ವಾಣಿವಿಲಾಸ ತಲುಪದ ನಿರೀಕ್ಷಿತ ಮಟ್ಟದ ಎತ್ತಿನಹೊಳೆ ನೀರು

| Published : Oct 25 2024, 12:55 AM IST

ಸಾರಾಂಶ

ಯೋಜನೆ ಉದ್ಘಾಟನೆಗೊಂಡ ಎರಡು ತಿಂಗಳಿನಲ್ಲಿ ಐದು ಟಿಎಂಸಿ ಎತ್ತಿನಹೊಳೆ ನೀರು ವಾಣಿವಿಲಾಸ ಸಾಗರಕ್ಕೆ ಹರಿಯಲಿದೆ ಎಂದು ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯ ಹಿರಿಯ ಅಧಿಕಾರಿಗಳು ಸೆ. ತಿಂಗಳ ೭ರಂದು ಕಾಮಗಾರಿ ಉದ್ಘಾಟನೆಯ ವೇಳೆ ಬಹಿರಂಗ ಸಭೆಯಲ್ಲಿ ಹೇಳಿದ್ದರು. ಆದರೆ, ಯೋಜನೆ ಉದ್ಘಾಟನೆಗೊಂಡು ೫೦ ದಿನಗಳು ಕಳೆಯುತ್ತಾ ಬಂದರೂ ಎತ್ತಿನಹೊಳೆ ನೀರು ವಾಣಿವಿಲಾಸ ಸಾಗರ ತಲುಪಲು ಸಾಧ್ಯವಾಗದಾಗಿದೆ.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆ ಉದ್ಘಾಟನೆಗೊಂಡು ಒಂದೂವರೆ ತಿಂಗಳು ಕಳೆದರೂ ನಿರೀಕ್ಷೆಯಂತೆ ನೀರು ನೆರೆಯ ಚಿತ್ರದುರ್ಗ ಜಿಲ್ಲೆಯ ವಾಣಿವಿಲಾಸ ಸಾಗರ ಅಣೆಕಟ್ಟೆ ತಲುಪದಾಗಿದೆ. ಯೋಜನೆ ಉದ್ಘಾಟನೆಗೊಂಡ ಎರಡು ತಿಂಗಳಿನಲ್ಲಿ ಐದು ಟಿಎಂಸಿ ಎತ್ತಿನಹೊಳೆ ನೀರು ವಾಣಿವಿಲಾಸ ಸಾಗರಕ್ಕೆ ಹರಿಯಲಿದೆ ಎಂದು ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯ ಹಿರಿಯ ಅಧಿಕಾರಿಗಳು ಸೆ. ತಿಂಗಳ ೭ರಂದು ಕಾಮಗಾರಿ ಉದ್ಘಾಟನೆಯ ವೇಳೆ ಬಹಿರಂಗ ಸಭೆಯಲ್ಲಿ ಹೇಳಿದ್ದರು. ಆದರೆ, ಯೋಜನೆ ಉದ್ಘಾಟನೆಗೊಂಡು ೫೦ ದಿನಗಳು ಕಳೆಯುತ್ತಾ ಬಂದರೂ ಎತ್ತಿನಹೊಳೆ ನೀರು ವಾಣಿವಿಲಾಸ ಸಾಗರ ತಲುಪಲು ಸಾಧ್ಯವಾಗದಾಗಿದೆ. ಎತ್ತಿನಹೊಳೆ ಕುಡಿಯುವ ನೀರು ನೀಲನಕ್ಷೆಯಂತೆ ತುಮಕೂರು ಜಿಲ್ಲೆಗೆ ನೀರು ಹರಿಸಲು ಸಾಧ್ಯವಿಲ್ಲದ ಕಾರಣ ಯೋಜನೆಯ ಮುಖ್ಯ ಕೇಂದ್ರದಿಂದ ೩೨ ನೇ ಕಿ.ಮೀ. ದೂರದ ಬೇಲೂರು ತಾಲೂಕು ಹಗರೆ ಸಮೀಪದ ಕಾಗೇನಹಳ್ಳಕ್ಕೆ ನೀರು ಹರಿಸಿ ಅಲ್ಲಿಂದ ಹಳೇಬೀಡಿನ ದ್ವಾರಸಮುದ್ರ ಕೆರೆ ತುಂಬಿಸಿ ಅಲ್ಲಿಂದ ಬೆಳವಾಡಿ ಕೆರೆಗೆ ನೀರು ಹರಿಸಿ ನಂತರ ಆಹುತಿ ವ್ಯಾಲಿಯ ಮೂಲಕ ವೇದಾ ವ್ಯಾಲಿಗೆ ಹರಿಸಿ ನೀರಿನ ಕೊರತೆ ಎದುರಿಸುತ್ತಿದ್ದ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕು ವಾಣಿವಿಲಾಸ ಸಾಗರವನ್ನು ೬೦ ದಿನಗಳಲ್ಲಿ ತುಂಬಿಸುವ ಬಗ್ಗೆ ಅಧಿಕಾರಿಗಳು ಯೋಜನೆ ರೂಪಿಸಿದ್ದರು. ಆದರೆ, ವಿವಿಧ ಕಾರಣಗಳಿಂದ ಡ್ಯಾಮ್‌ಗೆ ಇದುವರೆಗೆ ನೀರು ಹರಿಯದಾಗಿದೆ.ಇದುವರೆಗೆ ಹರಿದಿದ್ದು ಎಲ್ಲಿಗೆ: ಈಗಾಗಲೇ ಯೋಜನೆಯ ಮುಖ್ಯಕೇಂದ್ರದಿಂದ ೩೨ ಕಿ.ಮೀ. ದೂರದ ಕಾಗೇನಹಳ್ಳದಿಂದ ಸುಮಾರು ೧೩೨ ಕಿ.ಮೀ. ದೂರದ ವಾಣಿವಿಲಾಸ ಸಾಗರಕ್ಕೆ ನೀರು ಹರಿಸುವ ಯೋಜನೆಯನ್ನು ಅಧಿಕಾರಿಗಳು ಹಮ್ಮಿಕೊಂಡಿದ್ದು ಇದರಂತೆ ಯೋಜನೆ ಉದ್ಘಾಟನೆಗೊಂಡ ಒಂದು ವಾರದಲ್ಲಿ ಹಳೇಬೀಡಿನ ದ್ವಾರಸಮುದ್ರ ಕೆರೆ ತುಂಬಿ ಬೆಳವಾಡಿ ಕೆರೆಗೆ ನೀರು ಹರಿಸಲಾಗಿತ್ತು. ಆದರೆ, ಸಣ್ಣ ನೀರಾವರಿ ಇಲಾಖೆಗೆ ಸೇರಿದ ಬೆಳವಾಡಿ ಕೆರೆಗೆ ಎತ್ತಿನಹೊಳೆ ನೀರು ಹರಿಯಲು ಆರಂಭವಾದ ತಕ್ಷಣವೆ ಕೆರೆಯ ಅಚ್ಚುಕಟ್ಟು ಪ್ರದೇಶದ ಸುತ್ತಮುತ್ತ ನೀರು ಸೋರಿಕೆಯಾಗಲಾರಂಭಿಸಿದ್ದರಿಂದ ಕೆರೆಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸುವಂತೆ ನೀರಾವರಿ ಇಲಾಖೆಯ ಅಧಿಕಾರಿಗಳು ಎತ್ತಿನಹೊಳೆ ಕುಡಿಯುವ ನೀರಿನ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಪರಿಣಾಮ ಸುಮಾರು ೧೫ ದಿನಗಳ ಕಾಲ ನೀರು ಮೇಲೆತ್ತಲು ಸಾಧ್ಯವಿಲ್ಲದೆ ಕಾಲಹರಣ ಮಾಡಲಾಯಿತು.

ತದನಂತರ ಹರಿದ ನೀರು ಅರಸೀಕೆರೆ ತಾಲೂಕಿನ ಹಿರೆಕಟ್ಟೆ ಒಡ್ಡು, ಯೋಜನೆಯ ಅಚ್ಚುಕಟ್ಟುಪ್ರದೇಶದಿಂದ ಹೊರಗಿರುವ ದೇವನೂರು ಕೆರೆ ಸೇರಿದಂತೆ ವ್ಯಾಲಿಗೆ ಹೊಂದಿಕೊಂಡಿರುವ ಸುಮಾರು ೧೬ಕ್ಕೂ ಅಧಿಕ ಕೆರೆಗಳನ್ನು ತುಂಬಿ ಮುಂದೆ ಸಾಗುವ ವೇಳೆಗೆ ಎತ್ತಿನಹೊಳೆ ಯೋಜನಾ ಪ್ರದೇಶದಲ್ಲಿ ನೀರಿನ ಕೊರತೆ ಎದುರಾಗಿದೆ. ಸದ್ಯ ಯೋಜನೆ ಉದ್ಘಾಟನೆಗೊಂಡ ೫೦ನೇ ದಿನದ ವೇಳೆಗೆ ಆಹುತಿ ಹಾಗೂ ವೇದಾ ಎಂಬ ಎರಡು ವ್ಯಾಲಿಗಳು ಸಂಗಮವಾಗುವ ಸೀತಾಪುರ ಎಂಬಲ್ಲಿರುವ ೭೩ ನೇ ಕಿ.ಮೀ.ಗೆ ಎತ್ತಿನಹೊಳೆ ನೀರು ತಲುಪಿದೆ. ಯೋಜನೆಯ ಅಧಿಕಾರಿಗಳ ಪ್ರಕಾರ ನೀರಿಲ್ಲದೆ ಬಣಗುಡುತ್ತಿದ್ದ ಈ ಭಾಗದ ಭೂಮಿ ಸಾಕಷ್ಟು ನೀರನ್ನು ಹೀರಿಕೊಂಡಿದ್ದರೆ, ವ್ಯಾಲಿ ಸುತ್ತಲಿನ ಪ್ರದೇಶದ ಜನರು ಕೆರೆಕಟ್ಟೆಗಳನ್ನು ತುಂಬಿಸಿಕೊಳ್ಳಲು ಮುಂದಾಗಿದ್ದೆ ನಿರೀಕ್ಷೆಯಂತೆ ಮುಂದೆ ನೀರು ಹರಿಯಲು ಸಾಧ್ಯವಾಗಿಲ್ಲ ಎನ್ನುತ್ತಾರೆ.

ಇದುವರೆಗೆ ಎತ್ತಿದ ನೀರು ಎಷ್ಟು: ಸೆಪ್ಟೆಂಬರ್ ೭ರಿಂದ ಅಕ್ಟೋಬರ್ ೨೫ ರವರೆಗೆ ಎತ್ತಿನಹೊಳೆ ಯೋಜನೆಯ ೮ ಅಣೆಕಟ್ಟುಗಳಿಂದ ಕೇವಲ ೧.೫ ಟಿಎಂಸಿ ನೀರು ಮೇಲೆತ್ತಲಾಗಿದೆ. ಯೋಜನೆ ಉದ್ಘಾಟನೆಯಾದ ಸುಮಾರು ೧೫ ದಿನಗಳ ಕಾಲ ಉತ್ತಮ ಮಳೆಯಾಗಿದ್ದರಿಂದ ಪ್ರತಿದಿನ ೫೦೦ ರಿಂದ ಒಂದು ಸಾವಿರ ಕ್ಯೂಸೆಕ್‌ ನೀರನ್ನು ಮೇಲೆತ್ತಲಾಗಿದೆ. ಆದರೆ, ಮಳೆ ಕಡಿಮೆಯಾದಂತೆ ಅಣೆಕಟ್ಟುಗಳಿಂದ ನೀರು ಮೇಲೆತ್ತುವ ಪ್ರಮಾಣವು ಕಡಿಮೆಯಾಗಿದ್ದು ಮಳೆಯಿಲ್ಲದ ದಿನಗಳಲ್ಲಿ ಕೇವಲ ೨೫೦ ಕ್ಯೂಸೆಕ್‌ ನೀರನ್ನು ಮಾತ್ರ ಮೇಲೆತ್ತಲು ಸಾಧ್ಯವಾಗುತ್ತಿದ್ದು ನದಿಗಳಲ್ಲಿ ಇದಕ್ಕಿಂತ ಕಡಿಮೆ ಪ್ರಮಾಣದ ನೀರು ಹರಿದರೆ ನೀರು ಮೇಲೆತ್ತುವುದು ಅಸಾಧ್ಯವಾಗಲಿದೆ.ಎಲ್ಲ ಮೋಟರ್‌ಗಳ ಪರೀಕ್ಷೆ: ಯೋಜನೆ ಉದ್ಘಾಟನೆಗೊಂಡ ವೇಳೆ ೮ ವಿಆರ್‌ಗಳಲ್ಲಿ ನಾಲ್ಕುವಿಆರ್‌ಗಳ ಒಂದೊಂದು ಮೋಟರ್‌ಗಳಿಂದ ಮಾತ್ರ ನೀರು ಮೇಲೆತ್ತಲಾಗಿದೆ. ಪ್ರತಿಯೊಂದು ವಿಆರ್‌ಗಳಲ್ಲಿ ೬ರಿಂದ ೮ ಮೋಟರ್‌ಗಳು ಎರಡು ಸಾವಿರ ಎಚ್.ಪಿಯಿಂದ ೧೬ ಸಾವಿರ ಎಚ್.ಪಿ(ಅಶ್ವಶಕ್ತಿ) ಹೊಂದಿರುವ ಮೋಟರ್‌ಗಳಿದ್ದು. ಉದ್ಘಾಟನೆಯ ತದನಂತರದ ದಿನಗಳಲ್ಲಿ ಪರೀಕ್ಷಾರ್ಥವಾಗಿ ಎಲ್ಲ ಮೋಟರ್‌ಗಳನ್ನು ಪರೀಕ್ಷೆ ಒಳಪಡಿಸಿ ದೋಷ ಪತ್ತೆ ಹಚ್ಚುವ ಕಾರ್ಯವು ನಡೆದಿದೆ. ಸದ್ಯ ತಾಲೂಕಿನಲ್ಲಿ ಶೇ. ೯೮ರಷ್ಟು ಕಾಮಗಾರಿ ಮುಕ್ತಾಯಗೊಂಡಿದ್ದು ಅರಣ್ಯ ಇಲಾಖೆಯ ಕಿರಿಕಿರಿಯಿಂದ ಕಾಡುಮನೆ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿದ್ದ ವಿಆರ್‌ ೩ರ ಕಾಮಗಾರಿ ಸದ್ಯ ಮುಕ್ತಾಯಗೊಂಡಿದ್ದು ವಿದ್ಯುತ್ ಕಾಮಗಾರಿ ಬಾಕಿ ಉಳಿದಿದೆ.

ಕಾಣದ ದೋಷ: ತಾಲೂಕಿನಲ್ಲಿ ಸುಮಾರು ೧೨೮ ಕಿ.ಮೀ. ಉದ್ದದ ಪೈಪ್‌ಲೈನ್‌ಗಳು ೮ ವಿಆರ್‌ಗಳನ್ನು ಸಂಪರ್ಕಿಸುತ್ತಿದ್ದು, ೨೦೨೨ರ ನವಂಬರ್‌ ತಿಂಗಳಿನಿಂದ ನಡೆದ ಯೋಜನೆ ಪ್ರಯೋಗಿಕ ಪರೀಕ್ಷೆ ವೇಳೆ ಪೈಪ್‌ಲೈನ್ ಸೋರಿಕೆಯಾಗಿ ಹಲವೆಡೆ ಸಮಸ್ಯೆ ಸೃಷ್ಟಿಸಿತ್ತು. ಆದರೆ, ಯೋಜನೆ ಉದ್ಘಾಟನೆಗೊಂಡ ಒಂದೂವರೆ ತಿಂಗಳಿನಲ್ಲಿ ಯಾವುದೇ ದೋಷ ಕಂಡು ಬಾರದಿರುವುದು ಯೋಜನೆ ಅಧಿಕಾರಿಗಳಿಗೆ ನೆಮ್ಮದಿ ನೀಡಿದೆ. ಯೋಜನೆಯಿಂದ ೨೪ ಟಿಎಂಸಿ ನೀರು ದೊರಕುವ ಬಗ್ಗೆ ಮಾತನಾಡಲಾಗುತ್ತಿತ್ತು. ಆದರೆ, ೫೦ ದಿನಗಳಲ್ಲಿ ಪಶ್ಚಿಮಘಟ್ಟದ ಈ ನದಿಗಳಲ್ಲಿ ಸಿಕ್ಕಿರುವುದು ೧.೫ ಟಿಎಂಸಿ ನೀರು ಮಾತ್ರ ಇದು ಯೋಜನೆ ಯಶಸ್ಸಿನ ಬಗ್ಗೆ ಅನುಮಾನ ಪಡುವಂತೆ ಮಾಡಿದೆ.

* ಹೇಳಿಕೆ

ಉದ್ದೇಶಿತ ಯೋಜನೆಯಂತೆ ವಾಣಿವಿಲಾಸ ಸಾಗರಕ್ಕೆ ನೀರು ಹರಿಯಲು ಸಾಧ್ಯವಾಗಿಲ್ಲ. ಮೂಲ ಪ್ರದೇಶದಲ್ಲಿ ನೀರಿನ ಕೊರತೆಯಿಂದಾಗಿ ಕಡಿಮೆ ಪ್ರಮಾಣದಲ್ಲಿ ನೀರನ್ನು ಮೇಲೆತ್ತಲಾಗುತ್ತಿದೆ.

- ವೆಂಕಟೇಶ್, ಇಇ ವಿಶ್ವೇಶ್ವರಯ್ಯ ಜಲನಿಗಮ ನಿಯಮಿತ.