ಕ್ಷೇತ್ರದ ಜನರ ಸಮಸ್ಯೆಗಳ ಪರಿಹರಿಸುವ ವಿಷಯದಲ್ಲಿ ರಾಜಕೀಯ ಮಾಡುವುದಿಲ್ಲ. ಅದು ಏನಿದ್ದರೂ ಚುನಾವಣೆ ಸಂದರ್ಭದಲ್ಲಿ ಮಾತ್ರ.
ಕುರುಗೋಡು: ತಾಲೂಕು ವ್ಯಾಪ್ತಿಯ 12 ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಿದರೆ ಪ್ರಜಾಸೇವಾ ಆಂದೋಲನದಲ್ಲಿ ಹೆಚ್ಚು ಅರ್ಜಿ ಬರುವುದಿಲ್ಲ. ಬೇಜವಾಬ್ದಾರಿ ತೋರುವುದರಿಂದ ಅಧಿಕ ಪ್ರಮಾಣದ ಅರ್ಜಿ ಬರುತ್ತಿದೆ ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು.
ತಾಲೂಕಿನ ಬಾದನಹಟ್ಟಿ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಪ್ರಜಾಸೇವಾ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪಿಡಿಓಗಳು ಸಾರ್ವಜನಿಕರ ಅನುಗುಣವಾಗಿ ಸರಿಯಾಗಿ ಕರ್ತವ್ಯ ನಿರ್ವಹಿಸಿ ಇಲವಾದಲ್ಲಿ ದೂರದ ತಾಲೂಕಿಗೆ ವರ್ಗಾವಣೆ ಮಾಡಿ, ಸರ್ಕಾರಿ ಸಂಬಳ ಪಡೆದು ಜನರ ಕೆಲಸ ಸರಿಯಾಗಿ ಮಾಡದ ಇಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿದ್ದ ತಾಪಂ ಇಓ ಪಂಪಾಪತಿಗೆ ತಾಕೀತು ಮಾಡಿದರು.ಕ್ಷೇತ್ರದ ಜನರ ಸಮಸ್ಯೆಗಳ ಪರಿಹರಿಸುವ ವಿಷಯದಲ್ಲಿ ರಾಜಕೀಯ ಮಾಡುವುದಿಲ್ಲ. ಅದು ಏನಿದ್ದರೂ ಚುನಾವಣೆ ಸಂದರ್ಭದಲ್ಲಿ ಮಾತ್ರ. ಕ್ಷೇತ್ರದ ಮತದಾರರ ಸಮಸ್ಯೆ ಪರಿಹರಿಸಲು ಶ್ರಮಿಸುತ್ತೇನೆ ಎಂದರು.
ಗ್ರಾಮದಲ್ಲಿ 5 ಎಕರೆ ಭೂಮಿ ಗುರುತಿಸಿ ನಿವೇಶನಗಳಾಗಿ ಪರಿವರ್ತಿಸಿ ವಸತಿ ರಹಿತ ಮತ್ತು ನಿವೇಶ ರಹಿತರಿಗೆ ಹಂಚಿಕೆ ಮಾಡಲಾಗುವುದು ಎಂದು ಭರವಸೆ ನೀಡಿದರು.ಸಭೆಗೆ ಹಾಜರಾಗದ ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆ ಜೆಇ ದೇವರಾಜ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು ಕೂಡಲೇ ಕಾರಣ ಕೇಳಿ ನೋಟೀಸ್ ಜಾರಿ ಮಾಡುವಂತೆ ತಹಸೀಲ್ದಾರ್ ನರಸಪ್ಪಗೆ ಸೂಚಿಸಿದರು. ಕಚೇರಿಗೆ ಬರುವ ಜನರನ್ನು ವಿನಾಕಾರಣ ಅಲೆದಾಡಿಸದೆ ನಿಗದಿತ ಸಮಯದೊಳಗೆ ಕೆಲಸ ಮಾಡಿಕೊಡಿ. ಆಗುವುದಿಲ್ಲ ಎಂದರೆ ಸೂಕ್ತ ಕಾರಣ ನೀಡಿ ಎಂದು ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ತಹಸೀಲ್ದಾರ್ ನರಸಪ್ಪ ಕಾರ್ಯಕ್ರಮ ಕುರಿತು ಪ್ರಸ್ತಾವಿಕ ಮಾತನಾಡಿದರು.ಕುಡಿಯುವ ನೀರು, ಚರಂಡಿ, ರಸ್ತೆ, ಬೀದಿ ದೀಪ ಆಶ್ರಯ ಮನೆ ಮತ್ತು ಆಶ್ರಯ ನಿವೇಶದ ಸಮಸ್ಯೆಗಳು ಸಭೆಯಲ್ಲಿ ಪ್ರತಿಧ್ವನಿಸಿದರು.
ನಿವೇಶನ, ಆಶ್ರಯ ಮನೆ 428, ಕಂದಾಯ 26, ಆಹಾರ ಮತ್ತು ನಾಗರಿಕ ಸರಬರಾಜು 10, ಸಾರಿಗೆ ಸಂಸ್ಥೆ 2 ಸೇರಿ ಒಟ್ಟು 502 ಅರ್ಜಿ ಸಲ್ಲಿಕೆಯಾದವು.ಕೃಷಿ, ತೋಟಗಾರಿಕೆ, ಮಹಿಳಾ ಮತ್ತು ಶಿಶು ಅಭಿವೃದ್ಧಿ ಯೋಜನಾ ಇಲಾಖೆಯಿಂದ ಅವರ ಇಲಾಖೆಗೆ ಸಂಬಂಧಿಸಿದ ಮಾಹಿತಿ ಪಸರಿಸುವ ಸ್ಟಾಲ್‌ಗಳನ್ನು ಹಾಕಲಾಗಿತ್ತು. ಶಾಸಕ ಜೆ.ಎನ್. ಗಣೇಶ್ ಉದ್ಘಾಟಿಸಿದರು.
ಗ್ರೇಡ್-2 ತಹಸೀಲ್ದಾರ್ ಮಲ್ಲೇಶಪ್ಪ, ಪುರಸಭೆ ಅಧ್ಯಕ್ಷ ಜಿ. ಮಂಜುನಾಥ, ಪುರಸಭೆ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ, ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ತಾಲೂಕಾಧ್ಯಕ್ಷ ಬಸವನ ಗೌಡ, ತಾಲೂಕು ಕಂಪ್ಲಿ ತಹಸೀಲ್ದಾರ್ ಜೂಗಲು ಮಂಜು ನಾಯಕ, ಪಂಚಾಯಿತಿ ಇಒ ಪಂಪಾಪತಿ ಹಿರೇಮಠ, ಕಂಪ್ಲಿ ಇಒ ಶ್ರೀಕುಮಾರ, ಪಿಡಿಒ ಅನೀಲ್, ಕಂದಾಯ ನಿರೀಕ್ಷಕ ಭದ್ರಯ್ಯ ಮತ್ತು ಮಲ್ಲಿಕಾರ್ಜುನ ಮತ್ತು ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.ಕುರುಗೋಡು ತಾಲೂಕಿನ ಬಾದನಹಟ್ಟಿ ಗ್ರಾಮದಲ್ಲಿ ಶನಿವಾರ ಜರುಗಿದ ಪ್ರಜಾಸೇವಾ ಆಂದೋಲನದಲ್ಲಿ ಶಾಸಕ ಜೆ.ಎನ್. ಗಣೇಶ್ ವಿದ್ಯಾರ್ಥಿಗಳು ಮಾಹಿತಿ ಪಡೆದರು.