ಸಾರಾಂಶ
ವಿಶೇಷ ವರದಿ
ಗದಗ: ಜಿಲ್ಲಾದ್ಯಂತ ಪ್ರಸಕ್ತ ಸಾಲಿನ ಮುಂಗಾರಿನಂತೆ ಹಿಂಗಾರು ಹಂಗಾಮಿನಲ್ಲಿಯೂ ವ್ಯಾಪಕ ಪ್ರಮಾಣದ ಮಳೆ ಮತ್ತು ತೀವ್ರ ತೇವಾಂಶದ ಕೂಡಿದ ವಾತಾವರಣ ಮುಂದುವರಿದಿದ್ದು, ಇದರಿಂದ ಜಿಲ್ಲೆಯ ಹಿಂಗಾರು ಬಿತ್ತನೆಗೆ ಹಿನ್ನಡೆಯಾಗಿದೆ.ಹಿಂಗಾರು ಹಂಗಾಮಿನ ಪ್ರಮುಖ ಬೆಳೆಗಳಾದ ಜೋಳ, ಗೋದಿ, ಕುಸುಬೆ, ಕಡಲೆ ಬಿತ್ತನೆ ಮಾಡಲು ಹಾಗೂ ಕಟಾವಿಗೆ ಬಂದ ಗೋವಿಜೋಳ, ಈರುಳ್ಳಿ ಬೆಳೆಗಳನ್ನು ರಕ್ಷಣೆ ಮಾಡುವುದು ಸವಾಲಿನ ಕೆಲಸವಾಗಿದೆ. ಮುಂಗಾರು ಹಂಗಾಮಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿರುವುದು ರೈತರಲ್ಲಿ ಆತಂಕಕ್ಕೆ ಕಾರಣವಾಗಿದೆ. ಜಿಲ್ಲೆಯಲ್ಲಿ ಹಿಂಗಾರು ಅವಧಿಯಲ್ಲಿ 257925 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆಗಳ ಬಿತ್ತನೆ ಗುರಿಯನ್ನು ಕೃಷಿ ಇಲಾಖೆ ಹಾಕಿಕೊಂಡಿದೆ. ಆದರೆ ಬಿತ್ತನೆಗೂ ಅವಕಾಶ ನೀಡದಂತಾಗಿದ್ದು, ರೈತರು ಸಮಸ್ಯೆಯಲ್ಲಿದ್ದಾರೆ.
ವಿಳಂಬ ಬಿತ್ತನೆ: ಹಿಂಗಾರು ಅವಧಿಯಲ್ಲಿ ಮುಖ್ಯವಾಗಿ ಜೋಳ, ಕಡಲೆ, ಸೂರ್ಯಕಾಂತಿ, ಹತ್ತಿ, ಗೋದಿ ಸೇರಿದಂತೆ ವಿವಿಧ ಆಹಾರ ಧಾನ್ಯಗಳು ಮತ್ತು ಜಾನುವಾರುಗಳಿಗೆ ಬೇಕಾಗುವ ಹೊಟ್ಟು, ಮೇವು ಕೊಡುವ ಬೆಳೆಗಳ ಬಿತ್ತನೆಗೆ ಸೆಪ್ಟೆಂಬರ್ ಎರಡನೇ ವಾರದಿಂದಲೇ ಸೂಕ್ತ ಸಮಯ. ಆದರೆ ಅಕ್ಟೋಬರ್ ಮೊದಲ ವಾರ ಮುಕ್ತಾಯವಾಗುತ್ತಿದ್ದರೂ ಇದುವರೆಗೂ ಜಿಲ್ಲಾದ್ಯಂತ ಹಿಂಗಾರು ಬಿತ್ತನೆ ಪ್ರಾರಂಭವಾಗಿಲ್ಲ.ಕಟಾವಿಗೂ ತೊಂದರೆ: ನಿರಂತರವಾಗಿ ಸುರಿದ ಮಳೆಯಿಂದ ಕೇವಲ ಬಿತ್ತನೆಗೆ ಮಾತ್ರ ಹಿನ್ನಡೆಯಾಗಿಲ್ಲ, ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಾದ ಈರುಳ್ಳಿ, ಮೆಣಸಿನಕಾಯಿ ಮತ್ತು ಶೇಂಗಾ ಬೆಳೆದ ರೈತರಿಗೀಗ ಬಂದಿರುವ ಬೆಳೆಗಳನ್ನು ಕಟಾವು ಮಾಡುವುದು ಕೂಡಾ ಸಮಸ್ಯೆಯಾಗಿದೆ. ಅದರಲ್ಲಿಯೂ ರಾಜ್ಯದಲ್ಲಿಯೇ ಅತಿ ಹೆಚ್ಚು ಈರುಳ್ಳಿ ಬೆಳೆಯುವ ಗದಗ ಜಿಲ್ಲೆಯ ರೈತರಿಗೆ ಹೆಚ್ಚಿನ ನಷ್ಟ ಎದುರಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
ಈರುಳ್ಳಿ ಬೆಲೆ ಪಾತಾಳಕ್ಕೆಹಲವಾರು ಸಂಕಷ್ಟದ ಮಧ್ಯೆ ಕಟಾವು ಮಾರುಕಟ್ಟೆಗೆ ತಂದಿರುವ ಈರುಳ್ಳಿ ಬೆಲೆ ಪಾತಾಳಕ್ಕೆ ಕುಸಿದಿದೆ. ಇದರಿಂದಾಗಿ ರೈತರು ಕಂಗಾಲಾಗಿದ್ದಾರೆ. ಪ್ರತಿ ಕ್ವಿಂಟಲ್ ಈರುಳ್ಳಿ ₹50ರಿಂದ ₹100ಕ್ಕೆ ಮಾರಾಟವಾಗುತ್ತಿದ್ದು, ಕನಿಷ್ಠ ತಮ್ಮ ತಮ್ಮ ಗ್ರಾಮಗಳಿಂದ ಮಾರಾಟಕ್ಕೆ ಈರುಳ್ಳಿ ತಂದ ಟ್ರ್ಯಾಕ್ಟರ್ ಬಾಡಿಗೆ ಕೂಡಾ ರೈತರಿಗೆ ಮರಳಿ ಬರದಂತಾಗಿದೆ.
ಮುಂಗಾರು ಮತ್ತು ಹಿಂಗಾರಿನಲ್ಲಿ ಸುರಿದ ವ್ಯಾಪಕ ಮಳೆಯಾಗಿ ಈರುಳ್ಳಿ ಗುಣಮಟ್ಟದಲ್ಲಿ ಕುಸಿತವಾಗಿ ಕೊಳೆತ(ಅತಿಯಾದ ತೇವಾಂಶ ಹೊಂದಿದ) ಈರುಳ್ಳಿ ಮಾರಾಟಕ್ಕೆ ಬರುತ್ತಿರುವುದು ಬೆಲೆ ಕುಸಿತಕ್ಕೆ ಪ್ರಮುಖ ಕಾರಣ ಎನ್ನುತ್ತಾರೆ ವ್ಯಾಪಾರಸ್ಥರು.ಬಿತ್ತನೆಗೆ ಅಡ್ಡಿ: ನಿರಂತರವಾಗಿ ಮಳೆಯಿಂದ ಕಡಲೆ, ಜೋಳ, ಗೋದಿ ಬೆಳೆಗಳನ್ನು ಬಿತ್ತನೆ ಮಾಡಲು ತಡವಾಗುತ್ತಿದೆ. ಹೆಚ್ಚು ಮಳೆಯಾದ ಹಿನ್ನೆಲೆ ಬಿತ್ತನೆ ಮಾಡಲು ಅಡ್ಡಿಯಾಗಿದೆ ಎಂದು ನಾಗಪ್ಪ ನರೇಗಲ್ಲ, ಮಹೇಶ ಸಂಕನಗೌಡ್ರ, ವಿವಿಧ ಗ್ರಾಮಗಳ ರೈತರು ತಿಳಿಸಿದ್ದಾರೆ.
ರೈತರ ಸಿದ್ಧತೆ: ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿಗೆ ಅವಶ್ಯವಿರುವ ಕಡಲೆ ಹಾಗೂ ಜೋಳದ ಬಿತ್ತನೆ ಬೀಜಗಳನ್ನು ಜಿಲ್ಲಾಡಳಿತದಿಂದ ವಿತರಣೆ ಮಾಡಲಾಗಿದೆ. ಹಿಂಗಾರು ಹಂಗಾಮಿನ ಬಿತ್ತನೆಗೆ ರೈತರು ಸಹ ರೀತಿಯಲ್ಲಿ ಸಿದ್ಧತೆ ಮಾಡಿದ್ದಾರೆ. ಮಳೆ ಹೆಚ್ಚಿನ ಪ್ರಮಾಣದಲ್ಲಿ ಸುರಿದ ಹಿನ್ನೆಲೆ ಬಿತ್ತನೆ ವಿಳಂಬವಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ ಜಿ.ಎಚ್. ತಿಳಿಸಿದರು.ಹಿಂಗಾರು ಬಿತ್ತನೆ ಗುರಿ(ಹೆಕ್ಟೇರ್‌ಗಳಲ್ಲಿ)
ಗದಗ 60542ಗಜೇಂದ್ರಗಡ 32230
ಲಕ್ಷ್ಮೇಶ್ವರ 17190ಮುಂಡರಗಿ 36723
ನರಗುಂದ 40365ರೋಣ 58350
ಶಿರಹಟ್ಟಿ 12525