ಸ್ಫೋಟ ದುರಂತದ ಹೆಚ್ಚಿನ ಮಾಹಿತಿ ನಿರೀಕ್ಷೆ: ದಿನೇಶ್‌ ಗುಂಡೂರಾವ್‌

| Published : Jan 30 2024, 02:01 AM IST

ಸಾರಾಂಶ

ಪಟಾಕಿ ತಯಾರಿಸುವ ಘಟಕವು 14.12.2011ರಂದು ಪರವಾನಗಿ ಪಡೆದಿರುವುದಾಗಿ ಅಧಿಕಾರಿಗಳ ಪರಿಶೀಲನೆ ವೇಳೆ ತಿಳಿದುಬಂದಿದ್ದು, 31.3.2024ರವರೆಗೆ ನವೀಕರಿಸಲಾಗಿದೆ. ದುರಂತದಲ್ಲಿ ಮೂವರು ಮೃತಪಟ್ಟಿದ್ದು, ಅವರಲ್ಲಿ ನಾರಾಯಣನ್ ಅಲಿಯಾಸ್ ಕುಂಞ ಎಂಬವರ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಉಳಿದಿಬ್ಬರ ದೇಹದ ಅಂಗಾಂಗಗಳು ಪತ್ತೆಯಾಗಿದ್ದು, ಅವುಗಳನ್ನು ಗುರುತಿಸಲು ಡಿಎನ್‌ಎ ಪರೀಕ್ಷೆಗೆ ರವಾನಿಸಲಾಗಿದೆ ಎಂದು ದಿನೇಶ್‌ ಗುಂಡೂರಾವ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಬೆಳ್ತಂಗಡಿ ತಾಲೂಕಿನ ಕುಕ್ಕೇಡಿ ಗ್ರಾಮದಲ್ಲಿ ಪಟಾಕಿ ತಯಾರಿಸುವ ಘಟಕದಲ್ಲಿ ನಡೆದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳ ವರದಿಗಳು ಬಂದ ನಂತರ ಸಂಪೂರ್ಣ ಮಾಹಿತಿ ದೊರೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್ ತಿಳಿಸಿದ್ದಾರೆ.

ಸ್ಫೋಟ ಸಂಭವಿಸಿದ ಬಳಿಕ ಪೊಲೀಸ್ ಇಲಾಖೆ, ಅಗ್ನಿಶಾಮಕ, ಕಂದಾಯ, ಫಾರೆನ್ಸಿಕ್, ಬಾಂಬ್ ನಿಷ್ಕ್ರಿಯದಳ, ಕೇಂದ್ರ ಸ್ಫೋಟಕ ತಂಡ, ಕರ್ನಾಟಕ ಮಾಲಿನ್ಯ ನಿಯಂತ್ರಣ ಇಲಾಖೆ, ಕಾರ್ಮಿಕ ಫ್ಯಾಕ್ಟರೀಸ್‌ ಮತ್ತು ಬಾಯ್ಲರ್ಸ್‌ ಇಲಾಖೆ, ಆರೋಗ್ಯ ಇಲಾಖೆಗಳು ಜಂಟಿಯಾಗಿ ಕಾರ್ಯ ನಿರ್ವಹಿಸುತ್ತಿವೆ. ಈ ಎಲ್ಲ ಇಲಾಖೆಗಳ ವರದಿ ಬರಬೇಕಿದೆ. ಜತೆಗೆ ಘಟಕಕ್ಕೆ ಪರವಾನಗಿ ಪಡೆದಿರುವ ಸೈಯದ್ ಬಶೀರ್ ಎಂಬವರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಬಶೀರ್‌ ಹಲವು ವರ್ಷಗಳಿಂದ ಪಟಾಕಿ ತಯಾರಿಸುತ್ತಿದ್ದು, ಸುತ್ತಮುತ್ತಲಿನ ಪ್ರದೇಶಗಳ ಹಬ್ಬ, ಜಾತ್ರೆ, ಸಮಾರಂಭಗಳಿಗೆ ಅಯೋಜಕರ ಬೇಡಿಕೆಯಂತೆ ಪಟಾಕಿಗಳನ್ನು ತಯಾರಿಸಿ ಪೂರೈಸಿಕೊಂಡು ಬಂದಿದ್ದಾರೆ ಎಂಬ ಪ್ರಾಥಮಿಕ ಮಾಹಿತಿಯನ್ನು ಪೊಲೀಸ್ ಮತ್ತು ಜಿಲ್ಲಾಡಳಿತ ನೀಡಿದೆ. ಘಟನೆ ನಡೆದ ಸ್ಥಳಕ್ಕೆ ಪಶ್ಚಿಮ ವಲಯ ಐಜಿಪಿ, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಅಪರ ಪೊಲೀಸ್ ವರಿಷ್ಠಾಧಿಕಾರಿ, ಅಪರ ಜಿಲ್ಲಾಧಿಕಾರಿ, ಪುತ್ತೂರು ಉಪವಿಭಾಗಾಧಿಕಾರಿ, ಬೆಳ್ತಂಗಡಿ ತಹಸೀಲ್ದಾರ್‌, ಪೊಲೀಸ್ ತಾಲೂಕು ಉಪನಿರೀಕ್ಷಕರು, ಬೆಳ್ತಂಗಡಿ ಕಾರ್ಯ ನಿರ್ವಹಣಾಧಿಕಾರಿ ಮತ್ತು ಎಲ್ಲ ಸಂಬಂಧಪಟ್ಟ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದು, ಹೆಚ್ಚಿನ ಮಾಹಿತಿ, ವರದಿಯನ್ನು ನಿರೀಕ್ಷಿಸಲಾಗುತ್ತಿದೆ.