ಶಾಸಕ ಶಿವಲಿಂಗೇಗೌಡ ವಿರುದ್ಧ ಎಚ್‌.ಡಿ.ದೇವೇಗೌಡ ಕೆಂಡಾಮಂಡಲ

| Published : Mar 27 2024, 01:05 AM IST

ಸಾರಾಂಶ

ಕಾಂಗ್ರೆಸ್ ಅಭ್ಯರ್ಥಿ ಎದುರು ದೌರ್ಜನ್ಯ ತೋರಿರುವ ಪ್ರಜ್ವಲ್ ರೇವಣ್ಣ ಅವರನ್ನು ತುಳಿಯಬೇಕು ಎಂದು ಭಾಷಣ ಮಾಡಿದ ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ. ಶಿವಲಿಂಗೇಗೌಡ ವಿರುದ್ಧ ದೇವೇಗೌಡರು ಕೆಂಡಾಮಂಡಲರಾದರು.

ಕನ್ನಡಪ್ರಭ ವಾರ್ತೆ ಹಾಸನಕಾಂಗ್ರೆಸ್ ಅಭ್ಯರ್ಥಿ ಎದುರು ದೌರ್ಜನ್ಯ ತೋರಿರುವ ಪ್ರಜ್ವಲ್ ರೇವಣ್ಣ ಅವರನ್ನು ತುಳಿಯಬೇಕು ಎಂದು ಭಾಷಣ ಮಾಡಿದ ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ. ಶಿವಲಿಂಗೇಗೌಡ ವಿರುದ್ಧ ದೇವೇಗೌಡರು ಕೆಂಡಾಮಂಡಲರಾದರು.

ನಗರದ ಬಿ.ಎಂ. ರಸ್ತೆ ಬಳಿ ಇರುವ ಜ್ಞಾನಾಕ್ಷಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಎಸ್ಸಿ ಮತ್ತು ಎಸ್ಟಿ ಘಟಕದ ಸಭೆಯಲ್ಲಿ ಮೊದಲು ಅಂಬೇಡ್ಕರ್ ಬಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ನಂತರ ಜ್ಯೋತಿ ಬೆಳಗಿಸಿ ಮಾತನಾಡಿದ ಅವರು, ಈ ಬಾರಿ ಅರಸೀಕೆರೆ ತಾಲೂಕಿನಲ್ಲಿ ಸಂತೋಷ್ ಅವರು ಶಾಸಕನಾಗುವುದನ್ನು ನಾನು ಕಣ್ಣನಿಂದ ನೊಡುತ್ತೇನೆ. ನಾನೆ ಅರಸೀಕೆರೆಗೆ ಬಂದು ಪ್ರಚಾರ ಮಾಡುತ್ತೇನೆ. ನೆನ್ನೆ ಅರಸೀಕೆರೆ ಮಹಾನ್ ನಾಯಕನ ಮಾತನ್ನು ಗಮನಿಸಿದ್ದೇನೆ. ಅಂಥವರನ್ನೇ ರೇವಣ್ಣ ಬೆನ್ನಿಗೆ ಕಟ್ಟಿಕೊಂಡು ತಿರುಗಿದ. ಈಗ ಅವನ ತಲೆಗೆ ಬಂದಿದೆ ಎಂದು ಪರೋಕ್ಷವಾಗಿ ಶಿವಲಿಂಗೇಗೌಡ ವಿರುದ್ಧ ಕಿಡಿಕಾರಿದರು. ನಾನು ಈ ಚುನಾವಣೆಯಲ್ಲಿ ಮಂಡ್ಯ, ಕೊಲಾರ ಬೆಂಗಳೂರು ಗ್ರಾಂ. ಉಳಿದ ೨೪ ಕ್ಷೇತ್ರದಲ್ಲಿ ಭಾರತೀಯ ಜನತಾ ಪಾರ್ಟಿ ನಿಂತಿದೆಯೋ ಅಲ್ಲಿ ಶೋಭಾ ಕರಂದಾಜ್ಲೆ, ತುಮಕೂರು ಸೋಮಣ್ಣ. ಯಡಿಯೂರಪ್ಪನ ಮಗ ರಾಘವೇಂದ್ರ ಸೇರಿದಂತೆ ಎಲ್ಲರೂ ಹೊಗಿ ೨೮ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ಪ್ರಚಾರ ಮಾಡಲಿದ್ದಾರೆ. ನಾನು ಚುನಾವಣೆ ಪ್ರಚಾರ ನಡೆಸಿ ಹೋರಾಟ ಮಾಡುವುದಾಗಿ ತಿಳಿಸಿದರು. ಈಗಲೂ ಕೂಡ ಮಂಡ್ಯದಲ್ಲಿ ಜನರು ಕುಮಾರಸ್ವಾಮಿಯನ್ನೇ ನಿರೀಕ್ಷೆ ಮಾಡುತ್ತಿದ್ದಾರೆ ಎಂದರು.ಮಾಜಿ ಸಚಿವರಾದ ಎಚ್.ಡಿ. ರೇವಣ್ಣ ಮಾತನಾಡಿ, ಹಾಸಸ ಜಿಲ್ಲೆಯಲ್ಲಿ ನಾವು ಅಧಿಕಾರದಲ್ಲಿ ಇದ್ದ ಸಂದರ್ಭದಲ್ಲಿ ಬೋರ್‌ವೆಲ್ ಕೊರೆಸಿದೆವು. ಅವುಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಕಾಂಗ್ರೆಸ್ ಪಕ್ಷದ ಕೈಯಲ್ಲಿ ಆಗಿಲ್ಲ. ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಗೆ ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣ ಮಾಡಿಕೊಟ್ಟಿದ್ದೇನೆ. ಕಾಂಗ್ರೆಸ್ ಸರ್ಕಾರ ಅಂಬೇಡ್ಕರ್ ಸಮುದಾಯಭವನ ನಿರ್ಮಾಣ ಮಾಡಲು ಒಂದು ರುಪಾಯಿ ಕೊಟ್ಟಿಲ್ಲ. ಮೀಸಲಾತಿ ಇಲ್ಲದ ಸಮಯದಲ್ಲಿ ಬಾಲಕೃಷ್ಣ ಮೂರ್ತಿಯವರನ್ನು ಜಿ ಪಂ ಅಧ್ಯಕ್ಷರಾಗಿ ಮಾಡಿದ್ದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು. ಸಭೆಯಲ್ಲಿ ಮಾಜಿ ಸಚಿವರಾದ ಎಚ್.ಕೆ. ಕುಮಾರಸ್ವಾಮಿ, ಶಾಸಕ ಸಿ.ಎನ್. ಬಾಲಕೃಷ್ಣ, ಶಾಸಕ ಹೆಚ್.ಪಿ. ಸ್ವರೂಪ್, ಮಾಜಿ ಶಾಸಕ ಕೆ.ಎಸ್. ಲಿಂಗೇಶ್, ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್. ದ್ಯಾವೇಗೌಡ, ಜೆಡಿಎಸ್ ಮುಖಂಡರಾದ ಎನ್.ಆರ್. ಸಂತೋಷ್, ಎಸ್.ಸಿ.,ಎಸ್.ಟಿ. ರಾಜ್ಯ ಅಧ್ಯಕ್ಷರಾದ ಅನ್ನದಾನಿ, ಮಹದೇವಯ್ಯ, ಚಂಚಲ ಕುಮಾರಸ್ವಾಮಿ, ಲತಾ, ನಗರಸಭೆ ಸದಸ್ಯ ಕ್ರಾಂತಿ ಸಿ. ಪ್ರಸಾದ್ ತ್ಯಾಗಿ, ಮಂಜುನಾಥ್, ಸಯ್ಯದ್ ಅಕ್ಬರ್, ಚಂದ್ರಶೇಖರ, ರಾಮಚಂದ್ರ, ಶಿವನಂಜಪ್ಪ, ಶಿವಣ್ಣ, ಶಾರದ, ಪುರೊಷೋತ್ತಮ್, ಮಂಜೇಗೌಡ, ಹೆಚ್‌ಡಿಎಫ್‌ಸಿ. ಬ್ಯಾಂಕ್ ಅಧ್ಯಕ್ಷ ನಾಗರಾಜ್, ನಿಟ್ಟೂರು ಸ್ವಾಮಿ, ಜಿಲ್ಲಾ ಪಂಚಾಯತ್ ಜಿ.ಟಿ. ಇಂದ್ರಾ, ಕಾಮಾಕ್ಷಿ, ಗಿರೀಶ್, ಜಿಲ್ಲಾ ಜೆಡಿಎಸ್ ಎಸ್ಸಿ ಘಟಕದ ಅಧ್ಯಕ್ಷ ಕೆ.ಟಿ. ಮಂಜಯ್ಯ, ಮುಖಂಡರಾದ ಮರಿಯಪ್ಪ, ಶಿವನಂಜಪ್ಪ, ಮಂಜುನಾಥ್, ರಾಮಚಂದ್ರ, ಅರುಣ್ ಜಯರಾಂ, ಹೇಮರಾಜ್ ಇತರರು ಉಪಸ್ಥಿತರಿದ್ದರು. ಪ್ರೀತಂ ಗೌಡರ ಭಾವಚಿತ್ರ: ಎಸ್ಸಿ ಎಸ್ಟಿ ಸಭೆ ನಡೆದ ಜ್ಞಾನಾಕ್ಷಿ ಕಲ್ಯಾಣ ಮಂಟಪದ ಎದುರು ಹಾಕಲಾಗಿದ್ದ ಫ್ಲೆಕ್ಸ್ ಗಳಲ್ಲಿ ಜೆಡಿಎಸ್‌ ನಾಯಕರ ಜತೆ ಮಾಜಿ ಶಾಸಕ ಪ್ರೀತಂ ಗೌಡರ ಭಾವಚಿತ್ರವೂ ಇದೇ ಮೊದಲ ಬಾರಿಗೆ ಕಾಣಿಸಿಕೊಂಡಿದ್ದು ಅಚ್ಚರಿ ಮೂಡಿಸಿದೆ. ಮೈತ್ರಿ ನಂತರದಲ್ಲಿ ಪ್ರಜ್ವಲ್‌ ರೇವಣ್ಣ ಹಲವು ಬಿಜೆಪಿ ಮುಖಂಡರನ್ನು ಭೇಟಿ ಮಾಡಿ ನೆರವು ಕೋರಿದ್ದಾರೆ. ಆದರೆ, ಈವರೆಗೂ ಪ್ರೀತಂ ಗೌಡರನ್ನು ಮಾತ್ರ ಭೇಟಿ ಮಾಡಿಲ್ಲ. ಈ ಹಿಂದೆ ಅವರಿಬ್ಬರ ನಡುವೆ ಇದ್ದ ವಾಗ್ಯುದ್ಧ ಇದಕ್ಕೆ ಕಾರಣವಿರಬಹುದು. ಪ್ರೀತಂ ಗೌಡರ ನೆರವನ್ನೂ ಪಡೆಯಲಾಗುವುದು ಎಂದು ಪ್ರಜ್ವಲ್‌ ಹೇಳಿದ್ದರೂ ಈವರೆಗೂ ಪ್ರೀತಂ ಗೌಡರನ್ನು ಭೇಟಿಯಾಗಿಲ್ಲ. ಆದರೆ, ಇದೇ ಮೊದಲ ಬಾರಿಗೆ ಜೆಡಿಎಸ್‌ ನಾಯಕರ ಜತೆ ಪ್ರೀತಂ ಗೌಡರ ಭಾವಚಿತ್ರ ಕಾಣಿಸಿರುವುದು ಅಚ್ಚರಿಗೆ ಕಾರಣವಾಗಿದೆ.