ಅತಿಯಾದ ಪ್ಲಾಸ್ಟಿಕ್ ಬಳಕೆ ಜೀವ ಸಂಕುಲಕ್ಕೆ ಕಂಟಕ

| Published : May 21 2024, 12:33 AM IST

ಸಾರಾಂಶ

ಪರಿಸರದ ಅರಿವು ಮತ್ತು ಕಾಳಜಿ ಮೊದಲು ನಮ್ಮ ಮನೆಯಿಂದಲೇ ಆರಂಭವಾಗಬೇಕು. ಅತಿಯಾದ ಪ್ಲಾಸ್ಟಿಕ್ ಬಳಕೆ ಜಲಚರ ಜೀವಿಗಳಿಗೆ ಮತ್ತು ಮಾನವ ಸಂಕುಲಕ್ಕೆ ಕಂಟಕವಾಗುತ್ತಿದೆ ಎಂದು ತುಮಕೂರು ವಿವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಹೇಳಿದರು.

ಕನ್ನಡಪ್ರಭ ವಾರ್ತೆ ತುಮಕೂರುಪರಿಸರದ ಅರಿವು ಮತ್ತು ಕಾಳಜಿ ಮೊದಲು ನಮ್ಮ ಮನೆಯಿಂದಲೇ ಆರಂಭವಾಗಬೇಕು. ಅತಿಯಾದ ಪ್ಲಾಸ್ಟಿಕ್ ಬಳಕೆ ಜಲಚರ ಜೀವಿಗಳಿಗೆ ಮತ್ತು ಮಾನವ ಸಂಕುಲಕ್ಕೆ ಕಂಟಕವಾಗುತ್ತಿದೆ ಎಂದು ತುಮಕೂರು ವಿವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಹೇಳಿದರು.ನಗರದ ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜಿನ ಪರಿಸರ ವಿಜ್ಞಾನ ಅಧ್ಯಯನ ವಿಭಾಗ ಭಾರತ ಸರ್ಕಾರದ ಭೂ ವಿಜ್ಞಾನ ಸಚಿವಾಲಯ ಹಾಗೂ ಜೀವನ್‌ ಜ್ಯೋತಿ ಗ್ರಾಮೀಣ ಅಭಿವೃದ್ಧಿ ಮತ್ತು ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯ ಸಹಯೋಗದೊಂದಿಗೆ‘ಪ್ಲಾನೆಟ್ ವರ್ಸಸ್ ಪ್ಲಾಸ್ಟಿಕ್’ ವಿಷಯದ ಅಡಿಯಲ್ಲಿ ಆಯೋಜಿಸಿದ್ದ ‘ವಿಶ್ವ ಭೂಮಿಯ ದಿನ’ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕೀರ್ಣವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.ಮೀನು ಹಿಡಿಯಲು ಮೀನುಗಾರರು ಬಲೆ ಬೀಸಿದರೆ ಪ್ಲಾಸ್ಟಿಕ್ ಬಾಟಲಿಗಳು ಗಾಳಕ್ಕೆ ಸಿಗುತ್ತಿವೆ. ಭೂಮಿಯನ್ನು ಕಾಪಾಡಿಕೊಳ್ಳಬೇಕಾದರೆ ಮರ, ಗಿಡಗಳನ್ನು ಬೆಳೆಸುವುದರೊಂದಿಗೆ ಸ್ವಚ್ಛತೆ ಕಾಪಾಡಿಕೊಳ್ಳುವುದೂ ಮುಖ್ಯವಾಗುತ್ತದೆ. ಪ್ಲಾಸ್ಟಿಕ್ ಬಳಸಬೇಡಿ ಎಂದು ಹೇಳುವವರೇ ಹೆಚ್ಚು ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.ವಿವಿಯ ಪರೀಕ್ಷಾಂಗ ಕುಲಸಚಿವ ಪ್ರೊ.ಪ್ರಸನ್ನಕುಮಾರ್ ಕೆ.ಮಾತನಾಡಿ, ಮರ-ಗಿಡಗಳಿದ್ದರೆ ಮಾತ್ರ ಗುಣಮಟ್ಟ ಆಮ್ಲಜನಿಕ ಸಿಗುತ್ತದೆ. ಮುಂದಿನ ತಲೆಮಾರಿಗೆ ಪ್ರಕೃತಿಯನ್ನು ಉಳಿಸಿಕೊಡುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ. ಪ್ರಕೃತಿಗೆ ಸಂಬಂಧಿಸಿದ ಪ್ರತಿಯೊಂದು ವಿಷಯವು ಈ ವಿಚಾರ ಸಂಕೀರ್ಣದಲ್ಲಿ ಚರ್ಚೆ ಆಗಬೇಕು ಎಂದು ಹೇಳಿದರು.ಕರ್ನಾಟಕ ಗೃಹ ಸಚಿವಾಲಯದ ವಿಶೇಷ ಅಧಿಕಾರಿ ಡಾ.ನಾಗಣ್ಣ ಮಾತನಾಡಿ, ಬೆಳೆ ಬೆಳೆಯಲು ರಾಸಾಯನಿಕ ಗೊಬ್ಬರದ ಬದಲಿಗೆ ಸಾವಯವ ಗೊಬ್ಬರವನ್ನು ಬಳಸಿದರೆ ಭೂಮಿಯ ಮತ್ತು ನಮ್ಮ ಆರೋಗ್ಯ ಎರಡೂ ಸುರಕ್ಷಿತವಾಗಿರುತ್ತದೆ. ಇದನ್ನು ಕೃಷಿಕರು ಅರ್ಥಮಾಡಿಕೊಳ್ಳಬೇಕು. ಕೃಷಿಕರಿಗೆ ಈ ಕುರಿತು ಅರಿವು ಮೂಡಿಸುವ ಕಾರ್ಯ ಮಾಡಬೇಕು ಎಂದು ತಿಳಿಸಿದರು.ವಿವಿಯ ಪರಿಸರ ವಿಜ್ಞಾನ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಂಯೋಜಕ ಡಾ.ದ್ವಾರಕಾನಾಥ್ ವಿ., ಕುವೆಂಪು ವಿವಿಯ ಪರಿಸರ ವಿಜ್ಞಾನ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ. ನಾರಾಯಣಜೆ, ಪ್ರೊ. ಯೋಗೇಂದ್ರ ಕೆ., ಜೀವನ್‌ ಜ್ಯೋತಿ ಗ್ರಾಮೀಣ ಅಭಿವೃದ್ಧಿ ಮತ್ತು ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಂ.ಎನ್. ಚಂದ್ರಶೇಖರ್, ಸಿ. ನರಸಿಂಹಮೂರ್ತಿ, ಸ್ವಾರ್ಡ್ಸ್ ಸಂಸ್ಥೆಯ ಡಿ. ಟಿ. ಶ್ರೀನಿವಾಸ್ ಮೂರ್ತಿ ಉಪಸ್ಥಿತರಿದ್ದರು.