ಸಾರಾಂಶ
ಜಿಲ್ಲೆಯಲ್ಲಿ ಅಂತರ್ಜಲ ಬಳಕೆ ಪ್ರಮಾಣ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇದೆ. ಪರಿಣಾಮ ಅಂತರ್ಜಲ ಪಾತಾಳ ಸೇರುತ್ತಿದೆ. ೨೦೧೩ ರಿಂದ ೨೦೨೩ರವರೆಗೆ ಹತ್ತು ವರ್ಷದಲ್ಲಿ ಅಂತರ್ಜಲ ಬಳಕೆ ಪ್ರಮಾಣ ಶೇ.೨೦ರಷ್ಟು ಏರಿಕೆಯಾಗಿರುವುದು ಆತಂಕ ಮೂಡಿಸಿದೆ.
ಮಂಡ್ಯ ಮಂಜುನಾಥ
ಮಂಡ್ಯ : ಜಿಲ್ಲೆಯಲ್ಲಿ ಅಂತರ್ಜಲ ಬಳಕೆ ಪ್ರಮಾಣ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇದೆ. ಪರಿಣಾಮ ಅಂತರ್ಜಲ ಪಾತಾಳ ಸೇರುತ್ತಿದೆ. ೨೦೧೩ ರಿಂದ ೨೦೨೩ರವರೆಗೆ ಹತ್ತು ವರ್ಷದಲ್ಲಿ ಅಂತರ್ಜಲ ಬಳಕೆ ಪ್ರಮಾಣ ಶೇ.೨೦ರಷ್ಟು ಏರಿಕೆಯಾಗಿರುವುದು ಆತಂಕ ಮೂಡಿಸಿದೆ.
ಅಂತರ್ಜಲ ಶೇ.೭೦ರವರೆಗೆ ಬಳಸುವುದು ಸುರಕ್ಷಿತ, ಶೇ.೭೦ರಿಂದ ಶೇ.೯೦ರವರೆಗೆ ಅರೆ ಕ್ಲಿಷ್ಟಕರ, ಶೇ.೯೦ರಿಂದ ೧೦೦ರವರೆಗೆ ಕ್ಲಿಷ್ಟಕರ ಮತ್ತು ಶೇ.೧೦೦ರ ನಂತರ ಅತಿಯಾದ ಬಳಕೆ ಎಂದು ವರ್ಗೀಕರಿಸಲಾಗಿದೆ. ಅಂತರ್ಜಲದ ಸುರಕ್ಷಿತ ಮಟ್ಟ ಮೀರುವುದಕ್ಕೆ ಶೇ.೧೦ರಷ್ಟು ಮಾತ್ರ ಬಾಕಿ ಉಳಿದಿರುವುದು ಅಪಾಯದ ಮುನ್ಸೂಚನೆಯನ್ನು ತೋರಿಸುತ್ತಿದೆ.
೨೦೧೩ರಲ್ಲಿ ಮಂಡ್ಯ ಜಿಲ್ಲೆಯೊಳಗೆ ಅಂತರ್ಜಲ ಬಳಕೆಯ ಪ್ರಮಾಣ ಶೇ.೪೮.೪೩ರಷ್ಟಿತ್ತು. ೨೦೧೭ರ ವೇಳೆಗೆ ಶೇ.೫೭.೪೩ರಷ್ಟು ಹೆಚ್ಚಳವಾಯಿತು. ೨೦೨೦ರಲ್ಲಿ ಶೇ.೫೩.೯೭, ೨೦೨೨ರಲ್ಲಿ ಶೇ.೬೦.೮೦ ಹಾಗೂ ೨೦೨೩ರಲ್ಲಿ ಶೇ.೫೮.೮೫ಕ್ಕೆ ತಲುಪಿದೆ. ಮಳೆಯ ಕೊರತೆ, ಕೆರೆ-ಕಟ್ಟೆಗಳನ್ನು ಸಕಾಲದಲ್ಲಿ ತುಂಬಿಸುವುದಕ್ಕೆ ಸಾಧ್ಯವಾಗದಿರುವುದು, ಅವೈಜ್ಞಾನಿಕವಾಗಿ ಕೆರೆಗಳ ಹೂಳೆತ್ತಿರುವುದು, ಕೃಷಿ ಪದ್ಧತಿಯಲ್ಲಿ ಹನಿ-ತುಂತುರು ನೀರಾವರಿ ಅಳವಡಿಸಿಕೊಳ್ಳದಿರುವುದು ಹಾಗೂ ನೀರಿನ ಮಿತಿಮೀರಿದ ಬಳಕೆಯೇ ಅಂತರ್ಜಲ ಬಳಕೆ ಪ್ರಮಾಣ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.
61 ಕೊಳವೆ ಬಾವಿಗಳಲ್ಲಿ ಅಧ್ಯಯನ:
ಜಿಲ್ಲೆಯಲ್ಲಿರುವ ಅಂತರ್ಜಲ ಇಲಾಖೆಯ ೬೧ ಅಧ್ಯಯನ ಕೊಳವೆ ಬಾವಿಗಳಲ್ಲಿ ನೀರಿನ ಮಟ್ಟದ ಏರಿಳಿತದ ವರದಿಯನ್ನು ಪ್ರತಿ ಮಾಹೆ ದಾಖಲಿಸುತ್ತಿದೆ. ಅದರಂತೆ ೨೦೨೪ರಲ್ಲಿ ಪ್ರತಿ ತಿಂಗಳು ನಡೆಸಿದ ಅಧ್ಯಯನದಂತೆ ಜನವರಿಯಲ್ಲಿ ೯.೩೩ ಮೀ., ಫೆಬ್ರವರಿಯಲ್ಲಿ ೧೧.೦೬ಮೀ., ಮಾರ್ಚ್‌ನಲ್ಲಿ ೧೩.೧೧ ಮೀ., ಏಪ್ರಿಲ್‌ನಲ್ಲಿ ೧೩.೯೭ ಮೀ., ಮೇ ತಿಂಗಳಲ್ಲಿ ೧೩.೬೪ ಮೀ., ಜೂನ್ ತಿಂಗಳಲ್ಲಿ ೧೧.೨೫ ಮೀ., ಜುಲೈ ತಿಂಗಳಲ್ಲಿ ೯.೯೭ ಮೀಟರ್‌ನಷ್ಟು ಅಂತರ್ಜಲ ಏರಿಳಿತವಾಗಿದೆ. ಅಂದರೆ ಸರಾಸರಿ ೧೧.೭೬ ಮೀಟರ್‌ನಷ್ಟು ವ್ಯತ್ಯಾಸವಾಗಿರುವುದು ಕಂಡುಬಂದಿದೆ.
ಬೇಸಿಗೆ ಅವಧಿಯಲ್ಲಿ ಅಂತರ್ಜಲದ ಬಳಕೆ ಹೆಚ್ಚಾಗಿರುವುದರಿಂದ ಫೆಬ್ರವರಿಯಿಂದ ಮೇ ತಿಂಗಳವರೆಗೆ ಅಂತರ್ಜಲ ಹೆಚ್ಚು ಕುಸಿಯುತ್ತಾ ಹೋಗುತ್ತದೆ. ಮೇ ತಿಂಗಳಲ್ಲಿ ಪೂರ್ವಮುಂಗಾರು ಚುರುಕುಗೊಂಡಿದ್ದು ಹಾಗೂ ಜೂನ್, ಜುಲೈನಲ್ಲಿ ಮುಂಗಾರು ಮಳೆಯಾಗಿದ್ದರಿಂದ ಅಂತರ್ಜಲ ಬಳಕೆ ಪ್ರಮಾಣ ಶೇ.೪ ಮೀಟರ್‌ನಷ್ಟು ಕಡಿಮೆಯಾಗಿರುವುದನ್ನು ಗುರುತಿಸಲಾಗಿದೆ.
ಮೂರು ತಾಲೂಕುಗಳಲ್ಲಿ ಹೆಚ್ಚು ಕುಸಿತ
ಜಿಲ್ಲೆಯ ಮೂರು ತಾಲೂಕುಗಳಲ್ಲಿ ಅಂತರ್ಜಲದ ಮಟ್ಟ ಹೆಚ್ಚು ಕುಸಿತಗೊಂಡಿದೆ. ನಾಗಮಂಗಲ ತಾಲೂಕಿನಲ್ಲಿ ೧೯.೯೭ ಮೀ., ಮಳವಳ್ಳಿ ತಾಲೂಕಿನಲ್ಲಿ ೧೪.೮೦ ಮೀ., ಹಾಗೂ ಮಂಡ್ಯ ತಾಲೂಕಿನಲ್ಲಿ ೧೧.೯೬ ಮೀ.ನಷ್ಟು ಅಂತರ್ಜಲ ಇಳಿಮುಖವಾಗಿದೆ.
ನಾಗಮಂಗಲ ತಾಲೂಕಿನಲ್ಲಿರುವ ೧೧ ಅಧ್ಯಯನ ಕೊಳವೆ ಬಾವಿಗಳಲ್ಲಿ ಜನವರಿ-೧೬.೪೧ ಮೀ., ಫೆಬ್ರವರಿ-೨೦.೫೪ ಮೀ., ಮಾರ್ಚ್-೨೨.೯೧ ಮೀ., ಏಪ್ರಿಲ್-೨೩.೮೭ ಮೀ., ಮೇ-೨೩.೬೪ ಮೀ., ಜೂನ್-೨೦.೫೭ ಮೀ., ಜುಲೈ-೧೯.೯೭ ಮೀ. ಏರಿಳಿಕೆಯಾಗಿದ್ದು ಜಲಮಟ್ಟದಲ್ಲಿ ಸರಾಸರಿ ೨೧.೧೦ ಮೀ.ನಷ್ಟು ವ್ಯತ್ಯಾಸ ಕಂಡುಬಂದಿದೆ.
ಮಳವಳ್ಳಿ ತಾಲೂಕಿನಲ್ಲಿರುವ ೯ ಕೊಳವೆ ಬಾವಿಗಳಲ್ಲಿ ನಡೆಸಿದ ಅಧ್ಯಯನದ ಪ್ರಕಾರ ಜನವರಿ-೧೧.೩೮ ಮೀ., ಫೆಬ್ರವರಿ-೧೨.೧೫ ಮೀ., ಮಾರ್ಚ್-೧೪.೬೫ ಮೀ., ಏಪ್ರಿಲ್-೧೫.೬೧ ಮೀ., ಮೇ-೧೫.೭೯ ಮೀ., ಜೂನ್-೧೪.೭೪ ಮೀ., ಜುಲೈನಲಿ ೧೪.೮೦ ಮೀ. ನಷ್ಟು ಏರಿಳಿತ ಕಂಡುಬಂದು ಸರಾಸರಿ ೧೪.೧೬ರಷ್ಟು ವ್ಯತ್ಯಾಸವಾಗಿರುವುದು ದಾಖಲಾಗಿದೆ.
ಮಂಡ್ಯ ತಾಲೂಕಿನಲ್ಲಿರುವ ೮ ಕೊಳವೆ ಬಾವಿಗಳಲ್ಲಿ ನಡೆಸಿದ ಅಧ್ಯಯನದಂತೆ ಜನವರಿ-೧೦.೭೦ ಮೀ., ಫೆಬ್ರವರಿ-೧೫.೪೫ ಮೀ., ಮಾರ್ಚ್-೧೮.೨೬ ಮೀ., ಏಪ್ರಿಲ್-೧೯.೩೮ ಮೀ., ಮೇ-೧೯.೫೯ ಮೀ., ಜೂನ್ ೧೫.೯೪ ಮೀ., ಜುಲೈ-೧೧.೯೬ ಮೀ. ಅಂದರೆ ಸರಾಸರಿ ೧೫.೯೦ ಮೀ.ನಷ್ಟು ಅಂತರ್ಜಲದಲ್ಲಿ ವ್ಯತ್ಯಾಸವಾಗಿದೆ.
ಕೆರೆಗಳ ಹೂಳೆತ್ತುವುದು ವೈಜ್ಞಾನಿಕವಾಗಿಲ್ಲ, ಕೊಳವೆ ಬಾವಿಗೆ ಮಾನದಂಡವಿಲ್ಲ..!
ಜಿಲ್ಲೆಯಲ್ಲಿರುವ ಕೆರೆಗಳ ಹೂಳೆತ್ತುವಿಕೆಯಲ್ಲಿ ವೈಜ್ಞಾನಿಕ ಕ್ರಮಗಳನ್ನು ಅನುಸರಿಸದಿರುವುದು, ಕೊಳವೆ ಬಾವಿಗಳನ್ನು ಕರೆಸುವುದಕ್ಕೆ ಮಾನದಂಡಗಳನ್ನು ನಿಗದಿಪಡಿಸದಿರುವುದು, ಮಳೆಗಾಲದಲ್ಲಿ ಹೆಚ್ಚುವರಿ ನೀರನ್ನು ಸಂಗ್ರಹಿಸಿಡುವುದಕ್ಕೆ ವ್ಯವಸ್ಥೆಗಳನ್ನು ಮಾಡಿಕೊಳ್ಳದೆ ನೂರಾರು ಟಿಎಂಸಿ ನೀರನ್ನು ವ್ಯರ್ಥವಾಗಿ ಹರಿಯಬಿಡುತ್ತಿರುವುದೇ ಅಂತರ್ಜಲ ಮಟ್ಟದಲ್ಲಿ ಸುಧಾರಣೆ ಕಂಡುಬರದಿರುವುದಕ್ಕೆ ಪ್ರಮುಖ ಕಾರಣವಾಗಿದೆ.
ಬೇಸಿಗೆ ಅವಧಿಯಲ್ಲಿ ಜಿಲ್ಲೆಯ ಹಲವು ಕೆರೆಗಳಲ್ಲಿದ್ದ ಮಣ್ಣನ್ನು ರೈತರು ಜಮೀನುಗಳಿಗೆ ಸಾಗಿಸಿಕೊಂಡರು. ಅವೈಜ್ಞಾನಿಕವಾಗಿ ಮಣ್ಣನ್ನು ತೆಗೆದಿರುವುದರಿಂದ ಮಳೆ ನೀರು ಭೂಮಿಯೊಳಗೆ ಇಂಗಿಹೋಗುತ್ತಿದೆ. ಕೆರೆಗಳಲ್ಲಿ ೩ ರಿಂದ ೪ ಅಡಿಯಷ್ಟು ತೆಗೆಯುವುದು ವೈಜ್ಞಾನಿಕ ಕ್ರಮ. ಅದನ್ನು ಬಿಟ್ಟು ೭ ರಿಂದ ೧೦ ಅಡಿಯಷ್ಟು ಆಳಕ್ಕೆ ಮಣ್ಣನ್ನು ತೆಗೆದಿದ್ದಾರೆ. ಕೆರೆಗೆ ನೀರು ಹರಿದುಬರುವ ಜಲಮೂಲಗಳು ಮುಚ್ಚಿಹೋಗಿವೆ. ಹೊಸ ಕೆರೆಗಳನ್ನು ನಿರ್ಮಿಸುವುದಕ್ಕೆ ಆಸಕ್ತಿ ತೋರಿಸುತ್ತಿಲ್ಲ. ಕೆರೆಗಳಲ್ಲಿರುವ ಹೂಳನ್ನು ತೆರವುಗೊಳಿಸಿ ಸಂಗ್ರಹಣಾ ಸಾಮರ್ಥ್ಯ ಹೆಚ್ಚಿಸುವ ಬದ್ಧತೆ ಪ್ರದರ್ಶಿಸುತ್ತಿಲ್ಲ. ಕೆರೆಗಳಿಗೆ ನಾಲಾ ಸಂಪರ್ಕಜಾಲವಿಲ್ಲ. ಈ ಎಲ್ಲಾ ಇಲ್ಲಗಳ ನಡುವೆ ಅಂತರ್ಜಲ ಮಟ್ಟದಲ್ಲಿ ಸುಧಾರಣೆ ಕಾಣುತ್ತಿಲ್ಲ