ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಕರಾವಳಿ ಕರ್ನಾಟಕ ಭಾಗದ ಸಾಂಪ್ರಾದಾಯಿಕ ಜನಪದ ಕ್ರೀಡೆಯಾಗಿರುವ ಕಂಬಳವನ್ನು ಉಳಿಸಿ, ಮುಂದಿನ ಪೀಳಿಗೆಗೆ ಪರಿಚಯಿಸಬೇಕು ಎಂಬ ಉದ್ದೇಶದಿಂದ ಜಯ-ವಿಜಯ ಜೋಡುಕರೆ ಕಂಬಳ ಸಮಿತಿ ಜಪ್ಪಿನಮೊಗರು ಮಂಗಳೂರು ಇವರ ನೇತೃತ್ವದಲ್ಲಿ ಮನ್ಯುತೋಟಗುತ್ತು ಮತ್ತು ನಾಡಾಜೆಗುತ್ತು ಕೀರ್ತಿಶೀಷ ಜೆ. ಜಯಗಂಗಾಧರ ಶೆಟ್ಟಿಯವರ ಸ್ಮರಣಾರ್ಥ 14ನೇ ವರ್ಷದ ಹೊನಲು ಬೆಳಕಿನ ಜಯ-ವಿಜಯ ಜೋಡುಕರೆ ಕಂಬಳ ಜಪ್ಪಿನಮೊಗರು ನೇತ್ರಾವತಿ ನದಿ ತೀರದಲ್ಲಿ ಫೆ.10 ರಂದು ನಡೆಯಲಿದೆ ಎಂದು ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ಉಮೇಶ್ ಅತಿಕಾರಿ ತಿಳಿಸಿದರು.ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಪ್ಪಿನಮೊಗರು ಗ್ರಾಮದೈವ ಕಂರ್ಭಿಸ್ಥಾನ ಶ್ರೀ ವೈದ್ಯನಾಥ ದೈವಸ್ಥಾನದ ಆಡಳಿತ ಮೊಕೇಸರರಾಗಿ ಸುದೀರ್ಘ ಸೇವೆ ಸಲ್ಲಿಸಿರುವ, ಧಾರ್ಮಿಕ ಮತ್ತು ಸಾಮಾಜಿಕ ನೇತಾರ ಕೀರ್ತಿಶೇಷ ಜೆ. ಜಯಗಂಗಾಧರ ಶೆಟ್ಟಿಯವರು ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಇವರ ಸ್ಮರಣಾರ್ಥ ಇವರ ಮಗ ಜೆ. ಅನಿಲ್ ಶೆಟ್ಟಿಯವರ ನಾಯಕತ್ವದಲ್ಲಿ ಕಳೆದ 13 ವರುಷಗಳಿಂದ ಈ ಜನಪದ ಕ್ರೀಡೆ ನಡೆಯುತ್ತಿದೆ. ಪ್ರಸ್ತುತ ಮಂಗಳೂರಿನ ಶಾಸಕ ವೇದವ್ಯಾಸ ಕಾಮತ್‌ರವರ ಗೌರವಾಧ್ಯಕ್ಷತೆಯಲ್ಲಿ ಜಪ್ಪಿನಮೊಗರು ಗ್ರಾಮಸ್ಥರು ಹಾಗೂ ಇತರ ಕಂಬಳಾಭಿಮಾನಿಗಳ ಒಗ್ಗೂಡುವಿಕೆಯಿಂದ ಜನಪರ ಕಂಬಳೋತ್ಸವವಾಗಿ ರೂಪುಗೊಂಡಿದೆ ಎಂದರು.
ಫೆ.10 ರಂದು ಬೆಳಗ್ಗೆ 8.30ಕ್ಕೆ ಜಿ. ಆರ್. ಮೆಡಿಕಲ್ ಕಾಲೇಜು ಮತ್ತು ಕರಾವಳಿ ಕಾಲೇಜು ಸಮೂಹ ಸಂಸ್ಥೆಗಳು ಮಂಗಳೂರು ಇದರ ಸ್ಥಾಪಕಾಧ್ಯಕ್ಷ ಎಸ್. ಗಣೇಶ್ ರಾವ್ ಅಧ್ಯಕ್ಷತೆಯಲ್ಲಿ, ವೇದಮೂರ್ತಿ ಬ್ರಹ್ಮಶ್ರೀ ವಿಠಲದಾಸ್ ತಂತ್ರಿವರ್ಯರಿಂದ ಕಂಬಳ ಉದ್ಘಾಟನೆಗೊಳ್ಳಲಿದೆ. ಸಂಜೆ 7.00 ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಕಟೀಲು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಆನುವಂಶಿಕ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ ಆಶೀರ್ವಚನ ನೀಡಲಿದ್ದಾರೆ. ವಿಧಾನಸಭಾ ಸಭಾಧ್ಯಕ್ಷ ಯು. ಟಿ. ಖಾದರ್, ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಭಾಗವಹಿಸಲಿದ್ದಾರೆ ಎಂದರು. ಚಿನ್ನದ ಪದಕ., ಶಾಶ್ವತ ಫಲಕ:ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಈ ಸಮಾರಂಭದಲ್ಲಿ ಸನ್ಮಾನಿಸಲಾಗುತ್ತದೆ. ಈ ಬಾರಿ ವಿಜೇತ ಕೋಣಗಳಿಗೆ ಚಿನ್ನದ ಪದಕದೊಂದಿಗೆ ಶಾಶ್ವತ ಫಲಕವನ್ನು ನೀಡಿ ಗೌರವಿಸಲಾಗುತ್ತದೆ ಎಂದರು.
ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿದ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ಕರಾವಳಿಯ ಜಾನಪದ ಕ್ರೀಡೆಯಾದ ಕಂಬಳ ಈಗ ಜನಪ್ರಿಯವಾಗಿದೆ. ಕಂಬಳಕ್ಕೆ ಇನ್ನಷ್ಟು ಮೆರುಗು ನೀಡುವ ಕೆಲಸವಾಗಲಿ ಎಂದರು.ಈ ಬಾರಿ 150ಕ್ಕೂ ಅಧಿಕ ಜೊತೆ ಕೋಣಗಳು ಭಾಗವಹಿಸಲಿದ್ದು, ಚಿನ್ನದ ಪದಕ ಅಲ್ಲದೆ ಶಾಶ್ವತ ಫಲಕ ನೀಡಲಾಗುವುದು ಎಂದರು.ಕಂಬಳ ಸಮಿತಿ ಅಧ್ಯಕ್ಷ ಅನಿಲ್ ಶೆಟ್ಟಿ, ಕಾರ್ಯಾಧ್ಯಕ್ಷರಾದ ಪ್ರವೀಣ್‌ಚಂದ್ರ ಆಳ್ವ, ಶಕೀನ್ ಶೆಟ್ಟಿ, ಸಂದೀಪ್ ಶೆಟ್ಟಿ, ಸಂತೋಷ್ ಆಳ್ವ, ಪ್ರಚಾರ ಸಮಿತಿ ಸಂಚಾಲಕ ನಾಗೇಂದ್ರ ಕುಮಾರ್, ಕೋಶಾಧಿಕಾರಿ ಬಾಲಕೃಷ್ಣ ಶೆಟ್ಟಿ, ಸ್ಥಳೀಯ ಪಾಲಿಕೆ ಸದಸ್ಯೆ ವೀಣಾಮಂಗಳ, ಪ್ರಮುಖರಾದ ರಾಜಾನಂದ ರೈ, ನಿಶಾನ್ ಪೂಜಾರಿ, ರಾಕೇಶ್ ರೈ, ಗಣೇಶ್ ಶೆಟ್ಟಿ, ಭುಜಂಗ ಶೆಟ್ಟಿ, ಗಣೇಶ್ ಶೆಟ್ಟಿ, ಸಾಯುದ್ದೀನ್, ನಾರಾಯಣ ಪೂಜಾರಿ, ಕಿರಣ್ ರೈ, ವಿಜಯ ಕುಮಾರ್ ರೈ ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))