ಸಚಿವ ಮಹದೇವಪ್ಪರನ್ನು ಗಡಿಪಾರು ಮಾಡಿ

| Published : Apr 21 2024, 02:22 AM IST

ಸಾರಾಂಶ

ತಮ್ಮ ಪುತ್ರನನ್ನು ಗೆಲ್ಲಿಸುವುದಕೋಸ್ಕರ ಕ್ಷೇತ್ರದಲ್ಲಿ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ದಲಿತ ಮುಖಂಡರನ್ನು ಹಣ್ಣು ತರಕಾರಿ ಖರೀದಿಸುವಂತೆ ಖರೀದಿ ಮಾಡಿ, ಹಣ, ಹೆಂಡ ಹಂಚಿ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಇವರನ್ನು ಚುನಾವಣಾ ಆಯೋಗ ಚುನಾವಣೆ ಮುಗಿಯುವವರೆಗೆ ಗಡಿಪಾರು ಮಾಡಬೇಕೆಂದು ಕ್ಷೇತ್ರದ ಬಿಎಸ್‌ಪಿ ಅಭ್ಯರ್ಥಿ ಎಂ.ಕೃಷ್ಣಮೂರ್ತಿ ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ತಮ್ಮ ಪುತ್ರನನ್ನು ಗೆಲ್ಲಿಸುವುದಕೋಸ್ಕರ ಕ್ಷೇತ್ರದಲ್ಲಿ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ದಲಿತ ಮುಖಂಡರನ್ನು ಹಣ್ಣು ತರಕಾರಿ ಖರೀದಿಸುವಂತೆ ಖರೀದಿ ಮಾಡಿ, ಹಣ, ಹೆಂಡ ಹಂಚಿ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಇವರನ್ನು ಚುನಾವಣಾ ಆಯೋಗ ಚುನಾವಣೆ ಮುಗಿಯುವವರೆಗೆ ಗಡಿಪಾರು ಮಾಡಬೇಕೆಂದು ಕ್ಷೇತ್ರದ ಬಿಎಸ್‌ಪಿ ಅಭ್ಯರ್ಥಿ ಎಂ.ಕೃಷ್ಣಮೂರ್ತಿ ಒತ್ತಾಯಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು- ಕೊಡಗು ಮತ್ತು ಚಾಮರಾಜನಗರ ಲೋಕಸಭಾ ಕ್ಷೇತ್ರಗಳಲ್ಲಿ ಬಿಎಸ್‌ಪಿ ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆಯುವ ಕುತಂತ್ರ ಮಾಡಿದರು ಎಂದು ಆರೋಪಿಸಿದರು. ಹಣ, ಹೆಂಡವನ್ನು ಹಂಚುವ ಮೂಲಕ ಕ್ಷೇತ್ರದಲ್ಲಿ ಬಿಎಸ್‌ಪಿ ಅಭ್ಯರ್ಥಿ ಪ್ರಚಾರಕ್ಕೂ ತಡೆವೊಡ್ಡುತ್ತಿದ್ದಾರೆ. ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರು ಸೇರಿದಂತೆ ದಲಿತ ಸಂಘಟನೆಗಳ ಮುಖಂಡರಿಗೆ ಆಸೆ, ಅಮಿಷ ತೋರಿಸಿ ಖರೀದಿ ಮಾಡುತ್ತಿದ್ದಾರೆ ಎಂದರು.

ವಿ.ಶ್ರೀನಿವಾಸಪ್ರಸಾದ್, ಆರ್‌.ಧ್ರುವನಾರಾಯಣ ದಲಿತ ನಾಯಕರ ದಮನಕ್ಕೂ ಮಹದೇವಪ್ಪ ಅವರೇ ಕಾರಣ. ಸಂವಿಧಾನ ರಕ್ಷಣೆ ನೆಪದಲ್ಲಿ ತಮ್ಮ ಪುತ್ರನಿಗೋಸ್ಕರ ಅಸಂವಿಧಾನಿಕ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ದಲಿತ ಸಂಘರ್ಷ ಸಮಿತಿಗಳನ್ನು ದುರುಪಯೋಗಪಡಿಸಿಕೊಂಡು, ಸರ್ಕಾರ ಬಂದರೆ, ನಿಗಮ ಮತ್ತು ಎಂಎಲ್‌ಸಿ ಮಾಡುತ್ತೇವೆ ಎಂದು ಹೇಳಿ ಇಲ್ಲಿಯವರೆಗೂ ಯಾವೊಬ್ಬ ಮುಖಂಡನಿಗೂ ಯಾವ ಅಧಿಕಾರವನ್ನು ಕೊಟ್ಟಿಲ್ಲ ಎಂದರು.ಕ್ಷೇತ್ರದಲ್ಲಿ ಹಿರಿಯ ಶಾಸಕ ಸಿ.ಪುಟ್ಟರಂಗಶೆಟ್ಟರಿಗೆ ಸಚಿವ ಸ್ಥಾನ ತಪ್ಪಲು ಮಹದೇವಪ್ಪ ಅವರೇ ಕಾರಣ. ಮಾಜಿ ಶಾಸಕ ಜಯಣ್ಣ ಅವರನ್ನು ನಿರ್ಲಕ್ಷಿಸುತ್ತಿದ್ದಾರೆ. ಮೀಸಲು ಕ್ಷೇತ್ರದಲ್ಲಿ ಇವರ ಪುತ್ರ ಬಿಟ್ಟರೆ ಬೇರೆ ಯಾವ ದಲಿತ ಕಾರ್ಯಕರ್ತರು ಇರಲಿಲ್ಲವೇ ಎಂದು ಪ್ರಶ್ನಿಸಿದರು.

ನಾನು ಸಂಸದನಾದರೆ ಮೀಸಲು ಕ್ಷೇತ್ರದಲ್ಲಿ ಒಂದು ಬಾರಿ ಸ್ವರ್ಧಿಸಿ ಗೆದ್ದರೆ, ಮತ್ತೊಂದು ಬಾರಿಗೆ ಅದೇ ಕುಟುಂಬದವರು ಸ್ಪರ್ಧಿಸದಂತೆ ಕಾನೂನು ತಿದ್ದುಪಡಿಗೆ ಆಗ್ರಹಿಸುತ್ತೇವೆ ಎಂದರು. ಕಾಂಗ್ರೆಸ್ ಅಭ್ಯರ್ಥಿ ಸುನೀಲ್‌ ಬೋಸ್ ಹಿನ್ನೆಲೆ ಏನು, ಯಾವ ಚಳವಳಿಯಲ್ಲಿ ಭಾಗವಹಿಸಿದ್ದಾರೆ. ಸಮುದಾಯಕ್ಕೆ ಇವರ ಕೊಡುಗೆ ಏನು? ಕಳೆದ ಬಾರಿ ನಂಜನಗೂಡು ವಿಧಾನಸಭಾ ಉಪ ಚುನಾವಣೆಯಲ್ಲಿ ಸರ್ಕಾರ ಅಧಿಕಾರ ದುರುಪಯೋಗಪಡಿಸಿಕೊಂಡರು. ಈಗ ಈ ಕ್ಷೇತ್ರದಲ್ಲೂ ಆಗುತ್ತಿದೆ. ಆದ್ದರಿಂದ ಚುನಾವಣಾ ಆಯೋಗ ಸಚಿವ ಮಹದೇವಪ್ಪ ಅವರನ್ನು ಗಡಿಪಾರು ಮಾಡಬೇಕು. ಸಮಾಜ ಕಲ್ಯಾಣ ಇಲಾಖೆಗೆ ಮಹದೇವಪ್ಪ ಅನರ್ಹರು ಎಂದರು.

ಮಹದೇವಪ್ಪ ಎರಡು ದಿನ ಕ್ಷೇತ್ರ ಬಿಟ್ಟು ಹೋದರೆ ಸುನೀಲ್‌ಬೋಸ್‌ಗೆ ಬೆಲೆ ಇರಲ್ಲ. ಇದನ್ನು ಮನಗಂಡೇ ಕ್ಷೇತ್ರದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ. ಕ್ಷೇತ್ರದ ಮತದಾರರು ಪ್ರಬುದ್ಧರಿದ್ದು ಎಂಟು ವಿಧಾನಸಭಾ ಕ್ಷೇತ್ರಗಳಲ್ಲೂ ಪ್ರಚಾರ ಮಾಡಿದ್ದೇವೆ. ಹೋದೆಡೆಯಲ್ಲಾ ಗುಣಾತ್ಮಕ ಪ್ರಕ್ರಿಯೆಗಳು ಬರುತ್ತಿದ್ದು, ಗೆಲ್ಲುವ ವಿಶ್ವಾಸವಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಎನ್.ನಾಗಯ್ಯ, ಬ್ಯಾಡಮೂಡ್ಲು ಬಸವಣ್ಣ, ಅಮಚವಾಡಿ ಪ್ರಕಾಶ್, ರಾಜಶೇಖರ್, ಮಹೇಶ್, ಕೃಷ್ಣ ಇದ್ದರು.