ರಾಜ್ಯ ಬಜೆಟ್‌: ನಿರೀಕ್ಷೆ ಬಹಳ; ಹಾಸನ ಜಿಲ್ಲೆಗೆ ಸಿಕ್ಕಿದ್ದು ವಿರಳ

| Published : Feb 17 2024, 01:15 AM IST

ರಾಜ್ಯ ಬಜೆಟ್‌: ನಿರೀಕ್ಷೆ ಬಹಳ; ಹಾಸನ ಜಿಲ್ಲೆಗೆ ಸಿಕ್ಕಿದ್ದು ವಿರಳ
Share this Article
  • FB
  • TW
  • Linkdin
  • Email

ಸಾರಾಂಶ

ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಹಾಸನ ಜಿಲ್ಲೆಯ ಜನತೆಗೆ ತೀವ್ರ ನಿರಾಸೆ ಉಂಟಾಗಿದ್ದು, ಹಾಸನ ವಿಮಾನ ನಿಲ್ದಾಣ ಹಾಗೂ ನೂತನ ಆಸ್ಪತ್ರೆಗೆ ಹಣ ಬಿಡುಗಡೆ ಬಿಟ್ಟರೆ ಯಾವುದೇ ಪ್ರಮುಖ ಯೋಜನೆ ಹಾಗೂ ಅನುದಾನದ ಪ್ರಸ್ತಾಪವೂ ಬಜೆಟ್‌ನಲ್ಲಿ ಇಲ್ಲವಾಗಿದೆ.

ಹಾಸನ ಪಾಲಿಗೆ ಅನ್ಯಾಯದ ಬಜೆಟ್‌ । ವಿಮಾನ ನಿಲ್ದಾಣ, ನೂತನ ಆಸ್ಪತ್ರೆಗೆ ಮಾತ್ರ ಹಣ । ಬಜೆಟ್‌ ಬಗ್ಗೆ ಜಿಲ್ಲೆಯ ಜನರ ಆಕ್ರೋಶ ಕನ್ನಡಪ್ರಭ ವಾರ್ತೆ ಹಾಸನ

ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಹಾಸನ ಜಿಲ್ಲೆಯ ಜನತೆಗೆ ತೀವ್ರ ನಿರಾಸೆ ಉಂಟಾಗಿದ್ದು, ಹಾಸನ ವಿಮಾನ ನಿಲ್ದಾಣ ಹಾಗೂ ನೂತನ ಆಸ್ಪತ್ರೆಗೆ ಹಣ ಬಿಡುಗಡೆ ಬಿಟ್ಟರೆ ಯಾವುದೇ ಪ್ರಮುಖ ಯೋಜನೆ ಹಾಗೂ ಅನುದಾನದ ಪ್ರಸ್ತಾಪವೂ ಬಜೆಟ್‌ನಲ್ಲಿ ಇಲ್ಲವಾಗಿದೆ.

ಹಾಸನ ನಗರದ ಹೊರವಲಯದ ಬೂವನಹಳ್ಳಿ ವಿಮಾನ ನಿಲ್ದಾಣ ಕಾಮಗಾರಿಗೆ 2023-24 ನೇ ಸಾಲಿನಲ್ಲಿ 55 ಕೋಟಿ ರು. ಬಿಡುಗಡೆ ಮಾಡಲಾಗಿದ್ದು, ಪ್ರಸಕ್ತ ಸಾಲಿನಲ್ಲಿ ಬಾಕಿ ಇರುವ 30 ಕೋಟಿ ರು. ಬಿಡುಗಡೆ ಮಾಡಿ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ. ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಹಿಮ್ಸ್) ಆವರಣದಲ್ಲಿ 450 ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಪರಿಷ್ಕೃತ ಅಂದಾಜು ಮೊತ್ತ 147.42 ಕೋಟಿ ರು.ಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಇದನ್ನು ಹೊರತುಪಡಿಸಿ ಹಾಸನದಲ್ಲಿ ತಾರಾಲಯ ನಿರ್ಮಾಣಕ್ಕೂ ಹಸಿರು ನಿಶಾನೆ ತೋರಲಾಗಿದೆ.ನಿರೀಕ್ಷೆಗಳು ಬಹಳ ಇದ್ದವು:

ಮುಖ್ಯಮಂತ್ರಿ ಸಿದ್ಧರಾಮಯ್ಯ ಮಂಡಿಸಿರುವ 15ನೇ ಬಜೆಟ್‌ನಲ್ಲಿ ಅಕ್ಷರಶ: ಹಾಸನ ಜಿಲ್ಲೆಯನ್ನು ಕಡೆಗಣಿಸಲಾಗಿದೆ ಎನ್ನುವುದು ಗೋಚರಿಸುತ್ತಿದೆ. ಜಿಲ್ಲೆಯಲ್ಲಿ ಆಗಬೇಕಾಗಿದ್ದು ಸಾಕಷ್ಟಿತ್ತು. ಆದರೆ ಸಿಕ್ಕಿರುವುದು ಮಾತ್ರ ಬೊಗಸೆಯಷ್ಟು. ಹಾಸನ ನಗರದ ಎನ್‌.ಆರ್. ವೃತ್ತದಿಂದ ಹೊಸ ಬಸ್ ನಿಲ್ದಾಣಕ್ಕೆ ಪ್ರಗತಿಯಲ್ಲಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ರಾಜ್ಯ ಸರ್ಕಾರದ ಪಾಲು ಇನ್ನೂ ಬರಬೇಕಿದೆ. ಆದರೆ, ಈ ಬಗ್ಗೆ ಬಜೆಟ್‌ನಲ್ಲಿ ಯಾವ ಪ್ರಸ್ತಾಪವೂ ಇಲ್ಲ. ನಗರಾಭಿವೃದ್ಧಿ ಹಾಗೂ ಜಿಲ್ಲೆಯಲ್ಲಿರುವ ಕೈಗಾರಿಕಾ ಪ್ರದೇಶದ ಅಭಿವೃದ್ಧಿಗಳ ಬಗ್ಗೆಯೂ ಗಮನ ನೀಡಿಲ್ಲ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳಿವೆ. ಆದರೆ ಇದ್ಯಾವುದರ ಬಗ್ಗೆಯೂ ಕನಿಷ್ಠ ಆಸಕ್ತಿಯನ್ನೂ ತೋರಿಲ್ಲ.

ಮಂಡನೆಯಾಗಿರುವ ಬಜೆಟ್‌ನಲ್ಲಿ ಸರ್ಕಾರ ಆದಾಯ ಗಳಿಕೆಗೆ ತೋರಿರುವ ಆಸಕ್ತಿಯನ್ನು ಅಭಿವೃದ್ಧಿ ಬಗ್ಗೆ ತೋರಿಲ್ಲ. ತೆರಿಗೆ ವಿಧಿಸುವ ಮೂಲಕ ಜನರನ್ನು ಶೋಷಣೆ ಮಾಡುತ್ತಿದೆ ಎನ್ನುವುದು ಸಾರ್ವಜನಿಕರ ಆಕ್ರೋಶವಾಗಿದೆ.

ಗ್ಯಾರಂಟಿ ಯೋಜನೆಗೆ ಬಡವರ ಮೇಲೆ ತೆರಿಗೆ ಹೊರೆ:

ಕಾಂಗ್ರೆಸ್ ತನ್ನ ಗ್ಯಾರಂಟಿಗಳ ಈಡೇರಿಕೆಗಾಗಿ ಬಡವರ ಮೇಲೆ ತೆರಿಗೆ ಹೊರೆ ಹಾಕುವ ಬಜೆಟ್ ಇದಾಗಿದೆ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಟೀಕಿಸಿದರು.

ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಪ್ರವಾಸೋದ್ಯಮಕ್ಕೆ ಹೆಸರು ವಾಸಿಯಾಗಿರುವ ಹಾಸನ ಜಿಲ್ಲೆಗೆ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡುವ ಸಲುವಾಗಿ ಬಜೆಟ್‌ನಲ್ಲಿ ಅನುದಾನ ಬಿಡುಗಡೆ ಮಾಡುವ ನಿರೀಕ್ಷೆ ಸುಳ್ಳಾಗಿದೆ. ತೋಟಗಾರಿಕೆ ಯೂನಿವರ್ಸಿಟಿ ತೆರೆದು ಕೃಷಿ ಹಾಗೂ ತೋಟಗಾರಿಕೆಗೆ ನೆರವಾಗುವ ನಿರೀಕ್ಷೆ ಇತ್ತು. ಹಾಸನ ನಗರದ ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ಅಗತ್ಯ ಇರುವ ಹೆಚ್ಚಿನ ಹಣವನ್ನು ಬಿಡುಗಡೆ ಮಾಡಿಲ್ಲ. ಶಿಕ್ಷಣ ಕ್ಷೇತ್ರಕ್ಕೆ ಕೂಡ ಬಜೆಟ್‌ನಲ್ಲಿ ಪ್ರಾಮುಖ್ಯತೆ ನೀಡಿಲ್ಲ. ಅಲ್ಲದೆ ಗ್ರಾಮೀಣ ರಸ್ತೆ, ಪಾರ್ಕ್, ಯಾವುದೇ ಅಭಿವೃದ್ಧಿಗೆ ಅನುದಾನ ನೀಡಿಲ್ಲ ಎಂದರು.

ಹಾಸನ ಜಿಲ್ಲೆಯ ಜನರ ನಿರೀಕ್ಷೆಗೆ ಪೂರಕವಾಗಿ ಯಾವುದೇ ರೀತಿಯ ಅನುದಾನ ನೀಡಿಲ್ಲ. ರೈತರನ್ನು ಬಜೆಟ್‌ನಲ್ಲಿ ಕಡೆಗಣಿಸಲಾಗಿದೆ. ಮುಂದಿನ ಲೋಕಸಭಾ ಚುನಾವಣೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಬಜೆಟ್ ಮಂಡನೆ ಮಾಡಲಾಗಿದೆ ಎಂದು ದೂರಿದರು.

ಜನರ ಮೇಲೆ ತೆರಿಗೆ ಹೊರೆ ಹೆಚ್ಚಾಗಿದೆ. ಈ ಬಾರಿಯ ಬಜೆಟ್‌ ಕೇವಲ ತೆರಿಗೆ ಸಂಗ್ರಹಕ್ಕೆ ಗಮನ ನೀಡಿದೆಯೇ ವಿನ: ಜನ ಕಲ್ಯಾಣದ ಬಗ್ಗೆ ಕಿಂಚಿತ್ತೂ ಯೋಚಿಸಿಲ್ಲ. ಇವರ ತೆರಿಗೆ ನೀತಿಯಿಂದಾಗಿ ವ್ಯಾಪಾರ ವಹಿವಾಟಿನ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ.

ಧನಂಜಯ್, ಸೀತಾ ಎಲೆಕ್ಟ್ರಾನಿಕ್ಸ್ ಮಾಲೀಕರು. ..

ಈ ಕಾಂಗ್ರೆಸ್‌ ಸರ್ಕಾರ ಚುನಾವಣೆ ಸಂದರ್ಭದಲ್ಲಿ ಘೋಷಣೆ ಮಾಡಿರುವ ಗ್ಯಾರಂಟಿಗಳ ಈಡೇರಿಕೆಗಾಗಿ ಹಣ ಕ್ರೂಢೀಕರಿಸುವತ್ತಲೇ ಹೆಚ್ಚಿನ ಗಮನ ನೀಡಿದೆ.

ಚಂದ್ರು. ಆಲೂರು ಆಲೂರು, ಸಕಲೇಶಪುರ ತಾಲೂಕು ಭಾಗದಲ್ಲಿ ತೀವ್ರಗೊಂಡಿರುವ ಕಾಡಾನೆ ಹಾವಳಿ ನಿಯಂತ್ರಣ ಹಾಗೂ ಶಾಶ್ವತ ಪರಿಹಾರದ ಬಗ್ಗೆ ಯಾವುದೇ ಗಮನ ಇಲ್ಲ. ಈ ಬಗ್ಗೆ ಪ್ರಸ್ತಾಪವೂ ಇಲ್ಲ. ಮಲೆನಾಡಿನ ಜನರು ಕಾಡಾನೆ ಹಾವಳಿಯಿಂದ ಕಂಗೆಟ್ಟಿದ್ದಾರೆ.

ಉಮೇಶ್‌, ಮೆಡಿಕಲ್‌ ಮಾಲೀಕರು.