ಪಂಚವಾರ್ಷಿಕ ಯೋಜನೆ ಮೂಲಕ ಎಲ್ಲ ರಾಷ್ಟ್ರಗಳಿಗೆ ಉದ್ಯಮ, ಶಿಕ್ಷಣ ವಿಸ್ತರಣೆ

| Published : Nov 02 2024, 01:21 AM IST / Updated: Nov 02 2024, 01:22 AM IST

ಪಂಚವಾರ್ಷಿಕ ಯೋಜನೆ ಮೂಲಕ ಎಲ್ಲ ರಾಷ್ಟ್ರಗಳಿಗೆ ಉದ್ಯಮ, ಶಿಕ್ಷಣ ವಿಸ್ತರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಡಾ.ತುಂಬೆ ಮೊಯ್ದಿನ್ ಅವರದ್ದು ಗಲ್ಫ್ ದೇಶಗಳ ಉದ್ಯಮ ವಲಯದಲ್ಲಿ ಈಗ ದೊಡ್ಡ ಹೆಸರು. ಮಂಗಳೂರಿನ ತುಂಬೆ ಮೂಲದ ಮೊಯ್ದಿನ್ ಅವರು ತನ್ನ ತಂದೆ ದಿವಂಗತ ಡಾ. ಬಿ. ಅಹಮದ್ ಹಾಜಿ ಮೊಹಿಯುದ್ದೀನ್ ಅವರು ಸ್ಥಾಪಿಸಿದ ದೊಡ್ಡ ಉದ್ಯಮದ ವ್ಯಾಪ್ತಿಯನ್ನು ವಿದೇಶಗಳಲ್ಲೂ ವಿಸ್ತರಿಸಿ ಯಶಸ್ವಿಯಾಗಿ ಮುನ್ನಡೆಸಿದವರು.

ಯುಎಇ ಯಲ್ಲಿ ಪ್ರತಿಷ್ಠಿತ ಉದ್ಯಮ, ಶಿಕ್ಷಣ ಸಮೂಹ ಕಟ್ಟಿ ಬೆಳೆಸಿದ ಕರಾವಳಿ ಮೂಲದ ಡಾ. ತುಂಬೆ ಮೊಯ್ದಿನ್ 21ನೇ ವಯಸ್ಸಿಗೇ ಉದ್ಯಮ ಜಗತ್ತಿತ್ತು ಪ್ರವೇಶಿಸಿದವರು. ಡಾ.ತುಂಬೆ ಮೊಯ್ದಿನ್ ಅವರದ್ದು ಗಲ್ಫ್ ದೇಶಗಳ ಉದ್ಯಮ ವಲಯದಲ್ಲಿ ಈಗ ದೊಡ್ಡ ಹೆಸರು. ಮಂಗಳೂರಿನ ತುಂಬೆ ಮೂಲದ ಮೊಯ್ದಿನ್ ಅವರು ತನ್ನ ತಂದೆ ದಿವಂಗತ ಡಾ. ಬಿ. ಅಹಮದ್ ಹಾಜಿ ಮೊಹಿಯುದ್ದೀನ್ ಅವರು ಸ್ಥಾಪಿಸಿದ ದೊಡ್ಡ ಉದ್ಯಮದ ವ್ಯಾಪ್ತಿಯನ್ನು ವಿದೇಶಗಳಲ್ಲೂ ವಿಸ್ತರಿಸಿ ಯಶಸ್ವಿಯಾಗಿ ಮುನ್ನಡೆಸಿದವರು.

ಮಧ್ಯಪ್ರಾಚ್ಯದ ಫೋರ್ಬ್ಸ್ ನಿಯತಕಾಲಿಕ ‘ಅರಬ್ ಪ್ರಪಂಚದ ಅಗ್ರ ಭಾರತೀಯ ಉದ್ಯಮ ನಾಯಕ’ ಗೌರವ ನೀಡಿದೆ. ದುಬೈಯ ಅಮಿಟಿ ವಿಶ್ವವಿದ್ಯಾಲಯ ಹಾಗೂ ಮಂಗಳೂರು ವಿಶ್ವವಿದ್ಯಾಲಯ ಇವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿ ಗೌರವಿಸಿದೆ. ಗಲ್ಫ್ ದೇಶದಲ್ಲಿ ಮಾಡಿರುವ ಅಸಾಮಾನ್ಯ ಸಾಧನೆ ಹಾಗೂ ಸೇವಾ ಚಟುವಟಿಕೆಗಳಿಗಾಗಿ ಗಲ್ಫ್ ಕನ್ನಡಿಗ ರತ್ನ ಪ್ರಶಸ್ತಿಯನ್ನೂ ನೀಡಲಾಗಿದೆ. ಈ ಬಾರಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯೂ ಲಭಿಸಿದೆ.

-ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದಾಗ ಏನು ಅನಿಸಿತು?

-ನಾನು ಶಿಕ್ಷಣ ಹಾಗೂ ಉದ್ಯಮ ರಂಗದಲ್ಲಿ ತೊಡಗಿಸಿಕೊಂಡಿದ್ದು, ಸಾಕಷ್ಟು ಚಟುವಟಿಕೆಗಳನ್ನು ನಡೆಸುತ್ತಿದ್ದೇನೆ. ಅದರಲ್ಲೂ ಗಲ್ಫ್‌ ರಾಷ್ಟ್ರಗಳಲ್ಲಿ ಇದ್ದುಕೊಂಡು ಸಾಧನೆ ಮಾಡುವುದು ಸುಲಭವಲ್ಲ. ಈಗ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದು ಸಂತೋಷ ತಂದಿದೆ.

-ಗಲ್ಫ್‌ ರಾಷ್ಟ್ರವಲ್ಲದೆ ಬೇರೆ ಎಲ್ಲೆಲ್ಲಿ ನಿಮ್ಮ ಉದ್ಯಮ ಮತ್ತು ಶಿಕ್ಷಣ ಕ್ಷೇತ್ರ ವಿಸ್ತಾರ ಪಡೆದುಕೊಂಡಿದೆ?

-1997 ರಲ್ಲಿ ಯುಎಇಯಲ್ಲಿ ತುಂಬೆ ಗ್ರೂಪ್ ಸ್ಥಾಪಿಸಿದೆ. 1998 ರಲ್ಲಿ ಅಜ್ಮಾನ್‌ನಲ್ಲಿ ಗಲ್ಫ್ ಮೆಡಿಕಲ್ ಕಾಲೇಜು ಸ್ಥಾಪಿಸಿದ್ದು, ಈಗ ಗಲ್ಫ್ ಮೆಡಿಕಲ್ ಯೂನಿವರ್ಸಿಟಿಯಾಗಿದೆ. ಇಡೀ ಗಲ್ಫ್ ರಾಷ್ಟ್ರಗಳಲ್ಲೇ ಪ್ರತಿಷ್ಠಿತ ಹಾಗೂ ಪ್ರಥಮ ಖಾಸಗಿ ವೈದ್ಯಕೀಯ ವಿಶ್ವವಿದ್ಯಾಲಯವಾಗಿ ಭಾರೀ ಪ್ರಸಿದ್ಧಿ ಪಡೆದಿದೆ. ಇದರಲ್ಲಿ 98 ಕ್ಕೂ ಹೆಚ್ಚು ದೇಶಗಳ 2,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಜಿಎಂಯುನ ಆರು ಕಾಲೇಜುಗಳ 28 ಕೋರ್ಸುಗಳಲ್ಲಿ ಕಲಿಯುತ್ತಿದ್ದಾರೆ. 50 ಕ್ಕೂ ಹೆಚ್ಚು ದೇಶಗಳ ಬೋಧಕ, ಬೋಧಕೇತರ ಸಿಬ್ಬಂದಿ ಇದರಲ್ಲಿದ್ದಾರೆ.

-ಉದ್ಯಮ ಮತ್ತು ಶಿಕ್ಷಣ ಅಲ್ಲದೆ ಬೇರೆ ಯಾವುದೆಲ್ಲ ವ್ಯವಹಾರಗಳನ್ನು ನಡೆಸುತ್ತಿದ್ದೀರಿ?

-ತುಂಬೆ ಸಮೂಹದಿಂದ ಶಿಕ್ಷಣ, ಆರೋಗ್ಯ, ವೈದ್ಯಕೀಯ ಸಂಶೋಧನೆ ಕ್ಷೇತ್ರಗಳಲ್ಲೇ ಸಾಕಷ್ಟು ಕೆಲಸ ನಡೆಯುತ್ತಿದೆ. ಡಯಾಗ್ನೋಸ್ಟಿಕ್ಸ್, ರಿಟೇಲ್ ಫಾರ್ಮಸಿ, ಆರೋಗ್ಯ, ಸಂವಹನ, ಪೌಷ್ಟಿಕಾಂಶ ಮಳಿಗೆಗಳು, ಹಾಸ್ಪಿಟಾಲಿಟಿ, ರಿಯಲ್ ಎಸ್ಟೇಟ್, ಪಬ್ಲಿಕೇಷನ್, ತಂತ್ರಜ್ಞಾನ, ಮಾಧ್ಯಮ, ಇವೆಂಟ್ ಮೆನೇಜ್‌ಮೆಂಟ್‌, ವೈದ್ಯಕೀಯ ಪ್ರವಾಸೋದ್ಯಮ, ವ್ಯಾಪಾರ ಮತ್ತು ಮಾರುಕಟ್ಟೆ ಸೇರಿದಂತೆ 20 ವಲಯಗಳಲ್ಲಿ ಕಾರ್ಯಾಚರಣೆ ಇದೆ. ಸುಮಾರು ಐದು ಸಾವಿರಕ್ಕೂ ಹೆಚ್ಚು ಮಂದಿಗೆ ಉದ್ಯೋಗ ನೀಡಿದೆ.ತುಂಬೆ ಹಾಸ್ಪಿಟಲ್ ನೆಟ್ವರ್ಕ್ ಪ್ರಸಕ್ತ ಇಡೀ ಗಲ್ಫ್ ಪ್ರದೇಶದಲ್ಲೇ ಅತಿದೊಡ್ಡ ಖಾಸಗಿ ಅರೋಗ್ಯ ಸೇವಾ ಸಮೂಹಗಳಲ್ಲಿ ಒಂದು. ತುಂಬೆ ನೆಟ್ವರ್ಕ್‌ನಲ್ಲಿ ಈಗ 8 ಆಸ್ಪತ್ರೆಗಳು, 10 ಕ್ಲಿನಿಕ್‌ಗಳು, 56 ಫಾರ್ಮಸಿಗಳು, 5 ಲ್ಯಾಬ್‌ಗಳಿದ್ದು 175 ಕ್ಕೂ ಹೆಚ್ಚು ದೇಶಗಳ ರೋಗಿಗಳಿಗೆ ಚಿಕಿತ್ಸೆ ಒದಗಿಸುತ್ತಿವೆ.

-ತಾಯ್ನೆಲ ಕರಾವಳಿಗೆ ವಿಶೇಷ ಕೊಡುಗೆಯ ಉದ್ದೇಶವನ್ನು ಹೊಂದಿದ್ದೀರಾ?

-ನಾನು ಕರಾವಳಿಯ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದಿದ್ದೇನೆ. ಹಾಗಾಗಿ ನನ್ನ ಊರು ತುಂಬೆಯಲ್ಲಿ ಈಗಾಗಲೇ ಶಿಕ್ಷಣ ಸಂಸ್ಥೆ ಹಾಗೂ ಉದ್ಯಮವನ್ನು ಸ್ಥಾಪಿಸಿದ್ದೇನೆ. ಮುಂದಿನ ದಿನಗಳಲ್ಲಿ ನರ್ಸಿಂಗ್‌ನಲ್ಲಿ ವೃತ್ತಿಪರ ತರಬೇತಿ ಸಂಸ್ಥೆಯನ್ನು ತೆರೆಯುವ ಉದ್ದೇಶ ಇದೆ. ಇಂಗ್ಲೆಂಡ್‌, ಯುರೋಪ್‌ಗಳಿಗೆ ಇಲ್ಲಿಂದಲೇ ನರ್ಸಿಂಗ್‌ ವೃತ್ತಿಪರರನ್ನು ಕಳುಹಿಸಿ ಉದ್ಯೋಗ ಸೃಷ್ಟಿಸುವ ಇರಾದೆ ಇದೆ. ಇದಲ್ಲದೆ, ‘ಪಂಚವಾರ್ಷಿಕ ಯೋಜನೆ’ಯೊಂದನ್ನು ಹಮ್ಮಿಕೊಂಡಿದ್ದೇನೆ. ಶಿಕ್ಷಣ, ವೈದ್ಯಕೀಯ ಕ್ಷೇತ್ರ ಸೇರಿದಂತೆ ಎಲ್ಲ ರಂಗಗಳಲ್ಲೂ ಸ್ಥಳೀಯರಿಗೆ ಉದ್ಯೋಗ ಸೃಷ್ಟಿಸುವ ಯೋಜನೆಯೊಂದು ರೂಪುಗೊಳ್ಳುತ್ತಿದೆ. ಇದನ್ನು ಎಲ್ಲ ದೇಶಗಳಿಗೂ ವಿಸ್ತರಿಸುವ ಗುರಿ ಹೊಂದಿದ್ದೇನೆ.

-------------