ಗ್ಯಾಸ್ ಸೋರಿಕೆಯಿಂದ ಬೆಂಕಿ ಹೊತ್ತಿಕೊಂಡು ಮನೆ ಸಂಪೂರ್ಣವಾಗಿ ಬೆಂದು ಹೋಗಿದೆ. ಈ ಮನೆಯಲ್ಲಿ ಇಬ್ಬರು ಹೆಣ್ಣು ಮಕ್ಕಳು ಬದುಕು ಸಾಗಿಸುತ್ತಿದ್ದು, ಘಟನೆಯಿಂದ ಪಾತ್ರೆ ಸೇರಿದಂತೆ ಗೃಹಪಯೋಗಿ ವಸ್ತುಗಳೆಲ್ಲ ಸುಟ್ಟು ಕರಕಲಾಗಿದೆ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಗ್ಯಾಸ್ ಸೋರಿಕೆಯಿಂದ ಮನೆ ಸೇರಿ ಅಗತ್ಯ ವಸ್ತುಗಳು ಸಂಪೂರ್ಣ ಸುಟ್ಟು ಹೋಗಿದ್ದ ಹಿನ್ನೆಲೆಯಲ್ಲಿ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ತಾಲೂಕಿನ ಬೆಳಗೊಳ ಗ್ರಾಮಕ್ಕೆ ಭೇಟಿ ನೀಡಿ ಸಂತ್ರಸ್ಥರಿಗೆ ಧೈರ್ಯ ತುಂಬಿ ವೈಯಕ್ತಿಕ ಧನ ಸಹಾಯ ಮಾಡಿದರು.ಗ್ರಾಮದ ಬಲಮುರಿ ರಸ್ತೆಯ ಗೌರಮ್ಮರಿಗೆ ಸೇರಿದ ಮನೆಯಲ್ಲಿ ಪುತ್ರ ರಾಜು ಹಾಗೂ ಅವರ ಸೊಸೆ ಆಶ್ವಿನಿ ವಾಸವಾಗಿದ್ದರು. ಗಂಡ- ಹೆಂಡತಿ ಇಬ್ಬರೂ ಕೂಲಿ ಕೆಲಸಕ್ಕೆ ಹೋಗಿದ್ದ ವೇಳೆ ಗುರುವಾರ ಬೆಳಗ್ಗೆ ಮನೆಯಲ್ಲಿದ್ದ ಗ್ಯಾಸ್ ಸೋರಿಕೆಯಾಗಿ ಮನೆ ಹಾಗೂ ಮನೆಯಲ್ಲಿದ್ದ ವಸ್ತುಗಳು ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿತ್ತು.
ವಿಷಯ ತಿಳಿದ ರವೀಂದ್ರ ಶ್ರೀಕಂಠಯ್ಯ ಶುಕ್ರವಾರ ಬೆಳಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮನೆ ಹಾಗೂ ಮನೆಯಲ್ಲಿದ್ದ ವಸ್ತುಗಳು ಸಂಪೂರ್ಣ ಹಾನಿಯಾಗಿರುವುದನ್ನು ಕಂಡು ಮರುಕ ವ್ಯಕ್ತಪಡಿಸಿದರು. ಅಲ್ಲದೆ ಘಟನೆಯಿಂದ ಪಕ್ಕದ ಕುಮಾರ್ ಅವರ ಮನೆಯ ಗೋಡೆ ಹಾಗೂ ಮೇಲ್ಚಾವಣಿ ಸಹ ಹಾನಿಯಾಗಿದ್ದನ್ನು ಗಮನಿಸಿ ಅವರಿಗೂ ಸಹ ವೈಯಕ್ತಿಕ ಧನ ಸಹಾಯ ಮಾಡಿ, ರಿಪೇರಿ ಮಾಡಿಸಿಕೊಳ್ಳುವಂತೆ ತಿಳಿಸಿದರು.ನಂತರ ತಹಸೀಲ್ದಾರ್, ತಾ.ಪಂ ಇಒ ಹಾಗೂ ಸ್ಥಳೀಯ ಗ್ರಾ.ಪಂ ಅಧಿಕಾರಿಗಳಿಗೆ ಸ್ಥಳದಲ್ಲೇ ಕರೆ ಮಾಡಿ ಮಾನವೀಯತೆ ದೃಷ್ಟಿಯಿಂದ ಗೌರಮ್ಮ ಅವರ ಕುಟುಂಬಕ್ಕೆ ಆಶ್ರಯ ಯೋಜನೆಯಡಿ ಒಂದೆರಡು ದಿನಗಳಲ್ಲಿ ಅವರಿಗೆ ಮನೆ ಮಂಜೂರು ಮಾಡಿಕೊಡುವಂತೆ ಒತ್ತಾಯಿಸಿದರು.
ಬಳಿಕ ರವೀಂದ್ರ ಶ್ರೀಕಂಠಯ್ಯ ಮಾತನಾಡಿ, ಗ್ಯಾಸ್ ಸೋರಿಕೆಯಿಂದ ಬೆಂಕಿ ಹೊತ್ತಿಕೊಂಡು ಮನೆ ಸಂಪೂರ್ಣವಾಗಿ ಬೆಂದು ಹೋಗಿದೆ. ಈ ಮನೆಯಲ್ಲಿ ಇಬ್ಬರು ಹೆಣ್ಣು ಮಕ್ಕಳು ಬದುಕು ಸಾಗಿಸುತ್ತಿದ್ದು, ಘಟನೆಯಿಂದ ಪಾತ್ರೆ ಸೇರಿದಂತೆ ಗೃಹಪಯೋಗಿ ವಸ್ತುಗಳೆಲ್ಲ ಸುಟ್ಟು ಕರಕಲಾಗಿದೆ.ಈ ಘಟನೆಯಿಂದ ಮನೆ ಜನ ಸಂಪೂರ್ಣವಾಗಿ ಬೀದಿಗೆ ಬಂದಿರುವುದು ನನ್ನ ಮನಸ್ಸಿಗೆ ತುಂಬಾ ನೋವುಂಟಾಗಿದೆ. ಇಂತಹ ಘಟನೆಗಳು ಸಂಭವಿಸಿದ್ದಲ್ಲಿ ಆಶ್ರಯ ಯೋಜನೆಯಡಿ ಮನೆ ನಿರ್ಮಿಸಿಕೊಡುವ ಅವಕಾಶವಿದೆ. ತಾಲೂಕು ಆಡಳಿತ ಶೀಘ್ರ ವ್ಯವಸ್ಥೆ ಕಲ್ಪಿಸಿಕೊಡುವಂತೆ ಒತ್ತಾಯಿಸಿರುವುದಾಗಿ ತಿಳಿಸಿದರು.
ನಂತರ ಅದೇ ಗ್ರಾಮದ ಚೌಡೇಗೌಡರ ಮನೆಯಲ್ಲಿ ಇತ್ತೀಚೆಗೆ ಅಡುಗೆ ಕುಕ್ಕರ್ ಸ್ಪೋಟದಿಂದಾಗಿ ಮೇಲ್ಛಾವಣಿ ಕುಸಿದು, ಜಖಂಗೊಂಡಿದ್ದ ಮನೆಗೂ ಬೇಟಿ ನೀಡಿ ಧೈರ್ಯ ಹೇಳಿ ವೈಯಕ್ತಿಕ ಧನ ಸಹಾಯ ಮಾಡಿ ಮಾನವೀಯತೆ ಮೆರೆದರು.ಈ ವೇಳೆ ಗ್ರಾಮದ ಮುಖಂಡರಾದ ಬಿ.ವಿ ಲೋಕೇಶ್, ವಾಸು, ಸಂತೋಷ್ ಗ್ರಾ.ಪಂ ಸದಸ್ಯ ಪ್ರಕಾಶ್, ದೇವರಾಜ, ಗುಣ, ಹೇಮಂತ್, ನಂದೀಶ್ ಸೇರಿದಂತೆ ಇತರರು ಜೊತೆಯಲ್ಲಿದ್ದರು.