ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದ ಹಲವು ಅಬಕಾರಿ ಕಚೇರಿಗಳಲ್ಲಿ ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ಮತ್ತು ಉಪಲೋಕಾಯುಕ್ತ ಬಿ.ವೀರಪ್ಪ ನಡೆಸಿದ ಕಾರ್ಯಾಚರಣೆ ವೇಳೆ ಮತ್ತಷ್ಟು ಅಕ್ರಮಗಳು ಪತ್ತೆಯಾಗಿದ್ದು, ಅಬಕಾರಿ ನಿರೀಕ್ಷಕರು ಅನಧಿಕೃತವಾಗಿ ಖಾಸಗಿ ವ್ಯಕ್ತಿಗಳನ್ನು ನೇಮಿಸಿಕೊಂಡು ವೇತನ ನೀಡುತ್ತಿರುವುದು ಬೆಳಕಿಗೆ ಬಂದಿದೆ.ಚಂದಾಪುರ, ಕೋರಮಂಗಲ, ಯಲಹಂಕ, ಬನಶಂಕರಿ ಬಿಡಿಎ ಕಾಂಪ್ಲೆಕ್ಸ್‌ನಲ್ಲಿನ ಅಬಕಾರಿ ಕಚೇರಿಯಲ್ಲಿ ಖಾಸಗಿ ವ್ಯಕ್ತಿಗಳನ್ನಿಟ್ಟುಕೊಂಡು ಕೆಲಸ ಮಾಡಿಸುತ್ತಿರುವುದು ತಪಾಸಣೆ ವೇಳೆ ಗೊತ್ತಾಗಿದೆ. ಅಲ್ಲದೇ, ಅಬಕಾರಿ ನಿರೀಕ್ಷಕರೇ ಖಾಸಗಿ ವ್ಯಕ್ತಿಗಳಿಗೆ ವೇತನ ನೀಡುತ್ತಿದ್ದಾರೆ. ಚಂದಾಫುರ ಅಬಕಾರಿ ಕಚೇರಿಯಲ್ಲಿ ನಾಲ್ಕು ಅಬಕಾರಿ ನಿರೀಕ್ಷಕರು ನಾಲ್ಕು ಖಾಸಗಿ ವ್ಯಕ್ತಿಗಳನ್ನು ಅನಧಿಕೃತವಾಗಿ ನೇಮಿಸಿಕೊಂಡಿದ್ದರು. ಅವರಿಗೆ ಪ್ರತಿ ತಿಂಗಳು ಅಬಕಾರಿ ನಿರೀಕ್ಷಕರೇ 18-20 ಸಾವಿರ ರು. ಪಾವತಿಸುತ್ತಿದ್ದಾರೆ. ಅಲ್ಲದೇ, ಓರ್ವ ಚಾಲಕನನ್ನು ನೇಮಿಸಿಕೊಂಡು ಅವರಿಗೂ ₹18 ಸಾವಿರ ಪಾವತಿಸುತ್ತಿರುವುದು ಗೊತ್ತಾಗಿದೆ.
ಕೋರಮಂಗಲ ಅಬಕಾರಿ ಕಚೇರಿಯಲ್ಲಿಯೂ ಸಹ ಖಾಸಗಿ ವ್ಯಕ್ತಿಗೆ ಪ್ರತಿ ತಿಂಗಳು ಫೋನ್ ಪೇ ಮುಖಾಂತರ ₹20 ಸಾವಿರ ಪಾವತಿಸಲಾಗುತ್ತಿದೆ. ಯಲಹಂಕ ಅಬಕಾರಿ ಕಚೇರಿಯಲ್ಲಿ ಖಾಸಗಿ ವ್ಯಕ್ತಿಗೆ ₹9,500 ನೀಡಲಾಗುತ್ತಿತ್ತು. ಅಂತೆಯೇ ಬನಶಂಕರಿ ಬಿಡಿಎ ಕಾಂಪ್ಲೆಕ್ಸ್‌ನಲ್ಲಿನ ಅಬಕಾರಿ ಕಚೇರಿಯಲ್ಲಿ ಖಾಸಗಿ ವ್ಯಕ್ತಿಗಳನ್ನು ಕಂಪ್ಯೂಟರ್ ಆಪರೇಟರ್‌ಗಳೆಂದು ನೇಮಿಸಿಕೊಳ್ಳಲಾಗಿದೆ. ಅವರಿಗೆ ₹3,180, ₹1,200 ಮತ್ತು ₹5 ಸಾವಿರ ವೇತನ ನೀಡುತ್ತಿರುವ ಮಾಹಿತಿ ಲಭ್ಯವಾಗಿದೆ ಎಂದು ಲೋಕಾಯುಕ್ತ ಸಂಸ್ಥೆ ತಿಳಿಸಿದೆ.ಹೆಬ್ಬಾಳ, ರಾಮಮೂರ್ತಿನಗರ ಸೇರಿದಂತೆ ಹಲವು ಅಬಕಾರಿ ಕಚೇರಿಯಲ್ಲಿ ಅಧಿಕಾರಿಗಳು ಹಾಜರಾತಿ ಪುಸ್ತಕದಲ್ಲಿ ಸಹಿ ಹಾಕಿಲ್ಲ. ಲೋಕಾಯುಕ್ತರು ಮತ್ತು ಸಂಸ್ಥೆಯ ಸಿಬ್ಬಂದಿ ಭೇಟಿ ನೀಡಿದಾಗ ಅಧಿಕಾರಿಗಳು ಇಲ್ಲದಿರುವುದು ಕಂಡು ಬಂದಿದೆ. ಬಾಣಸವಾಡಿ ಕಚೇರಿಯಲ್ಲಿ ಕೆಲಸ ಮಾಡುವ ವೇಳೆ ಸಾರ್ವಜನಿಕರಿಂದ ವಸೂಲಿ ಮಾಡಿದ ಹಣವನ್ನು ಹೊರಗುತ್ತಿಗೆ ನೌಕರರ ಬಳಿ ಇಟ್ಟಿರುವುದು ಮತ್ತು ಖಾತೆಗಳಿಗೆ ಸಾರ್ವಜನಿಕರಿಂದ ಹಣ ವರ್ಗಾವಣೆ ಮಾಡುವ ಪರಿಪಾಠ ಕಂಡು ಬಂದಿದೆ ಎಂದು ಹೇಳಲಾಗಿದೆ.