ಶಿವಾನಂದ ಗೊಂಬಿ
ಹುಬ್ಬಳ್ಳಿ:ಇದೇ ಮೊದಲ ಬಾರಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಪಾತ್ರವಿಲ್ಲದೇ, ಶಿಫಾರಸು, ಲಾಬಿ ಇಲ್ಲದೇ ನಡೆಯುತ್ತಿರುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ನೇಮಕಕ್ಕೆ ಭಾರೀ ಪೈಪೋಟಿ ಏರ್ಪಟ್ಟಿದೆ. ಧಾರವಾಡ ಗ್ರಾಮೀಣ ಹಾಗೂ ಮಹಾನಗರ ಜಿಲ್ಲಾಧ್ಯಕ್ಷ ಸ್ಥಾನಗಳಿಗೆ ಡಜನಗಟ್ಟಲೇ ಆಕಾಂಕ್ಷಿಗಳು ಅರ್ಜಿ ಸಲ್ಲಿಸುತ್ತಿದ್ದಾರೆ.
ಅರ್ಜಿಗಳ ಸಂಖ್ಯೆ ನೋಡಿಯೇ ವೀಕ್ಷಕರು ಹೌಹಾರುತ್ತಿದ್ದಾರೆ. ಕೆಪಿಸಿಸಿಯು ಡಿಸಿಸಿಗಳನ್ನು ಪುನರ್ ರಚಿಸಲು ಯೋಚಿಸಿ ಅಧ್ಯಕ್ಷರ ನೇಮಕಕ್ಕೆ ಮುಂದಾಗಿದೆ. ಅರ್ಹರಿಗೆ, ನಿಷ್ಠಾವಂತರಿಗೆ, ಸಂಘಟಕರಿಗೆ ಅಧ್ಯಕ್ಷ ಸ್ಥಾನ ಸಿಕ್ಕರೆ ಪಕ್ಷವನ್ನು ಬೇರು ಮಟ್ಟದಿಂದ ಕಟ್ಟಬಹುದು. ಪಕ್ಷ ಗಟ್ಟಿಯಾಗಿ ಸಂಘಟನೆಯಾದರೆ 2028ರ ವಿಧಾನಸಭೆ, 2029ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಠಕ್ಕರ್ ಕೊಡಬಹುದು. ಹೆಚ್ಚಿನ ಸ್ಥಾನ ಗೆದ್ದು, ರಾಜ್ಯ ಹಾಗೂ ದೇಶದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಬಹುದು ಎಂಬ ಲೆಕ್ಕಾಚಾರ ಎಐಸಿಸಿಯದ್ದು,.ಅದಕ್ಕಾಗಿ ಈ ಸಲ ಶಿಫಾರಸು, ಲಾಬಿಯ ಆಧಾರದ ಮೇಲೆ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡುವ ಬದಲು ಸಾರ್ವಜನಿಕರು, ಕಾರ್ಯಕರ್ತರಿಗೆ ಯಾರು ಹತ್ತಿರವಾಗಿರುತ್ತಾರೋ? ಯಾರು ಸಂಘಟಕರಾಗಿದ್ದಾರೋ ಅವರನ್ನೇ ಆರಿಸಿ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಲು ನಿರ್ಧರಿಸಿದೆ.
ಈ ಹಿನ್ನೆಲೆಯಲ್ಲಿ ಮಹಾನಗರ ಹಾಗೂ ಗ್ರಾಮೀಣ ಜಿಲ್ಲಾಧ್ಯಕ್ಷರ ನೇಮಕಕ್ಕೆ ಎಐಸಿಸಿಯಿಂದಲೇ ವೀಕ್ಷಕರನ್ನು ನೇಮಕ ಮಾಡಿದೆ. ಎಐಸಿಸಿ ವೀಕ್ಷಕರನ್ನಾಗಿ ಸಯ್ಯದ್ ಅಜ್ಮತ್ ಉಲ್ಲಾ ಹುಸೈನಿ ಅವರನ್ನು ನೇಮಿಸಿದೆ. ಇವರಿಗೆ ಕೆಪಿಸಿಸಿಯಿಂದ ಮೂವರನ್ನು ಸಹಾಯಕರನ್ನಾಗಿ ನೇಮಿಸಿದೆ. ಇವರು ಕಳೆದ 10 ದಿನಗಳಿಂದ ಜಿಲ್ಲೆಗಳಲ್ಲಿ ಪ್ರತಿ ಕ್ಷೇತ್ರಗಳಿಗೆ ಭೇಟಿ ನೀಡಿ ಮುಖಂಡರ, ಕಾರ್ಯಕರ್ತರ ಮಾಹಿತಿ ಪಡೆಯುತ್ತಿದ್ದಾರೆ. ಬಳಿಕ ಸಾರ್ವಜನಿಕ ಸಂಘಟನೆಗಳಿಂದಲೂ ಅಭಿಪ್ರಾಯ ಪಡೆದು ಪಟ್ಟಿ ತಯಾರಿಸಿ ಎಐಸಿಸಿಗೆ ಸಲ್ಲಿಸಲಿದೆ. ಅಲ್ಲಿಂದ ಅಂತಿಮವಾಗಿ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಿ ಹೆಸರು ಬಿಡುಗಡೆ ಮಾಡಲಾಗುತ್ತಿದೆ. ಇನ್ನೂ ಏಳೆಂಟು ದಿನ ಜಿಲ್ಲೆಯಲ್ಲೇ ಉಳಿಯಲಿದ್ದಾರೆ.
ಯಾರ್ಯಾರು ರೇಸ್‌ನಲ್ಲಿ:
ಮಹಾನಗರ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಹುಡಾ ಅಧ್ಯಕ್ಷ ಶಾಕೀರ ಸನದಿ, ದೀಪಕ ಚಿಂಚೋರೆ, ಅನ್ವರ ಮುಧೋಳ, ರಾಜಶೇಖರ ಮೆಣಸಿನಕಾಯಿ, ಸದಾನಂದ ಡಂಗನವರ, ಮೋಹನ ಹಿರೇಮನಿ, ಸ್ವಾತಿ ಮಳಗಿ, ಸಂತೋಷ ಜಕ್ಕಪ್ಪನವರ, ಹಾಜಿಅಲಿ ಹಿಂಡಸಗೇರಿ, ಯೂಸೂಫ್ ಸವಣೂರ, ಪಾಲಿಕೆ ಸದಸ್ಯರಾದ ಇಮ್ರಾನ್ ಎಲಿಗಾರ, ಆರೀಫ್ ಭದ್ರಾಪುರ, ರಜತ್ ಉಳ್ಳಾಗಡ್ಡಿಮಠ, ನವೀದ ಮುಲ್ಲಾ, ಬಂಗಾರೇಶ ಹಿರೇಮಠ, ಅಷ್ಪಕ ಕುಮಟಕರ, ರಾಬರ್ಟ್ ದದ್ದಾಪುರಿ ಸೇರಿದಂತೆ ಬರೋಬ್ಬರಿ ಮೂರು ಡಜನ್ (36 ಜನ) ಆಕಾಂಕ್ಷಿಗಳಾಗಿದ್ದಾರೆ. ಇನ್ನು ಗ್ರಾಮೀಣ ಜಿಲ್ಲಾಧ್ಯಕ್ಷ ಪಟ್ಟಕ್ಕೆ ವಿನೋದ ಅಸೂಟಿ, ಚಂದ್ರಶೇಖರ ಜುಟ್ಟಲ್, ಗೌಡಪ್ಪಗೌಡ ಪಾಟೀಲ, ಷಣ್ಮುಖ ಶಿವಳ್ಳಿ, ಜಗದೀಶ ಉಪ್ಪಿನ, ವಿಜಯಗೌಡ ಪಾಟೀಲ ಸೇರಿದಂತೆ 14ಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದಾರೆ ಎಂದು ಮೂಲಗಳು ತಿಳಿಸುತ್ತವೆ.ಆಕಾಂಕ್ಷಿಗಳ ಸಂಖ್ಯೆ ನೋಡಿಯೇ ವೀಕ್ಷಕರು ಹೌಹಾರಿದ್ದಾರಂತೆ. ಆದರೂ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುವವರು ಯಾರು? ಯಾರಾದರೆ ಪಕ್ಷ ಸಂಘಟನೆಯಾಗುತ್ತದೆ ಎಂಬ ಲೆಕ್ಕಾಚಾರ ಹಾಕುತ್ತಿದ್ದಾರೆ.ನಿಯಮ ಬದಲಾಗುತ್ತಾ?
ಕಾಂಗ್ರೆಸ್ ಮಹಾನಗರ ಜಿಲ್ಲೆಗೆ ಮುಸ್ಲಿಂ, ಗ್ರಾಮೀಣಕ್ಕೆ ಲಿಂಗಾಯತ ಅಥವಾ ಬೇರೆ ಸಮುದಾಯದವರನ್ನು ನೇಮಕ ಮಾಡುವುದು ವಾಡಿಕೆ. ಇದೀಗ ಎಲ್ಲ ಸಮುದಾಯದವರು ಅರ್ಜಿ ಸಲ್ಲಿಸಿದ್ದಾರೆ. ಜಾತಿ ನೋಡದೇ ನೇಮಕ ಮಾಡುತ್ತದೆಯೋ? ಅಥವಾ ಮೊದಲಿನಂತೆ ಮಹಾನಗರಕ್ಕೆ ಮುಸ್ಲಿಂ, ಗ್ರಾಮೀಣಕ್ಕೆ ಬೇರೆ ಸಮುದಾಯದವರನ್ನು ನೇಮಿಸುತ್ತದೆಯೋ ಕಾಯ್ದು ನೋಡಬೇಕಿದೆ.