ಸಾರಾಂಶ
ಮೇಲುಗೊಬ್ಬರವಾಗಿ ಶಿಫಾರಸ್ಸಿನಂತೆ ಯೂರಿಯಾ ರಸಗೊಬ್ಬರವನ್ನು ಮಿತವಾಗಿ ಬಳಕೆ ಮಾಡಬೇಕು. ಯೂರಿಯಾ ರಸಗೊಬ್ಬರ ಬೆಳೆಗಳಿಗೆ ಸಾರಜನಕ ಒದಗಿಸಿ ಉತ್ತಮ ಫಸಲಿಗೆ ನೆರವಾಗುತ್ತದೆ.
ಹಾವೇರಿ: ಯೂರಿಯಾ ರಸಗೊಬ್ಬರ ಬಳಕೆಯಿಂದ ಮಾನವನ ಆರೋಗ್ಯ, ಮಣ್ಣು ಮತ್ತು ಪರಿಸರಕ್ಕೆ ಹಾನಿಕಾರಕ ಎಂದು ಸಹಾಯಕ ಕೃಷಿ ನಿರ್ದೇಶಕ ವೀರಭದ್ರಪ್ಪ ಬಿ.ಎಚ್. ತಿಳಿಸಿದರು.ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಅಧಿಕ ಪ್ರಮಾಣದಲ್ಲಿ ಯೂರಿಯಾ ರಸಗೊಬ್ಬರ ಬಳಕೆಯಿಂದ ಮಾನವನ ಆರೋಗ್ಯ ಮಣ್ಣು ಮತ್ತು ಪರಿಸರದ ಮೇಲೆ ಬೀರುವ ಹಾನಿಕಾರಕ ಪರಿಣಾಮಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು. ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ 321.2 ಮಿಮೀ ಮಳೆಯಾಗಿದೆ. ಮೆಕ್ಕೆಜೋಳ, ಶೇಂಗಾ, ಸೋಯಾಬಿನ್ ಸೇರಿದಂತೆ ವಿವಿಧ ಬೆಳೆಗಳು ಬೆಳವಣಿಗೆ ಹಂತದಲ್ಲಿವೆ. ಮೇಲುಗೊಬ್ಬರವಾಗಿ ಶಿಫಾರಸ್ಸಿನಂತೆ ಯೂರಿಯಾ ರಸಗೊಬ್ಬರವನ್ನು ಮಿತವಾಗಿ ಬಳಕೆ ಮಾಡಬೇಕು. ಯೂರಿಯಾ ರಸಗೊಬ್ಬರ ಬೆಳೆಗಳಿಗೆ ಸಾರಜನಕ ಒದಗಿಸಿ ಉತ್ತಮ ಫಸಲಿಗೆ ನೆರವಾಗುತ್ತದೆ.
ಶಿಫಾರಸ್ಸಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಯೂರಿಯಾ ರಸಗೊಬ್ಬರ ಬಳಸಿದರೆ ಬೆಳೆಗಳು ಸಾರಜನಕ ಹೀರಿಕೊಳ್ಳುವ ಪ್ರಮಾಣ ಅಧಿಕವಾಗಿ, ಬೆಳೆ ಬೆಳವಣಿಗೆಗೆ ನಿಯಂತ್ರಣ ಇರುವುದಿಲ್ಲ. ಹೂವುಗಳ ಉತ್ಪಾದನೆ ಕಡಿಮೆಯಾಗಿ ಕಾಳು ಕಟ್ಟುವಿಕೆ ಸೀಮಿತಗೊಂಡು, ಉತ್ಪಾದನೆ ಇಳಿಕೆ ಆಗುತ್ತದೆ. ಬೆಳೆಗಳ ಬೆಳವಣಿಗೆ ಹೆಚ್ಚಾದರೆ ರೋಗ, ಕೀಟಬಾಧೆ, ಅಧಿಕವಾಗಿ ಇಳುವರಿ ಕುಂಠಿತಗೊಳ್ಳುತ್ತದೆ ಎಂದರು.ಇವುಗಳ ಹತೋಟಿಗಾಗಿ ರೋಗನಾಶಕ, ಕೀಟನಾಶಕ ಬಳಸಬೇಕಾದ ಅನಿವಾರ್ಯತೆಯೊಂದಿಗೆ ವ್ಯವಸಾಯದ ಖರ್ಚು ಹೆಚ್ಚಾಗುತ್ತದೆ. ಭೂಮಿಗೆ ಬಳಸುವ ಯೂರಿಯಾ ರಸಗೊಬ್ಬರದಲ್ಲಿ ಬೆಳೆಗಳಿಗೆ ಶೇ. 20ರಿಂದ 25 ಮಾತ್ರವೇ ಲಭ್ಯವಾಗುತ್ತಿದ್ದು, ಉಳಿದ ಪ್ರಮಾಣವು ವಿವಿಧ ರೀತಿಯಲ್ಲಿ ಬೆಳೆಗಳಿಗೆ ದೊರೆಯದೇ ನಷ್ಟವಾಗುತ್ತದೆ. ಮೇಲುಗೊಬ್ಬರವಾಗಿ ಯೂರಿಯಾ ರಸಗೊಬ್ಬರಕ್ಕೆ ಪರ್ಯಾಯವಾಗಿ 25ರಿಂದ 30 ದಿನಗಳ ಬೆಳೆಗೆ ನ್ಯಾನೋ ಯೂರಿಯಾ ದ್ರಾವಣವನ್ನು ಪ್ರತಿ ಲೀಟರ್ ನೀರಿಗೆ 4 ಮಿಲೀ ಮಿಶ್ರಣ ಮಾಡಿ ಬೆಳೆಯ ಎಲೆಗಳ ಮೇಲೆ ಸಿಂಪಡಿಸಬಹುದು ಎಂದರು. ಉತ್ತಮ ಫಲಿತಾಂಶಕ್ಕಾಗಿ 20ರಿಂದ 25 ದಿನಗಳ ಅಂತರದಲ್ಲಿ ಎರಡು ಬಾರಿ ಸಿಂಪಡಿಸಬೇಕು. ನ್ಯಾನೋ ಯೂರಿಯಾ ಗೊಬ್ಬರವು ಚಿಕ್ಕ ಗಾತ್ರದ ಕಣಗಳನ್ನು ಹೊಂದಿದ್ದು, ಗಿಡಕ್ಕೆ ಬೇಕಿರುವ ಸಾರಜನಕ ಸರಿಯಾದ ಪ್ರಮಾಣದಲ್ಲಿ ಒದಗಿಸಿ ಶೇ. 80ರಷ್ಟು ಗೊಬ್ಬರವನ್ನು ಉಪಯೋಗಿಸಲ್ಪಡುತ್ತದೆ. ನೀರಿನಲ್ಲಿ ಕರಗುವ 19- 19- 19 ಪೋಟ್ಯಾಷ್ 0-0-50-13-:045 ರಸಗೊಬ್ಬರವನ್ನು ಪ್ರತಿ ಲೀಟರ್ ನೀರಿಗೆ 1.5 ಗ್ರಾಂ ಬೆರೆಸಿ ಬೆಳೆಗಳ ಎಲೆಗಳ ಮೇಲೆ ಸಿಂಪರಣೆ ಮಾಡಬೇಕು ಎಂದರು.ಕಳೆನಾಶಕ ಬಳಕೆ ಮಾಡುವಾಗ ಇತರೆ ರಾಸಾಯನಿಕಗಳನ್ನು ಮಿಶ್ರಣ ಮಾಡದೇ ಶಿಫಾರಸು ಮಾಡಿದ ಕಳೆನಾಶಕಗಳನ್ನು ಮಾತ್ರ ಬಳಸುವಂತೆ ಹಾಗೂ ಮಾಹಿತಿಗೆ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಬಹುದು ಎಂದರು.ಇದೇ ಸಂದರ್ಭದಲ್ಲಿ ತಹಸೀಲ್ದಾರ್ ಶರಣಮ್ಮ ಕಾರಿ ಕರಪತ್ರ ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ರೈತ ಸಂಪರ್ಕ ಕೇಂದ್ರಗಳ ಕೃಷಿ ಅಧಿಕಾರಿಗಳು, ಆತ್ಮ ಯೋಜನೆಯ ಅಧಿಕಾರಿಗಳು ಹಾಗೂ ಬೆಳೆ ಸಮೀಕ್ಷೆ ಖಾಸಗಿ ನಿವಾಸಿಗಳು ಇದ್ದರು.