ಸಾರಾಂಶ
ದಕ್ಷಿಣ ಕೊಡಗಿನ ಪೊನ್ನಂಪೇಟೆ ತಾಲೂಕು ವ್ಯಾಪ್ತಿಯಲ್ಲಿ ವನ್ಯಜೀವಿಗಳ ಉಪಟಳ ಮಿತಿ ಮೀರಿದೆ. ಮುಂದಿನ ದಿನಗಳಲ್ಲಿ ಜೀವಹಾನಿ ಸಂಭವಿಸಿದರೆ ಅದಕ್ಕೆ ಅರಣ್ಯ ಅಧಿಕಾರಿಗಳೇ ನೇರ ಹೊಣೆಗಾರರಾಗಬೇಕಾಗುತ್ತದೆ ಎಂದು ವಿರಾಜಪೇಟೆ ಬಿಜೆಪಿ ಮಂಡಲ ವಕ್ತಾರ ಚೆಪ್ಪುಡಿರ ರಾಕೇಶ್ ದೇವಯ್ಯ ಎಚ್ಚರಿಕೆ ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ
ದಕ್ಷಿಣ ಕೊಡಗಿನ ಪೊನ್ನಂಪೇಟೆ ತಾಲೂಕು ವ್ಯಾಪ್ತಿಯಲ್ಲಿ ವನ್ಯಜೀವಿಗಳ ಉಪಟಳ ಮಿತಿ ಮೀರಿದೆ. ಮುಂದಿನ ದಿನಗಳಲ್ಲಿ ಜೀವಹಾನಿ ಸಂಭವಿಸಿದರೆ ಅದಕ್ಕೆ ಅರಣ್ಯ ಅಧಿಕಾರಿಗಳೇ ನೇರ ಹೊಣೆಗಾರರಾಗಬೇಕಾಗುತ್ತದೆ ಎಂದು ವಿರಾಜಪೇಟೆ ಬಿಜೆಪಿ ಮಂಡಲ ವಕ್ತಾರ ಚೆಪ್ಪುಡಿರ ರಾಕೇಶ್ ದೇವಯ್ಯ ಎಚ್ಚರಿಕೆ ನೀಡಿದ್ದಾರೆ.ಕಾಡಾನೆಗಳ ಹಿಂಡು ಮರಿಯಾನೆಗಳೊಂದಿಗೆ ಕಾಫಿ ತೋಟಗಳಲ್ಲೇ ಬೀಡು ಬಿಟ್ಟಿದ್ದು, ಬೆಳೆಗಾರರು ಹಾಗೂ ಕಾರ್ಮಿಕರು ಆತಂಕಗೊಂಡಿದ್ದಾರೆ. ಇದು ಕಾಫಿ ಕೊಯ್ಲಿನ ಸಮಯವಾಗಿದ್ದು, ಕಾಡಾನೆಗಳ ದಾಳಿಯ ಆತಂಕದಲ್ಲಿ ಕಾರ್ಮಿಕರು ತೋಟಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ, ಇದರಿಂದ ಬೆಳೆಗಾರರಿಗೆ ನಷ್ಟವಾಗುತ್ತಿದೆ ಎಂದು ದೂರಿದ್ದಾರೆ.ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ನಿತ್ಯ ಜೀವಭಯದಿಂದಲೇ ಓಡಾಡುತ್ತಿದ್ದಾರೆ. ಗ್ರಾಮಸ್ಥರ ಕಣ್ಣೊರೆಸಲು ಅರಣ್ಯ ಇಲಾಖೆ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ಕೈಗೊಳ್ಳುತ್ತದೆ. ಆದರೆ ತಿತಿಮತಿ ಮತ್ತು ಪೊನ್ನಂಪೇಟೆ ವಿಭಾಗದ ಅರಣ್ಯ ಸಿಬ್ಬಂದಿ ಜಂಟಿಯಾಗಿ ಕಾರ್ಯಾಚರಣೆ ನಡೆಸದೆ ಇರುವುದರಿಂದ ಕಾಡಾನೆಗಳು ಕಾಡಿಗೆ ಮರಳದೆ ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಸ್ಥಳಾಂತರಗೊಳ್ಳುತ್ತಿವೆ ಎಂದು ಪ್ರಕಟಣೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಿರುಗೂರು ಗ್ರಾ.ಪಂ ವ್ಯಾಪ್ತಿಯಲ್ಲಿ ಹುಲಿ ಮತ್ತು ಚಿರತೆಗಳು ಕೂಡ ಆತಂಕ ಸೃಷ್ಟಿಸಿದ್ದು, ಇವುಗಳ ಸಂಚರಿಸುತ್ತಿರುವ ದೃಶ್ಯ ಈಗಾಗಲೇ ಸೆರೆಯಾಗಿದೆ. ಹುಲಿ, ಚಿರತೆಗಳಿಂದ ಹಸುಗಳು ಬಲಿಯಾಗುತ್ತಿವೆ. ಅಕ್ಕಪಕ್ಕದ ಗ್ರಾಮಗಳಲ್ಲಿ ವನ್ಯಜೀವಿಗಳಿಂದ ಜೀವಭಯವಿದ್ದರೂ ಅರಣ್ಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಕೆಲವು ದಿನಗಳಿಂದ ಕಿರುಗೂರು ಭಾಗದಲ್ಲಿ ಹುಲಿಯೊಂದು ಸಂಚರಿಸುತ್ತಿದೆ, ಆದರೆ ಇದು ಹುಲಿಯೇ ಅಥವಾ ಚಿರತೆಯೇ ಎನ್ನುವ ಬಗ್ಗೆ ಅರಣ್ಯ ಇಲಾಖೆಗೇ ಖಾತ್ರಿಯಾಗಿಲ್ಲ. ಕೊಡಗು ಹೊರತು ಪಡಿಸಿದಂತೆ ಇತರ ಜಿಲ್ಲೆಗಳಲ್ಲಿ ದಾಳಿ ಮಾಡುವ ಕಾಡುಪ್ರಾಣಿಗಳನ್ನು ಜನರ ಸುರಕ್ಷತೆಯ ದೃಷ್ಟಿಯಿಂದ ತಕ್ಷಣ ಸೆರೆ ಹಿಡಿಯುವ ಕಾರ್ಯಾಚರಣೆ ನಡೆಯುತ್ತದೆ. ಆದರೆ ಕೊಡಗಿನಲ್ಲಿ ಮಾತ್ರ ವನ್ಯಜೀವಿಗಳ ಉಪಟಳವನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.