ದೇಶದ ಗಡಿ ರಕ್ಷಣೆಯಲ್ಲಿ ಸೇವೆ ಮಾಡಿ ನಿವೃತ್ತಿ ಹೊಂದಿ ತವರಿಗೆ ಬಂದು ನಮ್ಮೊಂದಿಗಿದ್ದು, ಜನ ಸೇವೆಯಲ್ಲಿ ತೊಡಗಿರುವ ಮಹಮ್ಮದ್ ನಬಿಯಂತಹ ಮಾಜಿ ಯೋಧರ ಸಾಹಸ ನಮ್ಮ ಯುವ ಜನಾಂಗಕ್ಕೆ ಸ್ಫೂರ್ತಿಎಂದು ಕುಶಾಲನಗರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಹೇಳಿದ್ದಾರೆ.

ಕುಶಾಲನಗರ: ದೇಶದ ಗಡಿ ರಕ್ಷಣೆಯಲ್ಲಿ ಸೇವೆ ಮಾಡಿ ನಿವೃತ್ತಿ ಹೊಂದಿ ತವರಿಗೆ ಬಂದು ನಮ್ಮೊಂದಿಗಿದ್ದು, ಜನ ಸೇವೆಯಲ್ಲಿ ತೊಡಗಿರುವ ಮಹಮ್ಮದ್ ನಬಿಯಂತಹ ಮಾಜಿ ಯೋಧರ ಸಾಹಸ ನಮ್ಮ ಯುವ ಜನಾಂಗಕ್ಕೆ ಸ್ಫೂರ್ತಿಎಂದು ಕುಶಾಲನಗರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಹೇಳಿದ್ದಾರೆ.ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಕೊಡಗು ಜಿಲ್ಲಾ ಸಂಸ್ಥೆ ಹಾಗೂ ಸಂಸ್ಥೆಯ ಕುಶಾಲನಗರ ಸ್ಥಳೀಯ ಸಂಸ್ಥೆ ಹಾಗೂ ಕುಶಾಲನಗರ ಕೊಡವ ಸಮಾಜದ ಸಂಯುಕ್ತ ಆಶ್ರಯದಲ್ಲಿ ಕೊಡವ ಸಮಾಜದ ಸಭಾಂಗಣದಲ್ಲಿ 27ನೇ ಕಾರ್ಗಿಲ್ ವಿಜಯೋತ್ಸವ ಅಂಗವಾಗಿ ಕಾರ್ಗಿಲ್ ವಿಜಯದ ಕಾರ್ಯಾಚರಣೆಯ ಅನುಭವ ಕುರಿತು 1999ರಲ್ಲಿ ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾಗಿದ್ದ ನಿವೃತ್ತ ಹವಾಲ್ದಾರ್ ಕೂಡಿಗೆಯ ಮಹಮ್ಮದ್ ನಬಿ‌ ಅವರೊಂದಿಗೆ‌ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕಾರ್ಗಿಲ್ ಯುದ್ಧದ ಅವಧಿಯಲ್ಲಿ ಸೇನೆಯ ಎಂಇಜಿ ವಿಭಾಗದಲ್ಲಿ ಹವಾಲ್ದಾರ್ ಆಗಿ ಸೇವೆ ಸಲ್ಲಿಸುವ ಸಂದರ್ಭದಲ್ಲಿನ ಕಾರ್ಯಾಚರಣೆಯ ಕುರಿತು ನಿವೃತ್ತ ಹವಾಲ್ದಾರ್ ಕೂಡಿಗೆ ಮಹಮ್ಮದ್ ನಬಿ ಅನುಭವ ಹಂಚಿಕೊಂಡರು.

ಯೋಧರ ಅನುಭವ ಕುರಿತು‌ ಸ್ಕೌಟ್ಸ್, ಗೈಡ್ಸ್, ರೇಂಜರ್ ಮತ್ತು ರೋವರ್ಸ್ ತರಬೇತಿ ನಿರತ ಶಿಕ್ಷಕರು ಮತ್ತು ಉಪನ್ಯಾಸಕರು ಮಹಮ್ಮದ್ ನಬಿ ಅವರೊಂದಿಗೆ ಸಂವಾದ ನಡೆಸಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸ್ಕೌಟ್ಸ್ ನ ತರಬೇತಿ ಆಯುಕ್ತ ಕೆ.ಯು. ರಂಜಿತ್ ಮಾತನಾಡಿ, ಕಾರ್ಗಿಲ್ ವಿಜಯೋತ್ಸವವು ನಮ್ಮ ದೇಶದ ಸೈನಿಕರ ಶೌರ್ಯವನ್ನು ಪ್ರದರ್ಶಿಸುತ್ತದೆ ಎಂದರು.

ಸ್ಕೌಟ್ಸ್, ಗೈಡ್ಸ್ ನ ಕುಶಾಲನಗರ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಡಾ. ಪ್ರವೀಣ್ ದೇವರಗುಂಡ ಸೋಮಪ್ಪ, ಜಿಲ್ಲಾ ಸ್ಕೌಟ್ಸ್, ಗೈಡ್ಸ್ ನ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಟಿ.ಜಿ. ಪ್ರೇಮಕುಮಾರ್, ಜಿಲ್ಲಾ ಸಹಾಯಕ ಆಯುಕ್ತರಾದ ಸಿ.ಎಂ. ಸುಲೋಚನಾ( ಗೈಡ್ಸ್ ), ಕೆ.ಬಿ. ಗಣೇಶ್( ಸ್ಕೌಟ್ಸ್), ಜಿಲ್ಲಾ ಸಂಘಟಕಿ ಯು.ಸಿ. ದಮಯಂತಿ, ಸ್ಥಳೀಯ ಸಂಸ್ಥೆಯ ಕಾರ್ಯಾಧ್ಯಕ್ಷ ಎ.ಎಸ್. ತಮ್ಮಯ್ಯ, ಕಾರ್ಯದರ್ಶಿ ಎಂ.ಎಸ್. ಗಣೇಶ್‌, ಸಹ ಕಾರ್ಯದರ್ಶಿ ಇಂದಿರಾ ಮುತ್ತಣ್ಣ, ಖಜಾಂಚಿ ಎನ್.ಎಸ್. ನರೇಶ್ ಕುಮಾರ್ ಇದ್ದರು.