ಸಾರಾಂಶ
ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಸಕ್ತ ಸಾಲಿನ ಗ್ರಾಮ ಆಡಳಿತ ಹುದ್ದೆಗಳ ನೇರ ನೇಮಕಾತಿಗೆ ನಡೆಸಲಾಗುವ ಪರೀಕ್ಷೆಗೆ ಪೂರ್ವ ತಯಾರಿ ಸಭೆ ನಡೆಯಿತು.
ಕನ್ನಡಪ್ರಭ ವಾರ್ತೆ ಮಣಿಪಾಲ
ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಗ್ರಾಮ ಆಡಳಿತ ಹುದ್ದೆಗಳ ನೇರ ನೇಮಕಾತಿಗೆ ಅ. 26 ರಂದು ನಡೆಯುವ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ-2 ಹಾಗೂ 27 ರಂದು ನಡೆಯಲಿರುವ ಸ್ಪರ್ಧಾತ್ಮಕ ಪರೀಕ್ಷೆಗೆ ನಿಯೋಜಿಸಲಾದ ಅಧಿಕಾರಿಗಳು ತಮ್ಮ ಕರ್ತವ್ಯಗಳನ್ನು ಜವಾಬ್ದಾರಿಯುತವಾಗಿ ನಿರ್ವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್ ಹೇಳಿದರು.ಅವರು ಬುಧವಾರ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಸಕ್ತ ಸಾಲಿನ ಗ್ರಾಮ ಆಡಳಿತ ಹುದ್ದೆಗಳ ನೇರ ನೇಮಕಾತಿಗೆ ನಡೆಸಲಾಗುವ ಪರೀಕ್ಷೆಗೆ ಪೂರ್ವ ತಯಾರಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅ. 26 ರಂದು ಉಡುಪಿ ತಾಲೂಕಿನ ಎರಡು ಪರೀಕ್ಷಾ ಕೇಂದ್ರಗಳಲ್ಲಿ ಮಧ್ಯಾಹ್ನ 2.30 ರಿಂದ 4.30 ರ ವರೆಗೆ ಪರೀಕ್ಷೆ ನಡೆಯಲಿದ್ದು, ಒಟ್ಟು 797 ಅಭ್ಯರ್ಥಿಗಳು ಹಾಗೂ ಅ. 27 ರಂದು ಜಿಲ್ಲೆಯ 13 ಕೇಂದ್ರಗಳಲ್ಲಿ ಬೆಳಗ್ಗೆ 10.30 ರಿಂದ ಮ. 12.30 ರ ವರೆಗೆ ಮತ್ತು ಮಧ್ಯಾಹ್ನ 2.30 ರಿಂದ 4.30 ರ ವರೆಗೆ ನಡೆಯಲಿದ್ದು, ಒಟ್ಟು 6004 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ ಎಂದರು.ಪರೀಕ್ಷಾ ಕೇಂದ್ರಕ್ಕೆ ಮೊಬೈಲ್, ಪೆನ್ಡ್ರೈವ್, ಮೈಕ್ರೋಫೋನ್, ಬ್ಲೂ ಟೂತ್ ಡಿವೈಸ್, ಸ್ಮಾರ್ಟವಾಚ್ ಸೇರಿದಂತೆ ಇತರೆ ಯಾವುದೇ ರೀತಿಯ ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ಹಾಗೂ ಸ್ಟೇಷನರೀಸ್, ಕುಡಿಯುವ ನೀರಿನ ಬಾಟಲ್ ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ ಎಂದರು.ಅಭ್ಯರ್ಥಿಗಳು ಪರೀಕ್ಷಾ ಪ್ರವೇಶ ಪತ್ರವನ್ನು ಹಾಗೂ ಸರ್ಕಾರದಿಂದ ಮಾನ್ಯವಾದ ಫೋಟೋ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ತರಬೇಕು. ತುಂಬು ತೋಳಿನ ಶರ್ಟ್, ಕುರ್ತಾ ಪೈಜಾಮನ್ನು, ಜೀನ್ಸ್ ಪ್ಯಾಂಟ್ ಮತ್ತು ಯಾವುದೇ ಆಭರಣಗಳನ್ನು ಮೆಟಲ್ ಮತ್ತು ನಾನ್ ಮೆಟಲ್ (ಮಂಗಳ ಸೂತ್ರ ಹಾಗೂ ಕಾಲುಂಗುರಗಳನ್ನು ಹೊರತುಪಡಿಸಿ) ಧರಿಸಿ ಹಾಜರಾಗುವುದನ್ನು ನಿಷೇಧಿಸಲಾಗಿದೆ. ಪರೀಕ್ಷೆ ವೇಳೆಯಲ್ಲಿ ಶೂ, ಸಾಕ್ಸ್ಗಳನ್ನು ಧರಿಸಲು ಅವಕಾಶವಿರುವುದಿಲ್ಲ ಎಂದ ಅವರು, ಯಾವುದೇ ರೀತಿಯ ಫೇಸ್ ಮಾಸ್ಕ್ ಹಾಗೂ ಟೋಪಿ ಧರಿಸಿ ಪರೀಕ್ಷಾ ಕೊಠಡಿ ಪ್ರವೇಶಿಸುವಂತಿಲ್ಲ ಎಂದರು.ಸಭೆಯಲ್ಲಿ ಎಎಸ್ಪಿ ಟಿ. ಸಿದ್ದಲಿಂಗಪ್ಪ, ಡಿಡಿಪಿಯು ಮಾರುತಿ, ತಾಲೂಕುಗಳ ತಹಸೀಲ್ದಾರ್‌ಗಳು, ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಪರೀಕ್ಷಾ ಕಾರ್ಯಕ್ಕೆ ನಿಯೋಜಿತರಾಗಿರುವ ಅಧಿಕಾರಿಗಳು, ಮೇಲ್ವಿಚಾರಕರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.