ಮಾಜಿ ಸಚಿವ ಇಕ್ಬಾಲ್‌ ಅನ್ಸಾರಿ ಸಿಟ್ಟು ಶಮನಕ್ಕೆ ಯತ್ನ

| Published : Feb 27 2024, 01:31 AM IST

ಸಾರಾಂಶ

ತನ್ನ ಸೋಲಿಗೆ ಕಾಂಗ್ರೆಸ್ ಪಕ್ಷದ ಕೆಲ ಮುಖಂಡರೇ ಕಾರಣ. ಇಂಥವರನ್ನು ಪಕ್ಷದಿಂದ ಆಚೆ ಹಾಕಬೇಕು ಎಂದಿದ್ದ ಇಕ್ಬಾಲ್ ಅನ್ಸಾರಿ ಅವರು ತಪ್ಪು ಮಾಡಿದವರಿಗೆ ಶಿಕ್ಷೆಯಾಗಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ.

ಕೊಪ್ಪಳ: ಸೋಲಿನಿಂದ ಕೆಂಡಾಮಂಡಲರಾಗಿರುವ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಈಗ ಸಿಡಿದೆದ್ದು ನಿಂತಿದ್ದಾರೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಈಗ ಇವರ ಸಿಟ್ಟು ಶಮನ ಮಾಡಲು ಕಾಂಗ್ರೆಸ್ ಮುಖಂಡರು ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ.

ತನ್ನ ಸೋಲಿಗೆ ಕಾಂಗ್ರೆಸ್ ಪಕ್ಷದ ಕೆಲ ಮುಖಂಡರೇ ಕಾರಣ. ಇಂಥವರನ್ನು ಪಕ್ಷದಿಂದ ಆಚೆ ಹಾಕಬೇಕು ಎಂದಿದ್ದ ಇಕ್ಬಾಲ್ ಅನ್ಸಾರಿ ಅವರು ತಪ್ಪು ಮಾಡಿದವರಿಗೆ ಶಿಕ್ಷೆಯಾಗಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ. ಪಕ್ಷದ ಅಧಿಕೃತ ಕಾರ್ಯಕ್ರಮಕ್ಕೆ ತನ್ನ ಬೆಂಬಲಿಗರು ಹೋಗದಂತೆ ಮನವಿ ಮಾಡುವ ಮೂಲಕ ಸೆಡ್ಡು ಹೊಡೆದಿದ್ದರು. ಇದನ್ನು ತಣ್ಣಗಾಗಿಸಲು ಜಿಲ್ಲಾ ಉಸ್ತುವಾರಿ ಹಾಗೂ ಪಕ್ಷದ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ, ಶಾಸಕ ರಾಘವೇಂದ್ರ ಹಿಟ್ನಾಳ, ರಾಜಶೇಖರ ಹಿಟ್ನಾಳ ಕಳೆದ ಎರಡು ದಿನಗಳಿಂದ ಪ್ರಯತ್ನಿಸುತ್ತಿದ್ದಾರೆ.

ಖುದ್ದು ಇಕ್ಬಾಲ್ ಅನ್ಸಾರಿಗೆ ಕರೆ ಮಾಡಿ, ತಪ್ಪಾಗಿದ್ದರೆ ಸರಿಪಡಿಸೋಣ. ಈ ರೀತಿಯ ಬಹಿರಂಗ ಹೇಳಿಕೆ ನಿಮಗೂ ಸಲ್ಲದು ಮತ್ತು ಪಕ್ಷಕ್ಕೂ ಪೆಟ್ಟು. ಯಾವುದೇ ಕಾರಣಕ್ಕೂ ಈ ರೀತಿ ಮುನಿಸಿಕೊಳ್ಳುವುದನ್ನು ನಿಲ್ಲಿಸಿ, ನಿಮ್ಮ ಜೊತೆಗೆ ನಾವಿದ್ದೇವೆ, ಪಕ್ಷದಲ್ಲಿ ಹಾಗೂ ಸರ್ಕಾರದಲ್ಲಿ ನಿಮಗೆ ಸೂಕ್ತ ಸ್ಥಾನಮಾನ ಕೊಡಿಸುವ ಪ್ರಯತ್ನ ಮಾಡುತ್ತೇವೆ ಎಂದೆಲ್ಲ ಸಮುಜಾಯಿಷಿ ನೀಡಿದ್ದಾರೆ.

ಕೊಪ್ಪಳದಲ್ಲಿ ಪಕ್ಷದ ಸಭೆ ಕರೆದಿರುವುದು ಗ್ಯಾರಂಟಿ ಯೋಜನೆ ಸಮಿತಿಯ ಪೂರ್ವಭಾವಿ ಸಭೆ. ಅವರು ಕೊಪ್ಪಳ ವಿಧಾನಸಭಾ ಕ್ಷೇತ್ರದ ಸಭೆ ಕರೆಯುವ ಬದಲಾಗಿ ಕೊಪ್ಪಳ ತಾಲೂಕು ವ್ಯಾಪ್ತಿಯ ಸಭೆ ಕರೆದಿದ್ದಾರೆ. ಇದರಲ್ಲಿ ತಪ್ಪಾಗಿದ್ದು, ಅದನ್ನು ಸರಿಪಡಿಸಲು ಸೂಚಿಸಲಾಗಿದೆ.

ಕೊಪ್ಪಳ ತಾಲೂಕಿನಲ್ಲಿ ಗಂಗಾವತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಹಳ್ಳಿಗಳಿವೆ. ಅಲ್ಲಿಯ ಯಾವೊಬ್ಬ ನಾಯಕರಿಗೂ ಸಭೆಗೆ ಆಹ್ವಾನಿಸಿಲ್ಲ ಎಂದು ಪರಿಪರಿಯಾಗಿ ತಿಳಿಹೇಳುವ ಪ್ರಯತ್ನ ಮಾಡಲಾಗಿದೆ. ಆದರೂ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಇನ್ನು ತಣ್ಣಗಾಗಿಲ್ಲ ಎನ್ನಲಾಗಿದೆ.

ಸಿಎಂ ಅಂಗಳಕ್ಕೆ:

ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಮುನಿಸು ಈಗ ಸಿಎಂ ಸಿದ್ದರಾಮಯ್ಯ ಅವರಿಗೂ ತಲುಪಿದೆ. ಅನ್ಸಾರಿ ಮುನಿಸಿಕೊಂಡಿದ್ದ ಮಾಹಿತಿ ನೀಡಲಾಗಿದೆ. ಆಯಿತು ನೋಡೋಣ ಎಂದಷ್ಟೇ ಹೇಳಿದ್ದಾರೆ ಎನ್ನಲಾಗಿದೆ. ನೀವೇ ಅಲ್ಲಿಯೇ ಸರಿ ಮಾಡಿಕೊಳ್ಳಿ ಎಂದು ಸಹ ಸೂಚನೆ ನೀಡಿದ್ದಾರೆಯೇ ಹೊರತು ಇಕ್ಬಾಲ್ ಅನ್ಸಾರಿ ಜತೆ ನಾನೇ ಮಾತನಾಡುತ್ತೇನೆ ಎಂದು ಹೇಳಿಲ್ಲವಂತೆ. ಇದರಿಂದ ಸ್ಥಳೀಯ ನಾಯಕರ ಹೆಗಲಿಗೇ ಬಿದ್ದಂತೆ ಆಗಿದೆ ಇಕ್ಬಾಲ್ ಅನ್ಸಾರಿ ವಿವಾದ.

ಹಿಟ್ನಾಳ ಕುಟುಂಬದ ಮೇಲೆ ಸಿಟ್ಟು?

ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಸಿಟ್ಟು ನೇರವಾಗಿ ಹಿಟ್ನಾಳ ಕುಟುಂಬದ ಮೇಲೆ ಎನ್ನುವುದು ಸ್ಪಷ್ಟ. ಇದಕ್ಕೆ ಕಾರಣ ಇಲ್ಲದಿಲ್ಲ. ಹನುಮಂತಪ್ಪ ಅರಸಿಕೇರಿ ಅನ್ಸಾರಿ ವಿರುದ್ಧ ಅಸಮಾಧಾನಗೊಂಡಾಗ ಅದನ್ನು ತಡೆಯುವ ಶಕ್ತಿ ಇದ್ದರೂ ಹಿಟ್ನಾಳ ಕುಟುಂಬ ಅಷ್ಟಾಗಿ ಆಸಕ್ತಿ ವಹಿಸಲಿಲ್ಲ. ಚುನಾವಣೆಗೂ ಮುನ್ನ ಮೇಲ್ನೋಟಕ್ಕೆ ರಾಜಿ ಮಾಡಿದ್ದರೂ ಹನುಮಂತಪ್ಪ ಅರಸಿಕೇರಿ ಹಾಗೂ ಆತನ ಸಹಚರರು ಪರೋಕ್ಷವಾಗಿ ಕೆಆರ್‌ಪಿಪಿ ಪಕ್ಷದ ಪರವಾಗಿ ಕೆಲಸ ಮಾಡಿದ್ದಾರೆ ಎನ್ನುವ ಗಂಭೀರ ಆರೋಪ ಅನ್ಸಾರಿ ಅವರದ್ದು.ಅನ್ಸಾರಿ ಮುನಿಸು, ರೆಡ್ಡಿ ಒಲವು:ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಮುನಿಸಿಕೊಂಡ ಬೆನ್ನಲ್ಲೇ ಅವರ ಕಡುವೈರಿ ಶಾಸಕ ಹಾಗೂ ಕೆಆರ್‌ಪಿಪಿ ಸಂಸ್ಥಾಪಕ ಅಧ್ಯಕ್ಷ ಗಾಲಿ ಜನಾರ್ದನ ರೆಡ್ಡಿ ಕಾಂಗ್ರೆಸ್ ಪಕ್ಷದತ್ತ ಮೃದು ಧೋರಣೆ ತೋರುತ್ತಿರುವುದು ಅಚ್ಚರಿಯ ಬೆಳವಣಿಗೆಯಾಗಿದೆ.ಇತ್ತ ಕಾಂಗ್ರೆಸ್ ಮುಖಂಡರ ವಿರುದ್ಧ ಅನ್ಸಾರಿ ಹರಿಹಾಯ್ದ ಬೆನ್ನಲ್ಲೇ ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ ಅವರನ್ನು ರೆಡ್ಡಿ ಭೇಟಿಯಾಗಿ, ರಾಜ್ಯಸಭಾ ಚುನಾವಣೆಗೆ ಬೆಂಬಲ ಸೂಚಿಸಿರುವುದು ಒಂದಕ್ಕೊಂದು ತಾಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗುಸು ಗುಸು ಚರ್ಚೆಗೆ ಇಂಬು ನೀಡಿದೆ.