ಸಾರಾಂಶ
ಕನ್ನಡಪ್ರಭ ವಾರ್ತೆ ಸುರಪುರ
ವಿಶ್ವದಲ್ಲಿಯೇ ಭಾರತ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿದ್ದು, ಜನರೇ ಮತದಾನ ಮಾಡಿ ತಮ್ಮನ್ನು ತಾವು ಆಳಿಕೊಳ್ಳುವ ವಿಧಾನವಿದೆ. ಆದ್ದರಿಂದ 18 ವರ್ಷ ಮೇಲ್ಪಟ್ಟವರು ತಪ್ಪದೇ ಮಾಡಬೇಕೆಂದು ಚುನಾವಣಾಧಿಕಾರಿ ಕಾವ್ಯರಾಣಿ ಕೆ.ವಿ. ಹೇಳಿದರು.ನಗರದ ನಗರಸಭೆ ಆವರಣದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದ ಪಾತ್ರ ಮಹತ್ತರವಾದದು. ಸಂವಿಧಾನದತ್ತವಾಗಿ ನೀಡಿದ ಮತದಾನದ ಹಕ್ಕನ್ನು ತಪ್ಪದೇ ಚಲಾಯಿಸಿ ಸಂವಿಧಾನದ ಗೌರವ ಎತ್ತಿಹಿಡಿಯಬೇಕು ಎಂದರು.
ಮತದಾನ ಜನರ ಪ್ರಮುಖ ಹಕ್ಕು. ಪ್ರಜೆಗಳಿಂದ ಆಯ್ಕೆಯಾದ ಸರ್ಕಾರ ಜನರ ಆಶೋತ್ತರಗಳಂತೆಯೇ ನಡೆಯಬೇಕೆಂಬುದು ಸಂವಿಧಾನದ ನಿಯಮ. ಮತದಾನದ ಪ್ರಾಮುಖ್ಯತೆ ಮತ್ತು ಪ್ರಜೆಗಳ ಮೇಲಿರುವ ಜವಾಬ್ದಾರಿಯ ಕುರಿತು ಜಾಗೃತಿ ಮೂಡಿಸುವುದಕ್ಕಾಗಿಯೇ ಪ್ರತಿವರ್ಷ ಜ.25ರಂದು ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತದೆ ಎಂದರು.ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಸಜ್ಜನ್ ಮಾತನಾಡಿ, ಭಾರತ ಚುನಾವಣಾ ಆಯೋಗದ ಸಂಸ್ಥಾಪನಾ ಗುರುತಿಸಲು ಪ್ರತಿವರ್ಷ ರಾಷ್ಟ್ರೀಯ ಮತದಾರ ದಿನ ಆಚರಿಸುತ್ತೇವೆ. ಒಂದು ಮತ ಒಬ್ಬ ಅಭ್ಯರ್ಥಿಯ ರಾಜಕೀಯ ಭವಿಷ್ಯವನ್ನೇ ನಿರ್ಧರಿಸುತ್ತದೆ. ನಾವೆಲ್ಲರು ಶಕ್ತಿಯುತ ಭಾರತ ನಿರ್ಮಾಣಕ್ಕಾಗಿ ತಪ್ಪದೇ ಅರ್ಹರಿಗೆ ಮತ ಚಲಾಯಿಸಬೇಕು ಎಂದರು.
ಸಹಾಯಕ ಚುನಾವಣಾಧಿಕಾರಿ ನಾಗಮ್ಮ ಕಟ್ಟಿಮನಿ ಮಾತನಾಡಿ, ತಾಲೂಕಿನಲ್ಲಿ ವಿವಿಧ ಸೌಲಭ್ಯಕ್ಕೆ ಆಗ್ರಹಿಸಿ ಚುನಾವಣೆ ಬಹಿಷ್ಕಾರಕ್ಕೆ ಮತದಾರರು ಮುಂದಾಗಬಾರದು. ಕಳೆದ ಚುನಾವಣೆಯಲ್ಲಿ ಶೇ.70ಕ್ಕಿಂತ ಹೆಚ್ಚು ಮತದಾನವಾಗಿತ್ತು. ಪ್ರಸಕ್ತ ಸಾಲಿನಲ್ಲಿ ಶೇ.100ರಷ್ಟು ಮತದಾನವಾಗಲು ಸಹಕರಿಸಬೇಕು ಎಂದರು.ಈ ವೇಳೆ ನಗರಸಭೆ ಪೌರಾಯುಕ್ತ ಮಂಜುನಾಥ ಶಿಡ್ಲಘಟ್ಟ, ಶಿರಸ್ತೇದಾರ ಸಲೀಮ್ ಮಲೀಕ್, ಗುರುಸ್ವಾಮಿ, ಸಾಮ್ಯುವೆಲ್, ಗ್ರಂಥಾಲಯ ಅಧಿಕಾರಿ ವಣಕೇರಪ್ಪ, ಸಮನ್ವಯಾಧಿಕಾರಿ ದುರ್ಗಪ್ಪ, ಸಹಾಯಕ ಇಂಜಿನಯರ್ ಮಹೇಶ್, ಪ್ರಥಮ ದರ್ಜೆ ಸಹಾಯಕ ಸುನೀಲ, ಬಸವರಾಜ್, ಹಣಮಂತ ಯಾದವ, ನಗರಸಭೆ ವ್ಯವಸ್ಥಾಪಕ ಯಲ್ಲಪ್ಪ ನಾಯಕ ಡೊಣ್ಣಿಗೇರಿ, ಬಿಎಲ್‌ಒ ಹಣಮಂತ(ದತ್ತು) ಸೇರಿದಂತೆ ಇತರರಿದ್ದರು.