ಗಗನಗಾಮಿಗಳಾಗಿ ಸಂಚರಿಸಿ ಭಕ್ತರಿಗೆ ಭಕ್ತಿ ಮಾರ್ಗ ಬೋಧಿಸಿದರು. ತ್ರಿಕಾಲ ಜ್ಞಾನಿ ಯೋಗಿ ಪುಂಗವರಾಗಿದ್ದರು. ಅಂತಹ ಶ್ರೀ ಜಗದ್ಗುರು ರೇಣುಕಾಚಾರ್ಯರ ೩೬ಅಡಿ ಎತ್ತರದ ಮೂರ್ತಿ ನೋಡಿ ಸಂತಸವಾಗಿದೆ ಎಂದರು.

ಕಡೇನಂದಿಹಳ್ಳಿ ರೇವಣಸಿದ್ಧೇಶ್ವರ ಶ್ರೀಗಳು ಶ್ರೇಷ್ಠ ಸಾಧಕರಾಗಿ ಮಠವನ್ನು ಕಟ್ಟಿ ಭಕ್ತರಲ್ಲಿ ಆಧ್ಯಾತ್ಮ ಜ್ಞಾನವನ್ನು ಬೆಳೆಸುತ್ತಿದ್ದಾರೆ. ನಯ ವಿನಯವಂತರಾಗಿರುವ ಅವರು ಇಂದು ವೀರಶೈವ ಧರ್ಮದ ಗುರು-ವಿರಕ್ತರನ್ನು ಸಮನ್ವಯಗೊಳಿಸುವುದರಲ್ಲಿಯೂ ಶ್ರಮಿಸುತ್ತಿದ್ದಾರೆ ಎಂದರು.

ನೇತೃತ್ವ ವಹಿಸಿದ್ದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ, ರಟ್ಟಿಹಳ್ಳಿ ಕಬ್ಬಿಣಕಂಥಿಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಹಿರೇಮಾಗಡಿ ಶಿವಮೂರ್ತಿ ಮುರುಘರಾಜೇಂದ್ರ ಸ್ವಾಮೀಜಿ ಪಾಲ್ಗೊಂಡು ಉಪದೇಶಾಮೃತ ನೀಡಿದರು.

ಹಾರನಹಳ್ಳಿ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ಕಡೆನಂದಿಹಳ್ಳಿ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಶಿರಾಳಕೊಪ್ಪದ ಸಿದ್ಧೇಶ್ವರ ಸ್ವಾಮೀಜಿ, ಹಿರೇಮಾಗಡಿ ಶಿವಯೋಗಿ ದೇವರು ಉಪಸ್ಥಿತರಿದ್ದರು.

ನಂತರ ಚಿಕ್ಕಬೆಂಡಿಗೆರಿ ಶ್ರೀ ರೇವಣಸಿದ್ಧೇಶ್ವರ ದೊಡ್ಡಾಟ ಮಂಡಳಿಯವರು ಕುರುಕ್ಷೇತ್ರ ಅರ್ಥಾರ್ಥ ಭೀಮ ದುರ್ಯೋಧನರ ಗದಾಯುದ್ಧ ನಾಟಕ ಪ್ರದರ್ಶನ ಮಾಡಿದರು.