ಕಾಂಗ್ರೆಸ್ ಪಕ್ಷವು ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಲಾಭಕ್ಕಾಗಿ ಯೋಜನೆ ರೂಪಿಸುತ್ತಿದೆ. ಆದರೆ ಬಿಜೆಪಿ ಸರ್ಕಾರದ ಉದ್ದೇಶ ಜನರಿಗೆ ಉದ್ಯೋಗ ನೀಡುವುದರ ಜೊತೆಗೆ ಗ್ರಾಮೀಣಾಭಿವೃದ್ಧಿ ಸಾಧಿಸುವುದಾಗಿದೆ. ಮಹಾತ್ಮ ಗಾಂಧೀಜಿ ಅವರ ಆಶಯಗಳನ್ನು ಸಾಕಾರಗೊಳಿಸುವ ಉದ್ದೇಶದಿಂದ ನರೇಗಾ ಯೋಜನೆಯಲ್ಲಿ ಬದಲಾವಣೆ ಮಾಡಲಾಗಿದೆ. ಆದರೆ ಕಾಂಗ್ರೆಸ್ ಪಕ್ಷ ಉದ್ದೇಶಪೂರ್ವಕವಾಗಿ ಅಪಪ್ರಚಾರ ಮಾಡುತ್ತಿದೆ ಎಂದು ಮಾಜಿ ಸಚಿವ ಸಿ.ಟಿ. ರವಿ ದೂರಿದರು.

ಕನ್ನಡಪ್ರಭ ವಾರ್ತೆ ಹಾಸನ

ಕಾಂಗ್ರೆಸ್ ಪಕ್ಷವು ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಲಾಭಕ್ಕಾಗಿ ಯೋಜನೆ ರೂಪಿಸುತ್ತಿದೆ. ಆದರೆ ಬಿಜೆಪಿ ಸರ್ಕಾರದ ಉದ್ದೇಶ ಜನರಿಗೆ ಉದ್ಯೋಗ ನೀಡುವುದರ ಜೊತೆಗೆ ಗ್ರಾಮೀಣಾಭಿವೃದ್ಧಿ ಸಾಧಿಸುವುದಾಗಿದೆ. ಮಹಾತ್ಮ ಗಾಂಧೀಜಿ ಅವರ ಆಶಯಗಳನ್ನು ಸಾಕಾರಗೊಳಿಸುವ ಉದ್ದೇಶದಿಂದ ನರೇಗಾ ಯೋಜನೆಯಲ್ಲಿ ಬದಲಾವಣೆ ಮಾಡಲಾಗಿದೆ. ಆದರೆ ಕಾಂಗ್ರೆಸ್ ಪಕ್ಷ ಉದ್ದೇಶಪೂರ್ವಕವಾಗಿ ಅಪಪ್ರಚಾರ ಮಾಡುತ್ತಿದೆ ಎಂದು ಮಾಜಿ ಸಚಿವ ಸಿ.ಟಿ. ರವಿ ದೂರಿದರು.

ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಗ್ರಾಮೀಣ ಪ್ರದೇಶದ ಜನರು ಕೆಲಸಕ್ಕಾಗಿ ಗುಳೆ ಹೋಗುವುದನ್ನು ತಪ್ಪಿಸಲು ೧೯೮೯ರಲ್ಲಿ ಪ್ರಧಾನಮಂತ್ರಿ ರೋಜ್‌ಗಾರ್ ಯೋಜನೆ ಜಾರಿಗೆ ಬಂದಿತ್ತು. ೨೦೦೫ರಲ್ಲಿ ಕಾಂಗ್ರೆಸ್ ಸರ್ಕಾರ ಅದಕ್ಕೆ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ ಎಂದು ಹೆಸರು ಬದಲಾಯಿಸಿತು. ಕಾಲಕ್ರಮೇಣ ಯೋಜನೆಗಳಲ್ಲಿ ಬದಲಾವಣೆ ಸಹಜ. ಅದೇ ರೀತಿ ವಿಬಿ-ಜಿ-ರಾಮ್-ಜಿ ಯೋಜನೆಯಲ್ಲಿ ಕೆಲವು ಅಗತ್ಯ ಮಾರ್ಪಾಡುಗಳನ್ನು ಮಾಡಲಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಲಾಭಕ್ಕಾಗಿ ಯೋಜನೆ ರೂಪಿಸುತ್ತಿದೆ. ಆದರೆ ಬಿಜೆಪಿ ಸರ್ಕಾರದ ಉದ್ದೇಶ ಜನರಿಗೆ ಉದ್ಯೋಗ ನೀಡುವುದರ ಜೊತೆಗೆ ಗ್ರಾಮೀಣಾಭಿವೃದ್ಧಿ ಸಾಧಿಸುವುದಾಗಿದೆ. ಸತ್ಯ ಹೊಸ್ತಿಲು ದಾಟುವ ಮುನ್ನ ಸುಳ್ಳು ಊರು ಸುತ್ತಾಡುತ್ತದೆ ಎಂಬ ಮಾತಿನಂತೆ ಕಾಂಗ್ರೆಸ್ ಈ ಯೋಜನೆಯಿಂದ ಗ್ರಾಮೀಣ ಜನರ ಉದ್ಯೋಗ ಕಸಿದುಕೊಳ್ಳಲಾಗುತ್ತಿಲ್ಲ. ಬದಲಾಗಿ ಕೆಲಸದ ದಿನಗಳನ್ನು ೧೦೦ರಿಂದ ೧೨೫ ದಿನಗಳಿಗೆ ಹೆಚ್ಚಿಸಲಾಗಿದೆ. ಹಿಂದೆ ತಿಂಗಳುಗಳಾದರೂ ವೇತನ ಸಿಗುತ್ತಿರಲಿಲ್ಲ, ಈಗ ಕೇವಲ ೧೪ ದಿನಗಳೊಳಗೆ ವೇತನ ಪಾವತಿ ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದರು. ಗ್ರಾಮ ಪಂಚಾಯಿತಿಗಳ ಅಧಿಕಾರ ಕಡಿತವಾಗಿದೆ ಎಂಬ ಆರೋಪವನ್ನು ತಳ್ಳಿ ಹಾಕಿದ ಅವರು, ಮುಂದೆಯೂ ಗ್ರಾಪಂಗಳೇ ಈ ಯೋಜನೆಯ ಕೇಂದ್ರಬಿಂದು ಆಗಿರಲಿವೆ. ವಿಕಸಿತ ಗ್ರಾಪಂಗಳನ್ನು ರೂಪಿಸಲು ಈ ಯೋಜನೆ ಸಹಕಾರಿಯಾಗಲಿದೆ ಎಂದರು.

ಯೋಜನೆ ಬದಲಾವಣೆಯಿಂದ ರಾಜ್ಯದ ಆರ್ಥಿಕತೆಗೆ ಹೊಡೆತ ಬೀಳುತ್ತದೆ ಎಂಬ ಆರೋಪವೂ ಸುಳ್ಳು ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವದಲ್ಲಿ ೨೦೧೪ರಲ್ಲಿ ೨೫.೭% ಇದ್ದ ಬಡತನ ಪ್ರಮಾಣ ಇಂದು ೪.೮೬%ಕ್ಕೆ ಇಳಿದಿದೆ. ೨೦೧೩-೧೪ರಲ್ಲಿ ಯೋಜನೆಗೆ ೩೩ ಸಾವಿರ ಕೋಟಿ ರು. ಬಜೆಟ್ ಇದ್ದರೆ, ಈಗ ಅದು ೨.೮೬ ಲಕ್ಷ ಕೋಟಿ ರು. ಗೆ ಏರಿಕೆಯಾಗಿದೆ. ಒಟ್ಟು ಕೆಲಸದ ದಿನಗಳು ೧,೬೬೦ ಕೋಟಿಯಿಂದ ೩,೨೧೦ ಕೋಟಿಗೆ ಹೆಚ್ಚಾಗಿದೆ ಎಂದು ಮಾಹಿತಿ ನೀಡಿದರು. ೨೦೧೪ರಿಂದ ಕೇಂದ್ರ ಸರ್ಕಾರ ಒಟ್ಟು ೮.೫೩ ಲಕ್ಷ ಕೋಟಿ ರು. ಬಿಡುಗಡೆ ಮಾಡಿದೆ. ಪೂರ್ಣಗೊಂಡ ಕಾಮಗಾರಿಗಳು ೧.೫೩ ಲಕ್ಷದಿಂದ ೮.೬೨ ಲಕ್ಷಕ್ಕೆ ಏರಿವೆ.

ಮಹಿಳೆಯರ ಭಾಗವಹಿಸುವಿಕೆ ೪೮%ರಿಂದ ೫೭%ಕ್ಕೆ ಹೆಚ್ಚಾಗಿದೆ. ೯೯% ಹಣ ವರ್ಗಾವಣೆ ಸಮಯಕ್ಕೆ ಸರಿಯಾಗಿ ನಡೆಯುತ್ತಿದೆ. ಹೊಸ ಕಾಯ್ದೆಯಿಂದ ಹಣ ಕಡಿತವಾಗುತ್ತಿದೆ ಎಂಬುದು ಸುಳ್ಳು. ವಾಸ್ತವದಲ್ಲಿ ಕೇಂದ್ರದ ಹಣಕಾಸಿನ ಕೊಡುಗೆ ೮೬ ಸಾವಿರ ಕೋಟಿಯಿಂದ ೨.೯೫ ಲಕ್ಷ ರು. ಕೋಟಿಗೆ ಹೆಚ್ಚಾಗಿದೆ ಎಂದು ಹೇಳಿದರು. ಯೋಜನೆಯಿಂದ ಗಾಂಧೀಜಿ ಅವರ ಹೆಸರನ್ನು ತೆಗೆದರೆಂದರೆ ಅವರಿಗೆ ಗೌರವ ಇಲ್ಲ ಎಂಬುದಲ್ಲ. ಆದರೆ ಗಾಂಧೀಜಿ ಅವರ ತತ್ವಗಳಿಗೆ ವಿರುದ್ಧವಾಗಿ ನಡೆದುಕೊಂಡಿರುವ ಕಾಂಗ್ರೆಸ್‌ಗೆ ಅವರ ಹೆಸರು ಹೇಳುವ ನೈತಿಕತೆಯೇ ಇಲ್ಲ. ಕಾಂಗ್ರೆಸ್ ನಡೆಸಿದ ಭ್ರಷ್ಟಾಚಾರವನ್ನು ಗಾಂಧೀಜಿ ನೋಡಿದ್ದರೆ ಬೇಸತ್ತು ಸಲ್ಲೇಖನ ವ್ರತ ಹಿಡಿಯುತ್ತಿದ್ದರು ಎಂದು ಕಿಡಿಕಾರಿದರು. ಗಾಂಧೀಜಿ ರಾಮನ ಸ್ಮರಣೆ ಮಾಡುತ್ತಿದ್ದರು, ಆದರೆ ಕಾಂಗ್ರೆಸ್ ರಾಮನ ಅಸ್ತಿತ್ವವನ್ನೇ ಪ್ರಶ್ನಿಸಿದೆ. ಗಾಂಧೀಜಿ ಪಾರದರ್ಶಕತೆಯನ್ನು ಪ್ರತಿಪಾದಿಸಿದ್ದರು, ಆದರೆ ಕಾಂಗ್ರೆಸ್ ಭ್ರಷ್ಟಾಚಾರ ಬೆಳೆಸಿದೆ. ಗಾಂಧೀಜಿ ಅವರ ಹೆಸರು ಹೇಳುವ ನೈತಿಕತೆಯನ್ನು ಕಾಂಗ್ರೆಸ್ ಕಳೆದುಕೊಂಡಿದೆ ಎಂದು ವ್ಯಂಗ್ಯವಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಆಲೂರು-ಸಕಲೇಶಪುರ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು, ಎಸ್ಸಿ ಮೋರ್ಚಾ ಅಧ್ಯಕ್ಷ ಎಸ್.ಡಿ. ಚಂದ್ರು, ಗಿರೀಶ್ ಇತರರು ಉಪಸ್ಥಿತರಿದ್ದರು.