ಸಾರಾಂಶ
- ಕೆಪಿಎಸ್ ಪ್ರೌಢ ಶಾಲೆಯಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆಯಿಂದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಕ್ಷಣಿಕ ಸುಖಕ್ಕಾಗಿ ಕಲಿತ ದುಶ್ಚಟಗಳು ಜೀವನ ಪರ್ಯಂತ ನಮ್ಮ ಜೊತೆಯಲ್ಲೇ ಇರುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರ ಇರಬೇಕು ಎಂದು ಜಿಲ್ಲಾ ಜನ ಜಾಗೃತಿ ವೇದಿಕೆ ಅಧ್ಯಕ್ಷ ಅರವಿಂದ ಸೋಮಯಾಜಿ ತಿಳಿಸಿದರು.
ಶುಕ್ರವಾರ ಕರ್ನಾಟಕ ಪಬ್ಲಿಕ್ ಸ್ಕೂಲಿನ ಪ್ರೌಢ ಶಾಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಜಿಲ್ಲಾ ಜನ ಜಾಗೃತಿ ವೇದಿಕೆ ಹಾಗೂ ರಾಷ್ಟೀಯ ಸೇವಾ ಯೋಜನೆ ಸಂಯುಕ್ತ ಆಶ್ರಯದಲ್ಲಿ ನಡೆದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇಂದಿನ ಯುವ ಜನರು ಮಾದಕ ವಸ್ತುಗಳ ಸೇವನೆ, ಮದ್ಯಪಾನದಂತಹ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಇಂತಹ ಕೆಟ್ಟ ಅಭ್ಯಾಸಗಳಿಗೆ ಮನಸ್ಸು ಕೊಡದೆ ಸದೃಡ ದೇಶ ಕಟ್ಟಲು ಯುವ ಜನರು ಮುಂದಾಗ ಬೇಕು. ಇತ್ತೀಚಿನ ವರ್ಷಗಳಲ್ಲಿ ಮದ್ಯ ವ್ಯಸನಿಗಳ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ಗಮನಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗಡೆ ಇದರ ನಿರ್ಮೂಲನೆಗಾಗಿ ಮದ್ಯವರ್ಜನ ಶಿಬಿರಗಳನ್ನು ನಿರಂತರವಾಗಿ ಆಯೋಜಿಸುತ್ತಿದ್ದಾರೆ. ಯುವ ಜನರು ಮನಸ್ಸು ಮಾಡಿದರೆ ಮದ್ಯದಂಗಡಿಗಳನ್ನೇ ಮುಚ್ಚಬಹುದು. ಯುವ ಜನರಿಂದ ಮಾತ್ರ ದೇಶದಲ್ಲಿ ಬದಲಾವಣೆ ತರಲು ಸಾಧ್ಯ ಎಂದರು.ವಿದ್ಯಾರ್ಥಿಗಳು ಶಾಲಾ ಹಂತದಲ್ಲೇ ಉತ್ತಮ ಅಭ್ಯಾಸ ಬೆಳೆಸಿಕೊಳ್ಳಬೇಕು. ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬಾಳಿ ಇತರರಿಗೆ ಮಾದರಿಯಾಗಬೇಕು. ದುಶ್ಚಟಗಳಿಂದಾಗುವ ಪರಿಣಾಮ, ಪ್ರಕೃತಿ ನಾಶದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳು ಮನನ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಮಾದಕ ವಸ್ತುಗಳ ವ್ಯಸನ ಜಾಗತಿಕ ಸಮಸ್ಯೆಯಾಗಿದೆ. ಇದು ಭಯೋತ್ಪಾದನೆಯಷ್ಟೇಅಪಾಯಾಕಾರಿಯಾಗಿ ಬೆಳೆಯುತ್ತಿದೆ. ಮಾದಕ ವಸ್ತುಗಳ ಮಾರಾಟ ಜಾಲ ವಿದ್ಯಾರ್ಥಿಗಳನ್ನೇ ಗುರಿಯಾಗಿಸಿಕೊಂಡಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲೇ ಇಂತಹ ಜಾಲ ಇದೆ ಎಂಬ ಮಾಹಿತಿ ಲಭ್ಯವಾಗಿದ್ದು ವಿದ್ಯಾರ್ಥಿಗಳು ಜಾಗ್ರತೆಯಾಗಿರಬೇಕು ಎಂದು ಸಲಹೆ ನೀಡಿದರು.ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯೆ ಭಾಗ್ಯ ನಂಜುಂಡಸ್ವಾಮಿ ಮಾತನಾಡಿ, ಧ.ಗ್ರಾ.ಯೋಜನೆಯ ಜಿಲ್ಲಾ ಜನ ಜಾಗೃತಿ ವೇದಿಕೆ ಮುಖಾಂತರ ವಿದ್ಯಾರ್ಥಿಗಳಲ್ಲಿ ದುಶ್ಚಟಗಳ ವಿರುದ್ದ ಜಾಗೃತಿ ಮೂಡಿಸುವ ಸ್ತಾಸ್ಥ್ಯಸಂಕಲ್ಪ ಕಾರ್ಯಕ್ರಮ ನಾಡಿನಾದ್ಯಂತ ಹಮ್ಮಿಕೊಳ್ಳಲಾಗಿದೆ. ಉತ್ತಮ ಆರೋಗ್ಯವಿದ್ದರೆ ಜೀವನದಲ್ಲಿ ಏನು ಬೇಕಾದರೂ ಸಾಧನೆ ಮಾಡ ಬಹುದು. ಯುವಕರು ದುಶ್ಚಟಗಳಿಗೆ ಬಲಿಯಾಗಬಾರದು.ಮಕ್ಕಳು ಉತ್ತಮ ನಡವಳಿಕೆ ಕಲಿಯಬೇಕು. ಚಿಕ್ಕ ವಯಸ್ಸಿ ನಿಂದಲೆ ಉ್ತತಮ ಸಂಸ್ಕಾರ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಅತಿಥಿಗಳಾಗಿ ಶಾಲೆ ಮುಖ್ಯ ಶಿಕ್ಷಕ ರುದ್ರಪ್ಪ, ಧ.ಗ್ರಾ.ಯೋಜನೆ ನರಸಿಂಹರಾಜಪುರ ವಲಯ ಮೇಲ್ವೀಚಾರಕ ಸಿದ್ದ ಲಿಂಗಪ್ಪ, ವಿಪತ್ತು ನಿರ್ವಹಣಾ ಘಟಕದ ಸದಸ್ಯ ವೀರಭದ್ರ, ಶಾಲಾ ಶಿಕ್ಷಕ ವಿಜು, ಸೇವಾ ಪ್ರತಿನಿಧಿಗಳಾದ ವಿಮಲ,ವೀಣಾ, ಬಿಷಾ ಇದ್ದರು.