- ಶ್ರೀಮತಿ ನಾಗಮ್ಮ ಕೇಶವ ಮೂರ್ತಿ ಸಭಾಂಗಣದಲ್ಲಿ ಆಯೋಜನೆ
- - -ದಾವಣಗೆರೆ: ನಗರದ ಎಂಸಿಸಿ ಬಿ ಬ್ಲಾಕ್‌ನಲ್ಲಿರುವ ಶ್ರೀಮತಿ ನಾಗಮ್ಮ ಕೇಶವ ಮೂರ್ತಿ ಸಭಾಂಗಣದಲ್ಲಿ ಅಂತರ ರಾಷ್ಟ್ರೀಯ ಮಹಿಳಾ ದಿನ ಅಂಗವಾಗಿ ಮಹಿಳಾ ಉದ್ಯಮಿಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಮಾ.6 ರಿಂದ 8ರವರೆಗೆ ಆಯೋಜಿಸಲಾಗಿದೆ ಎಂದು ಬ್ರಾಹ್ಮಣ ಸಮಾಜ ಸೇವಾ ಸಂಘದ ಮಹಿಳಾ ವಿಭಾಗ ಅಧ್ಯಕ್ಷೆ ನಳಿನಿ ಅಚ್ಯುತ್ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳೆಯರೇ ಸಿದ್ಧಪಡಿಸಿದ ಅನೇಕ ವಸ್ತುಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ. ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಉದ್ಯಮಿಗಳಿಗೆ ಪ್ರೋತ್ಸಾಹಿಸಲು ವಿಶೇಷ ಕೈ ಕಸೂತಿ, ಸಿದ್ಧ ಉಡುಪುಸೀರೆಗಳು, ವಿವಿಧ ರೀತಿಯ ಪರ್ಸ್‌ಗಳು, ಬ್ಯಾಗ್, ಹಪ್ಪಳ, ಸಂಡಿಗೆ, ಉಪ್ಪಿನಕಾಯಿ, ಆಯುರ್ವೇದ ಔಷಧ, ನೈಸರ್ಗಿಕ ಆಹಾರ ಪದಾರ್ಥಗಳು, ಅಲಂಕಾರಿಕ ವಸ್ತುಗಳು ಲಭ್ಯ ಇರುತ್ತವೆ. ಈವರೆಗೆ 75 ಮಳಿಗೆಗಳಿಗೆ ನೋಂದಣಿ ಆಗಿವೆ ಎಂದರು.ಮಾ.6ರಂದು ಬೆಳಗ್ಗೆ 10 ಗಂಟೆಗೆ ನಡೆಯುವ ಮೇಳದ ಉದ್ಘಾಟನಾ ಸಮಾರಂಭದಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಬೆಂಗಳೂರಿನ ಡಾ.ವನಿತಾ ಹೆಬ್ಬಾರ್, ದಾವಣಗೆರೆ- ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತೆ ಜಿ.ರೇಣುಕಾ ಇತರರು ಭಾಗವಹಿಸುವರು ಎಂದು ಹೇಳಿದರು.
ಮಾ.8ರ ಬೆಳಗ್ಗೆ 11 ಗಂಟೆಗೆ ನಡೆಯುವ ಮೇಳದ ಸಮಾರೋಪದಲ್ಲಿ ಬೆಂಗಳೂರಿನ ಆಡುಕಲೆ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕಿ, ಖ್ಯಾತ ಸುಗಮ ಸಂಗೀತ ಗಾಯಕಿ ಮಾಲತಿ ಶರ್ಮಾ, ಜಿಲ್ಲಾ ಬ್ರಾಹ್ಮಣ ಸಮಾಜದ ಅಧ್ಯಕ್ಷ ಡಾ. ಬಿ.ಟಿ. ಅಚ್ಯುತ್, ತಾಲೂಕು ಅಧ್ಯಕ್ಷ ಡಾ. ಎಂ.ಸಿ. ಶಶಿಕಾಂತ್ ಹಾಗೂ ಮೋತಿ ಇಂಟರ್ ನ್ಯಾಷನಲ್ ಹಾಲಿಡೇಸ್ ನ ಭವಾನಿ ಗುರುಪ್ರಸಾದ್ ಇತರರು ಭಾಗವಹಿಸುವರು. ಭವಾನಿ ಗುರುಪ್ರಸಾದ್ ಅವರಿಗೆ ಈ ಬಾರಿಯ ಮಹಿಳಾ ಸಾಧಕಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ದಾಕ್ಷಾಯಣಿ ಮೂರ್ತಿ, ನಾಗರತ್ನ ಜಗದೀಶ್, ಶ್ರೀಮತಿ ಅಡಿಗ ಇದ್ದರು.
- - --2ಕೆಡಿವಿಜಿ34:
ದಾವಣಗೆರೆಯಲ್ಲಿ ಮಹಿಳಾ ಉದ್ಯಮಿಗಳ ವಸ್ತುಪ್ರದರ್ಶನ, ಮಾರಾಟ ಮೇಳ ಆಯೋಜಿಸಿರುವ ಕುರಿತು ನಳಿನಿ ಅಚ್ಯುತ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.