ಉತ್ತರ ಕನ್ನಡ ಜಿಲ್ಲೆಯಲ್ಲಿ ಖಾಲಿ ಇರುವ 14 ಅಬಕಾರಿ ಸನ್ನದುಗಳ ಇ-ಹರಾಜು ಪ್ರಕ್ರಿಯೆ ಕುರಿತು ಸಾರ್ವಜನಿಕರಿಗೆ ಸಮಗ್ರ ಮಾಹಿತಿ ನೀಡುವ ಉದ್ದೇಶದಿಂದ ಅಬಕಾರಿ ಇಲಾಖೆಯ ವತಿಯಿಂದ ಮಂಗಳವಾರ ಅಂಕೋಲಾದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ವಿಶೇಷ ಮಾಹಿತಿ ಕಾರ್ಯಾಗಾರ ನಡೆಯಿತು.
ಕನ್ನಡಪ್ರಭ ವಾರ್ತೆ ಅಂಕೋಲಾ
ಉತ್ತರ ಕನ್ನಡ ಜಿಲ್ಲೆಯಲ್ಲಿ ಖಾಲಿ ಇರುವ 14 ಅಬಕಾರಿ ಸನ್ನದುಗಳ ಇ-ಹರಾಜು ಪ್ರಕ್ರಿಯೆ ಕುರಿತು ಸಾರ್ವಜನಿಕರಿಗೆ ಸಮಗ್ರ ಮಾಹಿತಿ ನೀಡುವ ಉದ್ದೇಶದಿಂದ ಅಬಕಾರಿ ಇಲಾಖೆಯ ವತಿಯಿಂದ ಮಂಗಳವಾರ ಅಂಕೋಲಾದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ವಿಶೇಷ ಮಾಹಿತಿ ಕಾರ್ಯಾಗಾರ ನಡೆಯಿತು.ರಾಜ್ಯ ಅಬಕಾರಿ ಇಲಾಖೆಯು 2025-26ನೇ ಸಾಲಿನ ಅಬಕಾರಿ ಸನ್ನದುಗಳನ್ನು ಸಂಪೂರ್ಣ ಪಾರದರ್ಶಕ ಇ-ಹರಾಜು ವ್ಯವಸ್ಥೆಯ ಮೂಲಕ ಹಂಚಿಕೆ ಮಾಡಲು ಮುಂದಾಗಿದ್ದು, ಆಸಕ್ತ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಕೆ, ಇ-ಬಿಡ್ಡಿಂಗ್ ವಿಧಾನ ಹಾಗೂ ಅರ್ಹತಾ ನಿಯಮಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಈ ಕಾರ್ಯಾಗಾರ ಆಯೋಜಿಸಲಾಗಿತ್ತು.
ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಉಕ ಅಬಕಾರಿ ಇಲಾಖೆಯ ಉಪ ಆಯುಕ್ತ ಅಮಾನುಲ್ಲಾ ಖಾನ್, ಇ-ಹರಾಜು ವ್ಯವಸ್ಥೆಯು ಪಾರದರ್ಶಕ ಮತ್ತು ಸುಲಭ ಪ್ರಕ್ರಿಯೆಯಾಗಿದ್ದು, ಆಸಕ್ತರು ನಿಯಮಾನುಸಾರ ಭಾಗವಹಿಸಿ ಸನ್ನದು ಪಡೆಯಬಹುದಾಗಿದೆ. ಈ ಬಾರಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ವಿಶೇಷ ಮೀಸಲಾತಿ ಕಲ್ಪಿಸಲಾಗಿದ್ದು, ಅರ್ಹರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.ಜಿಲ್ಲಾ ಅಬಕಾರಿ ಅಧೀಕ್ಷಕ ಆರ್.ವಿ.ತಳೆಕರ್ ಮಾತನಾಡಿ, ಇ-ಹರಾಜಿನಲ್ಲಿ ಭಾಗವಹಿಸುವ ವಿಧಾನ, ಅರ್ಜಿ ಸಲ್ಲಿಕೆ ಹಾಗೂ ಅಗತ್ಯ ದಾಖಲೆಗಳ ಕುರಿತು ವಿವರಿಸಿ, ಯಾವುದೇ ಗೊಂದಲವಿಲ್ಲದೆ ಸಾರ್ವಜನಿಕರು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು.
ಎಂಎಸ್ಟಿಸಿ ಸಂಸ್ಥೆಯ ಅಧಿಕಾರಿ ತೇಜಸ್ ನಾಯ್ಕ ಇ-ಹರಾಜು ಪೋರ್ಟಲ್ ಕಾರ್ಯವೈಖರಿ, ಆನ್ಲೈನ್ ಅರ್ಜಿ ಸಲ್ಲಿಕೆ ಹಾಗೂ ಬಿಡ್ಡಿಂಗ್ ಪ್ರಕ್ರಿಯೆಯ ಕುರಿತು ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು. ವೆಬ್ಸೈಟ್‌ಗೆ ಭೇಟಿ ನೀಡಿ ಜಿಲ್ಲೆಯಲ್ಲಿ ಖಾಲಿ ಇರುವ ಸನ್ನದುಗಳ ವಿವರ, ಅರ್ಜಿ ಸಲ್ಲಿಕೆ ವಿಧಾನ ಹಾಗೂ ಇ-ಬಿಡ್ಡಿಂಗ್ ವೇಳಾಪಟ್ಟಿಯ ಮಾಹಿತಿ ಪಡೆಯಬಹುದಾಗಿದೆ ಎಂದು ತಿಳಿಸಿದರು.ಅಬಕಾರಿ ನಿರೀಕ್ಷಕ ಮಹೇಂದ್ರ ನಾಯ್ಕ ಇ-ಹರಾಜಿಗೆ ಸಂಬಂಧಿಸಿದ ಕಾನೂನು ನಿಯಮಗಳು, ಅರ್ಹತಾ ಮಾನದಂಡಗಳು ಹಾಗೂ ಕಡ್ಡಾಯವಾಗಿ ಪಾಲಿಸಬೇಕಾದ ಷರತ್ತುಗಳ ಕುರಿತು ವಿವರಿಸಿದರು.
ಕಾರ್ಯಕ್ರಮದಲ್ಲಿ ಅಂಕೋಲಾ ಅಬಕಾರಿ ನಿರೀಕ್ಷಕ ಚಾಲುಕ್ಯ ಶಹಾಪುರ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಅಬಕಾರಿ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ನೂರಾರು ಆಸಕ್ತ ಸಾರ್ವಜನಿಕರು ಭಾಗವಹಿಸಿದ್ದರು.