ಸಾರಾಂಶ
ಕುಕನೂರು : ಗ್ರಾಮದ ಮಹಿಳೆಯರೆಲ್ಲ ಸೇರಿ ಗ್ರಾಮದಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಗೃಹಲಕ್ಷ್ಮಿ ಯೋಜನೆ ಹಣವನ್ನು ನೀಡುತ್ತಿರುವುದು ಖುಷಿ ಆಗಿದೆ. ಒಂದು ಉತ್ತಮ ಕೆಲಸಕ್ಕೆ ಹಣ ವಿನಿಯೋಗಿಸಿ ಸದ್ಬಳಕೆ ಆಗುತ್ತಿರುವುದು ಮಾದರಿ ಕಾರ್ಯ ಆಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.
ತಾಲೂಕಿನ ಹಿರೇಬೀಡಿನಾಳ ಗ್ರಾಮದಲ್ಲಿ ಶರಣಬಸವೇಶ್ವರ ದೇವಸ್ಥಾನ ನಿರ್ಮಾಣಕ್ಕೆಗೃಹಲಕ್ಷ್ಮಿ ಯೋಜನೆಯ ಹಣ ನೀಡಿದ ಮಹಿಳೆಯರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಅಭಿಮಾನಿ ಬಳಗದ ವಿನಾಯಕ ಬಿನ್ನಾಳ ಸನ್ಮಾನಿಸಿದರು. ಇದೇ ವೇಳೆ ಹಿರೇಬೀಡಿನಾಳ ಗ್ರಾಮದ ಗಂಗಮ್ಮ ಚೌಡ್ಕಿ ಎಂಬವರ ಜೊತೆ ಸಚಿವೆ ದೂರವಾಣಿ ಮೂಲಕ ಮಾತನಾಡಿದರು. ನಮ್ಮ ಗ್ರಾಮದಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಗ್ರಾಮದ ಮಹಿಳೆಯರು ಎಲ್ಲರೂ ₹2000 ನೀಡುತ್ತಿದ್ದೇವೆ. ತಾವು ಸಹ ಗ್ರಾಮಕ್ಕೆ ಆಗಮಿಸಬೇಕು. ದೇವಸ್ಥಾನ ನಿರ್ಮಾಣಕ್ಕೆ ತಮ್ಮಿಂದ ಸಹ ಭಕ್ತಿ ಸೇವೆ ಆಗಬೇಕು. ಹಾಗೆ ಗೃಹಲಕ್ಷ್ಮಿ ಯೋಜನೆಯ ಉಳಿದ ಕಂತುಗಳ ಹಣ ಬರುವಂತೆ ಮಾಡಿ ಎಂದು ಗಂಗಮ್ಮ ಮನವಿ ಮಾಡಿದರು.
ಈ ವೇಳೆ ಮಾತನಾಡಿದ ವಿನಾಯಕ ಬಿನ್ನಾಳ, ಕುಕನೂರು ತಾಲೂಕಿನ ಹಿರೇಬೀಡಿನಾಳ ಗ್ರಾಮದ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಒಂದು ತಿಂಗಳ ₹2000 ಹಣವನ್ನು ಗ್ರಾಮದ ಶ್ರೀ ಶರಣ ಬಸವೇಶ್ವರ ದೇವಸ್ಥಾನದ ನಿರ್ಮಾಣಕ್ಕೆ ದೇಣಿಗೆ ನೀಡುತ್ತಿರುವುದು ಹೆಮ್ಮೆಯ ಸಂಗತಿ. ಇಡೀ ರಾಜ್ಯಕ್ಕೆ ಮಹಿಳೆಯರ ಕಾರ್ಯ ಮೆಚ್ಚುಗೆಯಾಗಿದೆ ಎಂದರು. ಈ ವೇಳೆ ಗ್ರಾಮದ ಮುಖಂಡ ಅಶೋಕ ತೋಟದ ಸೇರಿದಂತೆ ಗ್ರಾಮಸ್ಥರು ಮಹಿಳೆಯರನ್ನು ಸನ್ಮಾನಿಸಿ ಅಭಿನಂದಿಸಿದರು.