ಸಾರಾಂಶ
ಆರೋಗ್ಯ ತಪಾಸಣೆ ಶಿಬಿರದಲ್ಲೂ ಜನತೆ ಅರ್ಜಿ ಸಲ್ಲಿಸಲು ಬಂದಿರುವುದು ಸರಿಯಲ್ಲ. ತಜ್ಞ ವೈದ್ಯರಿಂದ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ.
ಕೊಟ್ಟೂರು: ಆರೋಗ್ಯ ತಪಾಸಣೆ ಶಿಬಿರದಲ್ಲೂ ಜನತೆ ಅರ್ಜಿ ಸಲ್ಲಿಸಲು ಬಂದಿರುವುದು ಸರಿಯಲ್ಲ. ತಜ್ಞ ವೈದ್ಯರಿಂದ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ. ಒಂದು ದಿನದ ಮಟ್ಟಗಾದರೂ ವೈದ್ಯ ಸೇವೆ ಮಾಡಲು ಅವಕಾಶ ಮಾಡಿಕೊಡುವಂತೆ ಶಾಸಕ ಡಾ ಎನ್.ಟಿ. ಶ್ರೀನಿವಾಸ ಮನವಿ ಮಾಡಿದರು.ತಾಲೂಕಿನ ಉಜ್ಜಯಿನಿಯ ದ್ವಾರಕ ಕಾನ್ವೆಂಟ್ ಶಾಲೆ ಆವರಣದಲ್ಲಿ ತಮ್ಮ ತಂದೆ ಕೂಡ್ಲಿಗಿ ಮಾಜಿ ಶಾಸಕ ಎನ್.ಟಿ. ಬೊಮ್ಮಣ್ಣನವರ 3ನೇ ವರ್ಷದ ಪುಣ್ಯ ಸ್ಮರಣೆ ನಿಮಿತ್ತ ಅಕ್ಷರಾ ಐ ಫೌಂಡೇಶನ್ ನೇತೃತ್ವದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಭಾನುವಾರ ಮಾತನಾಡಿದರು.
ಕ್ಷೇತ್ರದಲ್ಲಿ ಅನೇಕರಿಗೆ ಆರೋಗ್ಯ ಸಮಸ್ಯೆಗಳಿದ್ದರೂ ಬಡತನದಿಂದ ಹೆಚ್ಚಿನ ಚಿಕಿತ್ಸೆ ಪಡೆಯಲಾಗದ ಸ್ಥಿತಿಯಲ್ಲಿದ್ದಾರೆ. ಕೂಡ್ಲಿಗಿ ಕ್ಷೇತ್ರದಲ್ಲಿ ತಮ್ಮ ತಂದೆಯವರು ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದ್ದರು. ತಂದೆಯವರ ಆಶಯದಂತೆ ಅವರ ಪುಣ್ಯ ಸ್ಮರಣೆಯಲ್ಲಿ ಆರೋಗ್ಯ ತಪಾಸಣೆ ಹಮ್ಮಿಕೊಳ್ಳುವ ಮೂಲಕ ಆಚರಿಸುತ್ತಿದ್ದೇವೆ. ಕ್ಷೇತ್ರದ ಉಜ್ಜಯಿನಿಯಲ್ಲಿ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೊಸ ಕಟ್ಟಡ ನಿರ್ಮಾಣ ಸೇರಿ ಕ್ಷೇತ್ರದ ಹಲವೆಡೆ ಸರ್ಕಾರಿ ಆಸ್ಪತ್ರೆಗಳನ್ನು ತೆರೆಯಲಾಗುತ್ತಿದೆ. ಇಡೀ ಕ್ಷೇತ್ರದ ಜನರ ಆರೋಗ್ಯ ಕಾಪಾಡುವುದು ಬಹು ಮುಖ್ಯ ಕೆಲಸವಾಗಿದೆ ಎಂದು ಹೇಳಿದರು.ಉಜ್ಜಯಿನಿ ಪೀಠದ ಜ.ಸಿದ್ಧಲಿಂಗ ಶಿವಾಚಾರ್ಯ ರಾಜದೇಶೀಕೇಂದ್ರ ಭಗವತ್ಪಾದರು ಸಾನ್ನಿಧ್ಯ ವಹಿಸಿದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಗುರುಸಿದ್ದನಗೌಡ ಮಾತನಾಡಿದರು. ಫೌಂಡೇಶ್‌ನ್‌ನ ಎಂಡಿ ಡಾ.ಪುಷ್ಪಾ ಎನ್. ಗ್ರಾಪಂ ಅಧ್ಯಕ್ಷ ಚೌಡಪ್ಪ, ಮುಖಂಡರಾದ ಎಎಂ ಚನ್ನವೀರಸ್ವಾಮಿ, ಎಸ್.ರಾಜೇಂದ್ರಪ್ರಸಾದ್, ಕೊಡದಪ್ಪ, ಮಲ್ಲಿಕಾರ್ಜುನ, ಶಾಂತನಗೌಡ ಇದ್ದರು. ನಿವೃತ್ತ ಶಿಕ್ಷಕ ಕಾನಮಡುಗು ಶರಣಪ್ಪ ಪ್ರಾಸ್ತಾವಿಕ ಮಾತನಾಡಿ ನಿರ್ವಹಿಸಿದರು. ತಜ್ಞ ವೈದ್ಯರನ್ನು, ಮುಖಂಡರನ್ನು ಸನ್ಮಾನಿಸಲಾಯಿತು.ಶಿಬಿರದಲ್ಲಿ 2400 ಜನ ತಪಾಸಣೆ ಮಾಡಿಸಿಕೊಂಡರು. ಕಣ್ಣಿನ ತಪಾಸಣೆ ಮಾಡಿಸಿಕೊಂಡ 980 ಜನರ ಪೈಕಿ 380 ಜನರನ್ನು ಕಣ್ಣಿನ ಪೊರೆ ಚಿಕಿತ್ಸೆಗೆ ಶಿಫಾರಸು ಮಾಡಲಾಯಿತು.
ಕಣ್ಣಿನ ತಜ್ಞ ಶಾಸಕ ಡಾ.ಎನ್.ಟಿ. ಶ್ರೀನಿವಾಸ ಸೇರಿ ಡಾ. ಪಿ.ಆರ್. ತಿಮ್ಮರಾಜ, ಡಾ.ಭರತ್‌ಕುಮಾರ್, ಡಾ.ಎಲ್‌ಎನ್ ಮಧುಕುಮಾರ, ಡಾ.ಟಿ.ರಾಘವೇಂದ್ರ, ಡಾ. ಗುರುಬಸವನಗೌಡ,, ಡಾ. ಜಿಬಿಜಿ, ಡಾ.ಶಿವಕುಮಾರ್, ಡಾ. ಕೆ.ಎಂ. ಸತೀಶ್‌ಕುಮಾರ್, ಡಾ.ರಮೇಶ್ ಪೂಜಾರ್, ಡಾ.ರಶ್ಮಿ ತಪಾಸಣೆ ನಡೆಸಿದರು.ಶಾಸಕರಿಂದ ತಪಾಸಣೆ:
ಕಣ್ಣಿನ ತಜ್ಞರೂ ಆದ ಶಾಸಕ ಡಾ.ಎನ್.ಟ.ಶ್ರೀನಿವಾಸ ಶಿಬಿರದಲ್ಲಿ ಸ್ವತಃ ಅವರೇ ಕಣ್ಣಿನ ಪರೀಕ್ಷೆ ನಡೆಸಿದರು. ಉಚಿತ ಕನ್ನಡಕ ನೀಡಿದರು. ನಾನಾ ವಿಭಾಗಗಲ್ಲಿ ಪರೀಕ್ಷೆ ಮಾಡಿಸಿಕೊಂಡವರಿಗೆ ಔಷಧ ವಿತರಿಸಲಾಯಿತು.