ಮುಡಾ ಮಾಜಿ ಆಯುಕ್ತ ನಟೇಶ್‌ಗೆ 7 ತಾಸು ಲೋಕಾ ವಿಚಾರಣೆ

| Published : Nov 20 2024, 12:35 AM IST

ಸಾರಾಂಶ

ಮುಡಾ ಮಾಜಿ ಆಯುಕ್ತ ಡಾ.ಡಿ.ಬಿ. ನಟೇಶ್ ಅವರನ್ನು ಲೋಕಯುಕ್ತ ಪೊಲೀಸರು ಸತತ 7 ಗಂಟೆಗಳ ಕಾಲ ವಿಚಾರಣೆ ನಡೆಸಿದರು.

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆ ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿರುವ ಮೈಸೂರು ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು, ಮುಡಾ ಮಾಜಿ ಆಯುಕ್ತ ಡಾ.ಡಿ.ಬಿ. ನಟೇಶ್ ಅವರನ್ನು ಮಂಗಳವಾರ ಸತತ 7 ಗಂಟೆ ವಿಚಾರಣೆ ನಡೆಸಿದರು.

ಮುಡಾ ಹಗರಣ ಸಂಬಂಧ ಈಗಾಗಲೇ ಇಡಿ ವಿಚಾರಣೆ ಎದುರಿಸಿದ್ದ ಡಾ.ಡಿ.ಬಿ. ನಟೇಶ್‌, ಲೋಕಾಯುಕ್ತ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದರಿಂದ ಮಂಗಳವಾರ ಮೈಸೂರು ಲೋಕಾಯುಕ್ತ ಎಸ್ಪಿ ಕಚೇರಿಗೆ ಹಾಜರಾಗಿ ವಿಚಾರಣೆ ಎದುರಿಸಿದರು.

ಬೆಳಗ್ಗೆಯಿಂದ ಸಂಜೆಯವರಗೆಗೆ ಸತತ 7 ಗಂಟೆಗಳ ಕಾಲ ಡಾ. ನಟೇಶ್ ಅವರನ್ನು ಲೋಕಾಯುಕ್ತ ಪೊಲೀಸರು ವಿಚಾರ ನಡೆಸಿ, ಪ್ರಕರಣ ಸಂಬಂಧ ಮಾಹಿತಿ ಕಲೆ ಹಾಕಿದರು. ಮುಡಾದಲ್ಲಿ ಬದಲಿ ನಿವೇಶನಗಳ ಹಂಚಿಕೆ ನಿರ್ಣಯ, ವಿಜಯನಗರದಲ್ಲೇ ನಿವೇಶನಗಳ ಹಂಚಿಕೆ ಹಾಗೂ ಅದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬದ ಪ್ರಭಾವ ಕುರಿತು ಅಧಿಕಾರಿಗಳ ತಂಡವು ಹಲವು ಪ್ರಶ್ನೆಗಳನ್ನು ಕೇಳಿದ್ದು, ಪ್ರತಿಯೋಂದಕ್ಕೂ ಡಾ. ನಟೇಶ್‌ ತಾವು ಕೈಗೊಂಡ ಕ್ರಮದ ಬಗ್ಗೆ ಲಿಖಿತ ದಾಖಲೆಗಳೊಂದಿಗೆ ಮಾಹಿತಿ ನೀಡಿದರು.

ಕಚೇರಿಗೆ ಪ್ರವೇಶಿಸುವಾಗ ದೃಶ್ಯ ಮಾಧ್ಯಮದವರು ವೀಡಿಯೋ ಚಿತ್ರೀಕರಣಕ್ಕೆ ಮುಂದಾಗುತ್ತಿದ್ದಂತೆ ಗರಂ ಆದ ಡಾ.ಡಿ.ಬಿ. ನಟೇಶ್ ಅವರು,‘ನಾನೇನು ಡ್ಯಾನ್ಸ್ ಮಾಡುತ್ತಾ ಇದ್ದೇನೆಯೇ? ಎಂದು ಕೂಗಾಡಿದರು.

ಲೋಕಾಯುಕ್ತ ಎಸ್ಪಿ ಕಚೇರಿಗೆ ಆಟೋದಲ್ಲಿ ಬೆಳಗ್ಗೆ 10.45ಕ್ಕೆ ಆಗಮಿಸಿದ ಡಾ.ಡಿ.ಬಿ.ನಟೇಶ್, ಸಂಜೆ 6.45ರವರೆಗೂ ವಿಚಾರಣೆ ಎದುರಿಸಿದರು. ಲೋಕಾಯುಕ್ತ ಎಸ್ಪಿ ಟಿ.ಜೆ. ಉದೇಶ ನೇತೃತ್ವದ ತಂಡವು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ನಟೇಶ್ ಅವರು, ಮಧ್ಯಾಹ್ನ 1.30ರ ವೇಳೆಗೆ ಹೊರ ಬಂದು, ಪಕ್ಕದಲ್ಲೇ ಇದ್ದ ಹೋಟೆಲ್‌ನಲ್ಲಿ ಊಟ ಮುಗಿಸಿ ಮತ್ತೆ ಮಧ್ಯಾಹ್ನ 2.30ಕ್ಕೆ ವಿಚಾರಣೆಗೆ ಹಾಜರಾಗಿ ಸಂಜೆ 6.45ಕ್ಕೆ ಎಸ್ಪಿ ಕಚೇರಿಯಿಂದ ಹೊರ ಬಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಬಿ.ಎಂ. ಪಾರ್ವತಿ ಅವರಿಗೆ ಮುಡಾದಿಂದ ವಿಜಯನಗರದಲ್ಲಿ 14 ಬದಲಿ ನಿವೇಶನಗಳನ್ನು ನಿಯಮ ಮೀರಿ ಹಂಚಿಕೆ ಮಾಡಿದ ಆರೋಪ ಡಾ. ನಟೇಶ್ ಅವರ ಮೇಲಿದೆ. ಈ ಸಂಬಂಧ ವಿಚಾರಣೆಗೆ ಬರುವಂತೆ ಲೋಕಾಯುಕ್ತ ಎಸ್ಪಿ ಟಿ.ಜೆ. ಉದೇಶ ನೋಟಿಸ್ ನೀಡಿದ್ದರು.ಕಚೇರಿಗೆ ಪ್ರವೇಶಿಸುವಾಗ ದೃಶ್ಯ ಮಾಧ್ಯಮದವರು ವೀಡಿಯೋ ಚಿತ್ರೀಕರಣಕ್ಕೆ ಮುಂದಾಗುತ್ತಿದ್ದಂತೆ ಗರಂ ಆದ ಡಾ.ಡಿ.ಬಿ. ನಟೇಶ್ ಅವರು,‘ನಾನೇನು ಡ್ಯಾನ್ಸ್ ಮಾಡುತ್ತಾ ಇದ್ದೇನೆಯೇ? ನಿಮಗೆ ಸ್ವಲ್ಪನೂ ಕಾಮನ್ ಸೆನ್ಸ್ ಬೇಡವೇ?, ಲೋಕಾಯುಕ್ತ ಅಧಿಕಾರಿಗಳು ವಿಚಾರಣೆಗೆ ಕರೆದಿದ್ದಾರೆ, ಹಾಜರಾಗುತ್ತಿದ್ದೇನೆ. ಇದನ್ನೇಕೆ ವೀಡಿಯೊ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದರು. ನಂತರ ಕೆಲವು ಕಡತಗಳೊಂದಿಗೆ ಕಚೇರಿಯೊಳಗೆ ತೆರಳಿದರು.