ಮೊಬೈಲ್‌ ಅತಿಯಾಗಿ ಬಳಸಿದಲ್ಲಿ ಮಿದುಳಿನ ಕಾಯಿಲೆ

| Published : Aug 07 2024, 01:03 AM IST

ಸಾರಾಂಶ

ಉತ್ತಮವಾಗಿ ಓದಿ, ಒಳ್ಳೆಯ ಬದುಕು, ಭವಿಷ್ಯವನ್ನು ರೂಪಿಸಿಕೊಳ್ಳಬೇಕಾದ ಕಾಲೇಜು ವಿದ್ಯಾರ್ಥಿಗಳು ಶೇ.75ರಷ್ಟು ತಮ್ಮ ಅಮೂಲ್ಯ ಸಮಯವನ್ನು ಮೊಬೈಲ್‌ ಸ್ಕ್ರೀನ್, ಸೋಷಿಯಲ್ ಮೀಡಿಯಾಗಳಲ್ಲೇ ಕಳೆಯುತ್ತಿದ್ದಾರೆ. ಇದರಿಂದ ಮೆದುಳು ಸಂಬಂಧಿತ ಕಾಯಿಲೆಗೆ ತುತ್ತಾಗುತ್ತಿರುವುದು ಆತಂಕದ ಸಂಗತಿಯಾಗಿದೆ ಎಂದು ಹಿರಿಯ ವೈದ್ಯ ಡಾ. ಬಿ.ಹಾಲೇಶ ಹೇಳಿದ್ದಾರೆ.

- ಡಾ.ಮಹಾಂತ ಶಿವಯೋಗಿ ಜಯಂತಿ ಅಂಗವಾಗಿ ವ್ಯಸನಮುಕ್ತ ದಿನಾಚರಣೆಯಲ್ಲಿ ಡಾ. ಬಿ.ಹಾಲೇಶ - - - ಕನ್ನಡಪ್ರಭ ವಾರ್ತೆ ದಾವಣಗೆರೆ

ಉತ್ತಮವಾಗಿ ಓದಿ, ಒಳ್ಳೆಯ ಬದುಕು, ಭವಿಷ್ಯವನ್ನು ರೂಪಿಸಿಕೊಳ್ಳಬೇಕಾದ ಕಾಲೇಜು ವಿದ್ಯಾರ್ಥಿಗಳು ಶೇ.75ರಷ್ಟು ತಮ್ಮ ಅಮೂಲ್ಯ ಸಮಯವನ್ನು ಮೊಬೈಲ್‌ ಸ್ಕ್ರೀನ್, ಸೋಷಿಯಲ್ ಮೀಡಿಯಾಗಳಲ್ಲೇ ಕಳೆಯುತ್ತಿದ್ದಾರೆ. ಇದರಿಂದ ಮೆದುಳು ಸಂಬಂಧಿತ ಕಾಯಿಲೆಗೆ ತುತ್ತಾಗುತ್ತಿರುವುದು ಆತಂಕದ ಸಂಗತಿಯಾಗಿದೆ ಎಂದು ಹಿರಿಯ ವೈದ್ಯ ಡಾ. ಬಿ.ಹಾಲೇಶ ಹೇಳಿದರು.

ತಾಲೂಕಿನ ತೋಳಹುಣಸೆ ಗ್ರಾಮದ ಶಿವಗಂಗೋತ್ರಿಯ ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಮಂಗಳವಾರ ರಾಷ್ಟ್ರೀಯ ಸೇವಾ ಯೋಜನೆ ವಿಭಾಗ ಹಮ್ಮಿಕೊಂಡಿದ್ದ ಡಾ.ಮಹಾಂತ ಶಿವಯೋಗಿಗಳ ಜಯಂತಿ ಅಂಗವಾಗಿ ವ್ಯಸನಮುಕ್ತ ದಿನಾಚರಣೆ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಮೊಬೈಲ್‌, ಸೋಷಿಯಲ್ ಮೀಡಿಯಾಗಳನ್ನು ಅಗತ್ಯಕ್ಕಿಂತ ಹೆಚ್ಚಾಗಿ ಬಳಕೆಯಿಂದ ವಿದ್ಯಾರ್ಥಿ ಜೀವನದ ಅಮೂಲ್ಯ ಸಮಯ ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ. ಮೊಬೈಲ್‌ ಬಳಸಿ ದುಶ್ಚಟಗಳಿಗೂ ವಿದ್ಯಾರ್ಥಿ, ಯುವಜನರು ಬಲಿಯಾಗುತ್ತಿದ್ದಾರೆ. ಧೂಮಪಾನ, ಮದ್ಯಪಾನದಿಂದ ದೇಹದ ಎಲ್ಲ ಭಾಗಗಳೂ ರೋಗಗ್ರಸ್ಥವಾಗುತ್ತವೆ. ಜಾಗತೀಕರಣದ ಸ್ಪರ್ಧಾತ್ಮಕ ಯುಗದಲ್ಲಿ ದುಶ್ಚಟಗಳಿಂದ ದೂರವಿರದ ಹೊರತು, ಉತ್ತಮ ಭವಿಷ್ಯ ಹೊಂದಲು ಸಾಧ್ಯವಿಲ್ಲ ಎಂದು ಸಲಹೆ ನೀಡಿದರು.

ದಾವಣಗೆರೆ ವಿವಿ ಕುಲಪತಿ ಡಾ.ಬಿ.ಡಿ.ಕುಂಬಾರ ಅವರು ಲಿಂಗೈಕ್ಯ ಡಾ.ಮಹಾಂತ ಶಿವಯೋಗಿಗಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ, ವಿದ್ಯಾರ್ಥಿಗಳಲ್ಲಿ ಚೈತನ್ಯ, ಮನೋಲ್ಲಾಸ, ಆತ್ಮವಿಶ್ವಾಸದ ಕೊರತೆಯಿಂದಾಗಿ ಕೆಟ್ಟ ವ್ಯಸನಗಳಿಗೆ ದಾಸರಾಗುತ್ತಿರುವುದು ಸಾಮಾಜಿಕ ದುರಂತವೇ ಸರಿ. ವಿದ್ಯಾರ್ಥಿ, ಯುವ ಜನರು ಒಂದಲ್ಲ ಒಂದು ಚಟಕ್ಕೆ ಬಲಿಯಾಗುತ್ತಿರುವುದು ವಿಷಾದನೀಯ ಸಂಗತಿಯಾಗಿದೆ ಎಂದು ತಿಳಿಸಿದರು.

ಸಂತೋಷ, ದುಃಖದ ಹೆಸರು, ನೆಪದಲ್ಲಿ ಅಮಲಿನ ವ್ಯಸನಕ್ಕೆ ದಾಸರಾಗಿ, ತಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ. ಶ್ರೀ ಮಹಾಂತ ಶಿವಯೋಗಿಗಳು ತ್ರಿವಿಧ ದಾಸೋಹದ ಜೊತೆಗೆ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಮಾಡಿದ ಕಾರ್ಯಗಳು ಅವಿಸ್ಮರಣೀಯವಾಗಿವೆ. ಕೆಟ್ಟ ಹವ್ಯಾಸ, ದುಶ್ಚಟಗಳಿಂದ ದೂರವಿದ್ದು, ಉತ್ತಮ ಹವ್ಯಾಸ, ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತೊಡಗಿಸಿಕೊಳ್ಳಬೇಕು. ಆ ಮೂಲಕ ಆದರ್ಶ ಪ್ರಜೆಗಳಾಗಿ ಹೊರಹೊಮ್ಮಬೇಕು ಎಂದು ತಿಳಿಸಿದರು.

ದಾವಣಗೆರೆ ವಿವಿ ಕುಲಸಚಿವ ಪ್ರೊ. ಯು.ಎಸ್. ಮಹಾಬಲೇಶ್ವರ, ಹಣಕಾಸು ಅಧಿಕಾರಿ ದ್ಯಾಮನಗೌಡ ಮುದ್ದನಗೌಡ, ಎನ್.ಎಸ್.ಎಸ್. ಸಂಯೋಜನಾಧಿಕಾರಿ ಡಾ. ಅಶೋಕಕುಮಾರ ವೀ. ಪಾಳೇದ ಮತ್ತು ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಡಾ. ಬಿ.ಕೆ. ಸಿದ್ದಪ್ಪ, ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.

- - -

ಕೋಟ್‌

ದುಶ್ಚಟಗಳಿಂದ ದೂರವಿರಲು ಉತ್ತಮವಾಗಿ ಕೆಲಸ ಮಾಡಬೇಕು. ಸದಾ ಉತ್ತಮ ಆಲೋಚನೆ ಮಾಡಬೇಕು. ಸಂಸ್ಕೃತಿ, ಸಂಸ್ಕಾರ, ಸದ್ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ಜೀವನದಲ್ಲಿ ಉನ್ನತ ಧ್ಯೇಯ ಇಟ್ಟುಕೊಂಡಿರಬೇಕು. ಒಂದೇ ಗುರಿಯ ಚಲನೆಯಿಂದ ಮಾತ್ರ ಸಾಧನೆ ಸಾಧ್ಯ

- ಡಾ. ಬಿ.ಹಾಲೇಶ, ಹಿರಿಯ ವೈದ್ಯ

- - -

-6ಕೆಡಿವಿಜಿ1:

ದಾವಣಗೆರೆ ತಾಲೂಕಿನ ಶಿವಗಂಗೋತ್ರಿಯ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಡಾ.ಮಹಾಂತ ಶಿವಯೋಗಿಗಳ ಜಯಂತಿ ಪ್ರಯುಕ್ತ ಹಮ್ಮಿಕೊಂಡಿದ್ದ ವ್ಯಸನಮುಕ್ತ ದಿನ ಕಾರ್ಯಕ್ರಮವನ್ನು ದಾವಿವಿ ಕುಲಪತಿ ಡಾ. ಬಿ.ಡಿ.ಕುಂಬಾರ ಉದ್ಘಾಟಿಸಿದರು.