ಸಾರಾಂಶ
ತಾಲೂಕಿನ ಹುಲಿಹೈದರ ಗ್ರಾಮದ ರಸ್ತೆಯನ್ನು ಅಕ್ರಮವಾಗಿ ಒತ್ತುವರಿ ಮಾಡಲು ಮುಂದಾಗಿದ್ದು, ಒತ್ತುವರಿ ತಡೆಯುವಲ್ಲಿ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಕನಕಗಿರಿ
ತಾಲೂಕಿನ ಹುಲಿಹೈದರ ಗ್ರಾಮದ ರಸ್ತೆಯನ್ನು ಅಕ್ರಮವಾಗಿ ಒತ್ತುವರಿ ಮಾಡಲು ಮುಂದಾಗಿದ್ದು, ಒತ್ತುವರಿ ತಡೆಯುವಲ್ಲಿ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.ಗ್ರಾಮದ ೨ನೇ ವಾರ್ಡಿನಿಂದ ಬಸವೇಶ್ವರ ವೃತ್ತಕ್ಕೆ ಕಲ್ಪಿಸುವ ರಸ್ತೆಯನ್ನು ಕೆಲವರು ಕಲ್ಲುಗಳನ್ನು ಅಡ್ಡಲಾಗಿ ಹಾಕಿ ಬಂದ್ ಮಾಡಿದ್ದಾರೆ. ರಸ್ತೆ ತುಂಬೆಲ್ಲ ಕೊಳಕು ನೀರು ನಿಂತಿದ್ದರಿಂದ ಓಣಿಯ ತುಂಬಾ ದುರ್ವಾಸನೆ ಹರಡಲು ಕಾರಣವಾಗಿದೆ. ಸೊಳ್ಳೆ, ನೊಣದ ಕಾಟವೂ ಹೆಚ್ಚಳವಾಗಿದೆ.
ಈ ನಡುವೆ ಕೆಲವರು ರಸ್ತೆಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಳ್ಳುವ ಉದ್ದೇಶದಿಂದ ರಸ್ತೆಯಲ್ಲಿ ಅಡ್ಡಲಾಗಿ ಕಲ್ಲುಗಳನ್ನು ಹಾಕಿ ಬಂದ್ ಮಾಡಿದ್ದರೇ ಇನ್ನೂ ಕೆಲವರು ಚರಂಡಿ ನೀರನ್ನು ದಾರಿ ಮದ್ಯಕ್ಕೆ ಹರಿಬಿಟ್ಟು ದುರ್ವಾಸನೆಗೆ ಕಾರಣರಾಗಿದ್ದಾರೆ. ಇಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ವಾರ್ಡಿನ ನಿವಾಸಿಗಳು ಆಗ್ರಹಿಸಿದ್ದಾರೆ.ಒತ್ತುವರಿ ತಡೆ ಯಾವಾಗ?:
ಜಿಲ್ಲೆಯಲ್ಲಿ ಸೂಕ್ಷ್ಮ ಕೇಂದ್ರವಾಗಿರುವ ಹುಲಿಹೈದರ ಗ್ರಾಮದಲ್ಲಿ ಸರ್ಕಾರಕ್ಕೆ ಸಂಬಂಧಿಸಿದ ಆಸ್ತಿಯನ್ನೆ ಒತ್ತುವರಿ ಮಾಡಲು ಯತ್ನಸಿದ್ದಾರೆ. ಗಂಗಾವತಿ-ಲಿಂಗಸೂಗುರು ರಾಜ್ಯ ಹೆದ್ದಾರಿ ಯುದ್ದಕ್ಕೂ ಇರುವ ಪುಟ್ಬಾತ್‌ನಲ್ಲಿಯೂ ಕಟ್ಟಿಗೆ, ಕುಳ್ಳನ್ನು ಹಾಕಲಾಗಿದೆ. ಅನೇಕರು ಪರವಾನಗಿ ಪಡೆಯದೆ ಅಂಗಡಿಗಳನ್ನು ಹಾಕಿಕೊಂಡಿರುವುದು ಕಂಡು ಬಂದಿದೆ. ಕೆಲವರು ಸರ್ಕಾರಿ ಜಾಗೆಯಲ್ಲಿ ಮನೆ ನಿರ್ಮಿಸಿಕೊಂಡಿರೆನ್ನಲಾಗಿದ್ದು, ಗ್ರಾಮದ ತುಂಬೆಲ್ಲ ಅಕ್ರಮ ಒತ್ತುವರಿ ಮಾಡಿಕೊಳ್ಳುವ ವಾಸನೆ ಎಲ್ಲೆಡೆ ಹಬ್ಬಿದ್ದು, ಇದು ಅಧಿಕಾರಿಗಳ ಗಮನಕ್ಕಿದ್ದು, ಇಲ್ಲದಂತೆ ತೋರುತ್ತಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.ಹುಲಿಹೈದರ ಗ್ರಾಮದಲ್ಲಿ ಅಕ್ರಮ ಒತ್ತುವರಿ ಮಿತಿ ಮೀರಿದೆ. ಅಡ್ಡಲಾಗಿ ಕಲ್ಲು ಹಾಕುವ ಮೂಲಕ ರಸ್ತೆ ಬಂದ್ ಮಾಡುವುದು, ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡಿರುವುದು, ರಾಜ್ಯ ಹೆದ್ದಾರಿಯ ಪುಟ್ಬಾತ್‌ನಲ್ಲಿ ಕಟ್ಟಿಗೆ, ಕುಳ್ಳು ಇಟ್ಟುಕೊಳ್ಳುವುದು ನಡೆದಿದೆ. ಅಧಿಕಾರಿಗಳು ಕೂಡಲೇ ಎಚ್ಚೆತ್ತು ಅಕ್ರಮ ಒತ್ತುವರಿಗೆ ತಡೆಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪ್ರಗತಿಪರ ಹೋರಾಟಗಾರ ಸಣ್ಣ ಹನುಮಂತಪ್ಪ ಆಗ್ರಹಿಸಿದ್ದಾರೆ.
ಅಕ್ರಮ ಒತ್ತುವರಿ ವಿಚಾರವಾಗಿ ಯಾರಿಂದಲೂ ತಕರಾರು ಬಂದಿಲ್ಲ. ಸ್ಥಳೀಯರಿಂದ ದೂರು, ತಕರಾರು ಬಂದಲ್ಲಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಪಿಡಿಒ ಅಮರೇಶ ರಾಠೋಡ್ ತಿಳಿಸಿದ್ದಾರೆ.