ಅನ್ಯ ರಾಜ್ಯ ವ್ಯಾಪರಸ್ಥರನ್ನು ರಾಜ್ಯದಿಂದ ಹೊರಹಾಕಿ

| Published : Dec 17 2024, 01:03 AM IST

ಅನ್ಯ ರಾಜ್ಯ ವ್ಯಾಪರಸ್ಥರನ್ನು ರಾಜ್ಯದಿಂದ ಹೊರಹಾಕಿ
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣ ಮತ್ತು ತಾಲೂಕಿನ ಮುಖ್ಯ ಗ್ರಾಮಗಳಲ್ಲಿ ಅನ್ಯರಾಜ್ಯ ವ್ಯಾಪಾರಸ್ಥರಿಂದ ಎಲ್ಲ ರೀತಿ ವ್ಯಾಪಾರಗಳಲ್ಲಿ ಮಾರುಕಟ್ಟೆ ದರ ವ್ಯತ್ಯಾಸ ಮಾಡಿಕೊಂಡಂತೆ ನಾಟಕವಾಡಿ ನಿತ್ಯ ಜನರಿಗೆ ಮೋಸ ಮಾಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಬೀಳಗಿ

ಬೀಳಗಿ ಪಟ್ಟಣ ಹಾಗೂ ತಾಲೂಕಿನಲ್ಲಿನ ಬೇರೆ ಬೇರೆ ಗ್ರಾಮಗಳಲ್ಲಿ ಅನ್ಯ ರಾಜ್ಯಗಳಿಂದ ಆಗಮಿಸಿ ಇಲ್ಲಿಯೇ ವಾಸವಿದ್ದು ಜನಸಾಮಾನ್ಯರ ಉದ್ಯೋಗ ಕಸಿದುಕೊಳ್ಳುವ ವಂಚಕರನ್ನು ರಾಜ್ಯದಿಂದ ಹೊರಹಾಕಬೇಕು ಎಂದು ಸಂಘಟನೆ ಮುಖಂಡ ಪ್ರವೀಣ್ ಪಾಟೀಲ್ ಹರಿಹಾಯ್ದರು.

ತಾಲೂಕಿನಲ್ಲಿ ಅನ್ಯರಾಜ್ಯದ ವ್ಯಾಪಾರಿಗಳಿಂದ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯ ಮತ್ತು ಕನ್ನಡ ಸಂಸ್ಕೃತಿಗೆ ಉಂಟಾಗುತ್ತಿರುವ ಧಕ್ಕೆ ಮತ್ತು ಸರಕಾರದ ಬೊಕ್ಕಸಕ್ಕೆ ಸಲ್ಲಬೇಕಾದ ತೆರಿಗೆ ವಂಚನೆ ಖಂಡಿಸಿ, ಬೀಳಗಿ ತಾಲೂಕಿನ ನಾಗರಿಕರು, ವ್ಯಾಪಾರಸ್ಥರು ಮತ್ತು ವಿವಿಧ ಕನ್ನಡ ಪರ ಸಂಘಟನೆಗಳು ಸೇರಿ ಅನ್ಯರಾಜ್ಯ ಕಳ್ಳ ವ್ಯಾಪಾರಿಗಳನ್ನು ತೊಲಗಿಸಿ, ಬೀಳಗಿ ಉಳಿಸಿ ಚಳವಳಿಯು ನಿಮಿತ್ತ ನಡೆದ ಬೀಳಗಿ ಸಂಪೂರ್ಣ ಬಂದ್ ಯಶಸ್ವಿಯಾಗಿದೆ.

ಈ ವೇಳೆ ಮಾತನಾಡಿದ ಅವರು, ತಾಲೂಕಿನ ಮುಗ್ಧ ಜನರನ್ನು ಬಳಸಿಕೊಂಡು, ಕನ್ನಡದ ಸಂಸ್ಕತಿಗೆ ಧಕ್ಕೆ ತರುವುದಲ್ಲದೆ ಇಲ್ಲಿಯ ವ್ಯಾಪಾರಸ್ಥರನ್ನೆ ಊರು ಬಿಟ್ಟು ದುಡಿಯಲು (ಗುಳೆಹೋಗುವ) ತೊಲಗಿಸುವ ಹುನ್ನಾರದ ಕಾರ್ಯ ಇವರಿಂದ ನಡೆಯುತ್ತಿದೆ ಎಂದು ಪಾಟೀಲ್‌ ಆರೋಪಿಸಿದರು.ಯುಕೆಪಿ ಹಿನ್ನಿರಿನಿಂದ ಈಗಾಗಲೇ ತಾಲೂಕಿನ ಅನೇಕ ಗ್ರಾಮಗಳ ಆಸ್ತಿ-ಪಾಸ್ತಿ ಜತೆಗೆ ಗ್ರಾಮದಲ್ಲಿ ನಂಬಿಕೊಂಡು ತಲೆ ತಲಾಂತರದಿಂದ ಮಾಡುತ್ತಾ ಬಂದಿದ್ದ ಕುಲಕಸಬು (ಉದ್ಯೋಗ) ಕಳೆದುಕೊಂಡು ಸಂತ್ರಸ್ತರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಪಟ್ಟಣ ಮತ್ತು ತಾಲೂಕಿನ ಮುಖ್ಯ ಗ್ರಾಮಗಳಲ್ಲಿ ಅನ್ಯರಾಜ್ಯ ವ್ಯಾಪಾರಸ್ಥರಿಂದ ಎಲ್ಲ ರೀತಿ ವ್ಯಾಪಾರಗಳಲ್ಲಿ ಮಾರುಕಟ್ಟೆ ದರ ವ್ಯತ್ಯಾಸ ಮಾಡಿಕೊಂಡಂತೆ ನಾಟಕವಾಡಿ ನಿತ್ಯ ಜನರಿಗೆ ಮೋಸ ಮಾಡುತ್ತಿದ್ದಾರೆ. ತುಂಬಾ ದೊಡ್ಡ ಮಟ್ಟದ ಅಂಗಡಿಗಳಿಗೆ ಲಕ್ಷಾಂತರ ಡಿಪಾಸಿಟ್ ಹಾಗೂ ಬಾಡಿಗೆ ನೀಡುವ ಮೂಲಕ ಸ್ಥಳೀಯ ವ್ಯಾಪಾರಸ್ಥರ ಉದ್ಯೋಗ ಮತ್ತು ವ್ಯಾಪಾರಸ್ಥರಿಗೆ ಅಂಗಡಿಗಳು ಸಿಗದಂತೆ ವಾತಾವರಣ ನಿರ್ಮಿಸಿದ್ದಾರೆ. ಇಲ್ಲಿ ಬಡವರು ವ್ಯಾಪಾರ ಮಾಡದಂತಾಗಿದೆ. ಮುಂದಿನ ದಿನಮಾನಗಳಲ್ಲಿ ಬೀಳಗಿ ತಾಲೂಕಿನಲ್ಲಿ ಯುವಕರಿಗೆ, ಮಕ್ಕಳಿಗೆ ವ್ಯಾಪಾರ ಮಾಡುವ ಅವಕಾಶ ಸಿಗದಂತಾಗುತ್ತದೆ. ಬಡ್ಡಿ ಆಮೀಷ ಒಡ್ಡಿ ಪಟ್ಟಣದ ಸಾಕಷ್ಟು ಜನರ ಮತ್ತು ಮಹಿಳೆಯರ ಹತ್ತಿರ ಹಣ ಪಡೆದು ಇಲ್ಲಿಂದ ಪರಾರಿಯಾಗಿರುವ ಘಟನೆಗಳು ಅನೇಕ ಬಾರಿ ಜರುಗಿವೆ. ಅನ್ಯರಾಜ್ಯ ವ್ಯಾಪಾರಸ್ಥರು ವಿಶ್ವಾಸಿತರಲ್ಲ. ಯಾವಾಗ ಕೈಕೊಟ್ಟು ಹೊಗುತ್ತಾರೋ ಗೊತ್ತಿಲ್ಲ ಎಂದರು.

ದಲಿತ ಮುಖಂಡ ಪಡಿಯಪ್ಪ ಕಳ್ಳಿಮನಿ ಮಾತನಾಡಿ, ಈ ಹಿಂದೆ ಬೀಳಗಿ ಹಿರಿಯರು ಸೇರಿಕೊಂಡು ಹೊರರಾಜ್ಯ ವ್ಯಾಪಾರಿಗಳೊಂದಿಗೆ 2014ರಲ್ಲಿ ಹೋರಾಟ ಮಾಡಿ ಮುಂದೇ ಯಾರು 1ಕ್ಕಿಂತ ಹೆಚ್ಚು ಅಂಗಡಿ ಮಾಡಬಾರದೆಂದು ಒಪ್ಪಂದ ಮಾಡಿಕೊಂಡಿದ್ದೇವು. 2014ರ ಮೇಲೆ ಬೇರೆ ಯಾರೂ ಬರಬಾರದೆಂದು ಒಪ್ಪಂದ ಕೂಡ ಆಗಿತ್ತು. ಆದರೂ ಕೂಡ ಮತ್ತೇ ಒಪ್ಪಂದ ಮೀರಿ ಸುಮಾರು 10ಕ್ಕಿಂತ ಹೆಚ್ಚು ಅಂಗಡಿಗಳು ಬಂದಿವೆ. ಇದೇ ರೀತಿ ಮುಂದುವರಿದಲ್ಲಿ ಸ್ಥಳೀಯ ವ್ಯಾಪಾರಸ್ಥರು ಗಂಟು-ಮುಟೆ ಕಟ್ಟುವ ಪರಿಸ್ಥಿತಿ ಬರುತ್ತದೆ ಎಂದರು.

ಕರವೇ ಜಿಲ್ಲಾಧ್ಯಕ್ಷ ಬಸವರಾಜ್ ದಮಯಂತಿ, ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ರೂಪಾ ಹಿರೇಮಠ ಮಾತನಾಡಿದರು. ಮಲ್ಲನಗೌಡ ನೀಲಪ್ಪನವರ್, ಈರಣ್ಣಾ ಕೆರೂರ, ನಾಗರಾಜ ಟಂಕಸಾಲಿ, ನಾಗೇಶ್ ಸಿಡ್ಲನ್ನವರ್, ಆನಂದ ಮುಳವಾಡ, ಮನೋಜ್ ಹಾದಿಮನಿ, ಆನಂದ್ ಬಿರಾದಾರ, ಆನಂದ್ ಮಂಟೂರ್, ಹಣಮಂತ ಹತ್ನಳ್ಳಿ, ಡಾ.ಸುಭಾಸ್ ನೀರಲಿ, ಸಿದ್ದು ಗಡ್ಡದ, ರವಿ ನಾಗನಗೌಡರ, ಈರಯ್ಯಾ ಬಂಗಾರಿಮಠ, ಮೈಬೂಬ್ ಜಮಖಂಡಿ, ಮೈಬೂಬ್ ಬಾಗವಾನ, ಮಲ್ಲು ಲಮಾಣಿ ಇತರರು ಇದ್ದರು.

ಪ್ರತಿಭಟನಾಕಾರರಿಂದ ವ್ಯಾಪಕ ಆಕ್ರೋಶ

ಸೋಮವಾರ ಮುಂಜಾನೆಯಿಂದಲೇ ಪಟ್ಟಣದ ವ್ಯಾಪಾರಿಗಳು ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟು ಬಂದ್ ಮಾಡಿದರು. ಬಸವೇಶ್ವರ ವತ್ತದಲ್ಲಿ ಸಾವಿರಾರು ಪ್ರತಿಭಟನಾಕಾರರು ಜಮಾವಣೆಗೊಂಡು ಅನ್ಯ ರಾಜ್ಯದ ವ್ಯಾಪಾರಿಗಳ ವಿರುದ್ಧ ಘೋಷಣೆ ಕೂಗಿ ಬಸ್ ನಿಲ್ದಾಣ ಎದುರು ಟೈರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡೆಸಿದರು. ಅಲ್ಲಿಂದ ಪ್ರತಿಭಟನೆ ಪ್ರಮುಖ ರಸ್ತೆಯಲ್ಲಿ ಸಂಚರಿಸಿ ತಹಸೀಲ್ದಾರ್‌ ಕಚೇರಿ ಮುಂದೆ ಕೆಲ ಕಾಲ ಪ್ರತಿಭಟಿಸಿ ತಹಶೀಲ್ದಾರ ವಿನೋದ ಹತ್ತಳ್ಳಿ ಅವರಿಗೆ ಮನವಿ ಸಲ್ಲಿಸಿದರು.

ಪಟ್ಟಣ ಮತ್ತು ತಾಲೂಕಿನ ಮುಖ್ಯ ಗ್ರಾಮಗಳಲ್ಲಿ ಅನ್ಯರಾಜ್ಯ ವ್ಯಾಪಾರಸ್ಥರಿಂದ ಎಲ್ಲ ರೀತಿ ವ್ಯಾಪಾರಗಳಲ್ಲಿ ಮಾರುಕಟ್ಟೆ ದರ ವ್ಯತ್ಯಾಸ ಮಾಡಿಕೊಂಡಂತೆ ನಾಟಕವಾಡಿ ನಿತ್ಯ ಜನರಿಗೆ ಮೋಸ ಮಾಡುತ್ತಿದ್ದಾರೆ.

- ಪ್ರವೀಣ್ ಪಾಟೀಲ್, ಸಂಘಟನೆ ಮುಖಂಡ