ಯಥೇಚ್ಛ ಕ್ರಿಮಿನಾಶಕಗಳ ಬಳಕೆಯಿಂದ ಮಣ್ಣಿನ ಫಲವತ್ತತೆ ನಾಶ: ಸಂತೋಷ್ ಪಟ್ಟದಕಲ್ಲು

| Published : May 29 2024, 12:53 AM IST

ಯಥೇಚ್ಛ ಕ್ರಿಮಿನಾಶಕಗಳ ಬಳಕೆಯಿಂದ ಮಣ್ಣಿನ ಫಲವತ್ತತೆ ನಾಶ: ಸಂತೋಷ್ ಪಟ್ಟದಕಲ್ಲು
Share this Article
  • FB
  • TW
  • Linkdin
  • Email

ಸಾರಾಂಶ

ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಯಥೇಚ್ಛ ಕ್ರಿಮಿನಾಶಕಗಳ ಬಳಕೆಯಿಂದ ಸುಮಾರು ೧೦ ಸಾವಿರ ಎಕರೆ ಪ್ರದೇಶದ ಮಣ್ಣಿನ ಫಲವತ್ತತೆ ನಾಶವಾಗಿದೆ.

ತಾಲೂಕು ರಸಗೊಬ್ಬರ ಮತ್ತು ಕಿಮಿನಾಶಕ ಮಾರಾಟಗಾರರ ಸಂಘದ ವಾರ್ಷಿಕ ಸಭೆಯಲ್ಲಿ ಆತಂಕ

ಕನ್ನಡಪ್ರಭ ವಾರ್ತೆ ಕಾರಟಗಿ

ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಯಥೇಚ್ಛ ಕ್ರಿಮಿನಾಶಕಗಳ ಬಳಕೆಯಿಂದ ಸುಮಾರು ೧೦ ಸಾವಿರ ಎಕರೆ ಪ್ರದೇಶದ ಮಣ್ಣಿನ ಫಲವತ್ತತೆ ನಾಶವಾಗಿದೆ. ಭವಿಷ್ಯದ ದೃಷ್ಟಿಯಿಂದಾಗಿ ಎಲ್ಲರೂ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಸಂತೋಷ್ ಪಟ್ಟದಕಲ್ಲು ಎಚ್ಚರಿಸಿದರು.

ಪಟ್ಟಣದಲ್ಲಿ ನಡೆದ ತಾಲೂಕು ರಸಗೊಬ್ಬರ ಮತ್ತು ಕಿಮಿನಾಶಕ ಮಾರಾಟಗಾರರ ಸಂಘದ ವಾರ್ಷಿಕ ಸಭೆಯಲ್ಲಿ ಮಂಗಳವಾರ ಮಾತನಾಡಿದರು.

ನಮ್ಮ ಭಾಗದಲ್ಲಿ ಅತಿಯಾದ ರಸಗೊಬ್ಬರ ಹಾಗೂ ಕ್ರಿಮಿನಾಶಕ ಬಳಕೆಯಿಂದಾಗಿ ಸವಳು-ಜವಳು ಮತ್ತು ಕ್ಷಾರದ ಪ್ರದೇಶ ಹೆಚ್ಚುತ್ತಿದೆ. ಇದು ಆತಂಕಕಾರಿ ವಿಷಯ. ತುಂಗಾಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಸುಮಾರು ೧೦ ಸಾವಿರ ಹೆಕ್ಟೇರ್ ಪ್ರದೇಶ ಸವಳು-ಜವುಳ ಪ್ರದೇಶವಾಗಿ ರೂಪಾಂತರಗೊಂಡಿದೆ. ಈ ಪ್ರದೇಶದಲ್ಲಿ ಅತಿಯಾದ ಕ್ರಿಮಿನಾಶಕ ಬಳಕೆಯಿಂದಾಗಿ ಭೂಮಿ ಫಲವತ್ತತೆ ಕಳೆದುಕೊಳ್ಳುವುದಷ್ಟೆ ಅಲ್ಲ ನಮ್ಮ ಆರೋಗ್ಯ ಕಳೆದುಕೊಳ್ಳುವಂತೆ ಮಾಡುತ್ತಿದ್ದೇವೆ. ಮುಂದಿನ ಪೀಳಿಗೆಗಾಗಿ ಭೂಮಿಯನ್ನು ಉಳಿಸಿ ಆರೋಗ್ಯ ಕಾಪಾಡಿಕೊಳ್ಳವ ಜವಾಬ್ದಾರಿ ನಮ್ಮ ಮೇಲಿರುವುದರಿಂದ ರಸಗೊಬ್ಬರ ಮಾರಾಟಗಾರರು ಲಾಭದ ದೃಷ್ಟಿಕೋನ ಇಟ್ಟುಕೊಳ್ಳದೆ ವಿಷಕಾರಕ ಮತ್ತು ನಕಲಿ ರಸಗೊಬ್ಬರ ಮತ್ತು ಕ್ರಿಮಿನಾಶಕಗಳ ಮಾರಾಟ ತಡೆಯಬೇಕಾಗಿದೆ ಎಂದರು.

ಮಾರಾಟಗಾರರು ಇಲಾಖೆಯ ಮಾರ್ಗಸೂಚಿಯಲ್ಲಿ ರೈತರಿಗೆ ರಸಗೊಬ್ಬರ ಮತ್ತು ಬೀಜ ಮಾರಾಟ ಮಾಡಬೇಕು. ಈ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಮಾರಾಟಗಾರರ ಸಭೆ ನಡೆಸಿ ಸೂಚನೆ ನೀಡಲಾಗಿದೆ. ಪ್ರಮುಖವಾಗಿ ಮಣ್ಣಿನ ಆರೋಗ್ಯ ಮತ್ತು ಫಲವತ್ತತೆ ದೃಷ್ಟಿಯಿಂದ ಯೂರಿಯಾ ಗೊಬ್ಬರ ಬಳಕೆ ಕಡಿಮೆ ಮಾಡಿ ಕಾಂಪೋಸ್ಟ್ ಸೇರಿದಂತೆ ತಿಪ್ಪೆಗೊಬ್ಬರ, ಹಸಿರೆಲೆ ಗೊಬ್ಬರಗಳನ್ನು ಬಳಕೆ ಮಾಡುವಂತೆ ರೈತರಿಗೆ ಸಲಹೆ ನೀಡುವಂತೆ ತಿಳಿಸಿದರು.

ಈ ಬಾರಿ ಮುಂಗಾರು ಹಂಗಾಮಿಗೆ ರಸ ಗೊಬ್ಬರ ಮತ್ತು ಭತ್ತದ ಬೀಜಕ್ಕೆ ಯಾವುದೇ ಕೊರತೆ ಇಲ್ಲ, ರೈತರ ಬೇಡಿಕೆಗಳ ಅನುಗುಣವಾಗಿ ಸೂಚಿತ ದರದಲ್ಲಿ ಮಾರಾಟ ಮಾಡುವಂತೆ ಸೂಚಿಸಿದರು.

ಮುಂಗಾರು ಪೂರ್ವ ಮಳೆ ವಾಡಿಕೆಗಿಂತ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಆಗಿದೆ. ಉತ್ತಮ ಮುಂಗಾರು ನಿರೀಕ್ಷೆ ಇದೆ. ಈ ಬಾರಿ ಬಿತ್ತನೆ ಪ್ರಮಾಣ ಕೂಡಾ ಕಳೆದ ವರ್ಷಕ್ಕಿಂತ ಹೆಚ್ಚಾಗಲಿದ್ದು, ರೈತರ ಬೇಡಿಕೆ ಅನುಗುಣವಾಗಿ ಈ ಭಾಗದ ಪ್ರಮುಖ ಬೆಳೆಗೆ ಬೇಕಾದ ಭತ್ತದ ಬೀಜ, ರಸಗೊಬ್ಬರ, ಕ್ರಿಮಿನಾಶಕದ ಕೊರತೆಯಾಗದಂತೆ ಒದಗಿಸುವ ನಿಟ್ಟಿನಲ್ಲಿ ಇಲಾಖೆ ಎಲ್ಲ ಸಿದ್ಧತೆ ಮಾಡಿಕೊಂಡಿದೆ ಎಂದರು.

ಈ ವೇಳೆ ಮಾರಾಟಗಾರರು ಬಿಪಿಟಿ-೨, ಸೋನಾ ೫೨೦೪ ಭತ್ತದ ಬೀಜಗಳಿಗೆ ರೋಗಬಾಧೆ ಕಡಿಮೆ ಇರುವ ಕಾರಣಕ್ಕೆ ರೈತರಿಂದ ಹೆಚ್ಚಿನ ಬೇಡಿಕೆ ಇದೆ. ಆದ್ದರಿಂದ ಕಂಪನಿಗಳ ಜತೆಗೆ ಮಾತುಕತೆ ನಡೆಸಿ ಬೀಜ ಸರಬರಾಜು ಮಾಡುವಂತೆ , ತೊಗರಿ, ನವಣಿ, ಮೆಕ್ಕೆಜೋಳ, ಸೂರ್ಯಕಾಂತಿ ಬೀಜಗಳನ್ನು ಸರಬರಾಜು ಮಾಡಬೇಕು ಜತೆಗೆ ಈ ಭಾಗದಲ್ಲಿ ನ್ಯಾನೋ ಡಿಎಪಿ ಮತ್ತು ಯೂರಿಯಾವನ್ನು ರೈತರು ಕಡಿಮೆ ಪ್ರಮಾಣದಲ್ಲಿ ಬಳಕೆ ಮಾಡುತ್ತಿದ್ದಾರೆ. ಆದರೆ ಕಂಪನಿಗಳು ಮಾತ್ರ ಹೆಚ್ಚಿನ ಮಾರಾಟಕ್ಕೆ ಒತ್ತಾಯಿಸುತ್ತಿರುವುದನ್ನು ಮಾರಾಟಗಾರರು ಅಧಿಕಾರಿಗಳ ಗಮನಕ್ಕೆ ತಂದರು. ಇದಕ್ಕೆ ಸ್ಪಂದಿಸಿದ ಕೃಷಿ ಅಧಿಕಾರಿ ಈ ಬಗ್ಗೆ ಪರಿಶೀಲಿಸಲಾಗುವುದು ಎಂದರು.

ಮಾರಾಟಗಾರರ ಸಂಘದ ಅಧ್ಯಕ್ಷ ಸಂಗಮೇಶಗೌಡ ಮಾತನಾಡಿ, ರಸಗೊಬ್ಬರ ನೇರ ಪೂರೈಕೆಗೆ ಗಂಗಾವತಿ ರೈಲ್ವೆ ನಿಲ್ದಾಣದಲ್ಲಿ ರೇಕ್ ವ್ಯಸವ್ಥೆ ಕಲ್ಪಿಸಿಕೊಡುವಂತೆ ಹಾಗೂ ಮಳೆಯಾಶ್ರಿತ ಪ್ರದೇಶದಲ್ಲಿ ನವಣಿ ಬೀಜಕ್ಕೆ ಹೆಚ್ಚಿನ ಬೇಡಿಕೆ ಇದ್ದು, ರೈತ ಸಂಪರ್ಕ ಕೇಂದ್ರದಲ್ಲಿ ತುರ್ತಾಗಿ ಒದಗಿಸಿಕೊಡಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾರಾಟಗಾರರ ಸಂಘದ ರಾಜ್ಯ ನಿರ್ದೇಶಕ ವೀರನಗೌಡ, ಜಿಲ್ಲಾ ಉಪಾಧ್ಯಕ್ಷ ಅಮರೇಶ ಸಾಲುಗುಂದಿ, ಮಲ್ಲೇಪ್ಪ ಖೇಮ್ ರೆಡ್ಡಿ, ರುದ್ರಗೌಡ ಮಾಲಿ ಪಾಟೀಲ್, ಪಂಪನಗೌಡ ಮಾಲಿ ಪಾಟೀಲ್ ಸೇರಿದಂತೆ ವಿಶ್ವನಾಥ ರೆಡ್ಡಿ, ಸತ್ಯನಾರಾಯಣ ಬಸವಣ್ಣ ಕ್ಯಾಂಪ್ , ಅಪ್ಪಾಜಿ ಪನ್ನಾಪುರ, ಭದ್ರಗೌಡ ಪನ್ನಾಪುರ, ಬಸವರಾಜ ಮೈಲಾಪುರ, ಪಂಪಾಪತಿ ಕಲಕೇರಿ ಸೇರಿ ಇತರರಿದ್ದರು.