ಸಮೃದ್ಧವಾಗಿ ಬೆಳೆದ ತೊಗರಿ, ಕೀಟ ನಿರ್ವಹಣೆಗೆ ಖರ್ಚು

| Published : Oct 12 2025, 01:01 AM IST

ಸಾರಾಂಶ

ಪ್ರಸಕ್ತ ಮುಂಗಾರಿನಲ್ಲಿ ಬಿತ್ತನೆಗೊಂಡ ತೊಗರಿ ಬೆಳೆ ಈಗಾಗಲೇ ಹೂವು ಬಿಡುವ ಹಂತದಲ್ಲಿದ್ದು, ಯಲಬುರ್ಗಾ ತಾಲೂಕಿನಲ್ಲಿ ರೈತರು ಮುಂಜಾಗ್ರತಾ ಕ್ರಮವಾಗಿ ಕೀಟ ನಿರ್ವಹಣೆಗೆ ಔಷಧ ಸಿಂಪಡಣೆಗೆ ಮುಂದಾಗಿದ್ದಾರೆ.

ಪಾಲಾಕ್ಷ ಬಿ. ತಿಪ್ಪಳ್ಳಿ

ಯಲಬುರ್ಗಾ: ಪ್ರಸಕ್ತ ಮುಂಗಾರಿನಲ್ಲಿ ಬಿತ್ತನೆಗೊಂಡ ತೊಗರಿ ಬೆಳೆ ಈಗಾಗಲೇ ಹೂವು ಬಿಡುವ ಹಂತದಲ್ಲಿದ್ದು, ರೈತರು ಮುಂಜಾಗ್ರತಾ ಕ್ರಮವಾಗಿ ಕೀಟ ನಿರ್ವಹಣೆಗೆ ಔಷಧ ಸಿಂಪಡಣೆಗೆ ಮುಂದಾಗಿದ್ದಾರೆ.

ಯಲಬುರ್ಗಾ ಹಾಗೂ ಕುಕನೂರು ತಾಲೂಕಿನಲ್ಲಿ ಅಂದಾಜು ೭೨೨೦ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆಯಾಗಿದೆ. ಈ ಮುಂಚೆ ರೈತರು ತೊಗರಿಯನ್ನು ಕೇವಲ ಅಕ್ಕಡಿ ಸಾಲಿನಲ್ಲಿ ಬೆಳೆಯುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ತೊಗರಿಗೆ ಉತ್ತಮ ಬೆಲೆ ಸಿಗುತ್ತಿದ್ದು, ಇಡಿಯಾಗಿ ಬಿತ್ತನೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ತೊಗರಿ ಬಿತ್ತನೆ ಕ್ಷೇತ್ರ ವಿಸ್ತರಣೆಗೊಳ್ಳುತ್ತಿದೆ. ತೊಗರಿ ಕೆಲ ಕಡೆ ಹೂವು, ಚಟ್ಟಿ ಇದ್ದರೆ ಇನ್ನೂ ಕೆಲವೆಡೆ ಬೇಗ ಬಿತ್ತನೆಗೊಂಡ ತೊಗರಿ ಕಾಯಿ ಕಟ್ಟುವ ಹಂತದಲ್ಲಿದ್ದು, ಬೆಳೆಯಲ್ಲಿ ಕಂಡು ಬರುವ ಕೀಟವು (ಕಾಯಿಕೊರಕ) ಕಾಯಿ ಮತ್ತು ಹೂವನ್ನು ಹಾನಿ ಮಾಡುತ್ತದೆ. ಇದರ ನಿರ್ವಹಣೆಗೆ ರೈತರು ಮುಂಜಾಗ್ರತೆಯಿಂದ ಔಷಧ ಸಿಂಪಡಣೆ ಮಾಡುವ ಮೂಲಕ ಬೆಳೆಯನ್ನು ಸಮೃದ್ಧವಾಗಿ ಬೆಳೆಸಲು ಮುಂದಾಗಿದ್ದಾರೆ.

ಸಾವಿರಾರು ರು. ಖರ್ಚು: ರೈತರು ತೊಗರಿ ಬೆಳೆಗೆ ಕಡಿಮೆ ಅವಧಿಯಲ್ಲಿ ಪರಿಣಾಮಕಾರಿಯಾಗಿ ಔಷಧಿ ಸಿಂಪಡಿಸುವ ಟ್ರ‍್ಯಾಕ್ಟರ್ ಚಾಲಿತ ಯಂತ್ರಕ್ಕೆ ಎಕರೆಗೆ ₹೭೦೦ರಿಂದ ₹೧೦೦೦ ಖರ್ಚು ಮಾಡಬೇಕಾಗುತ್ತದೆ. ರೈತ ಸಂಪರ್ಕ ಕೇಂದ್ರ ಅಲ್ಲದೆ ಖಾಸಗಿ ಅಂಗಡಿಯಲ್ಲಿ ದೊರೆಯುವ ಕೀಟ ನಿಯಂತ್ರಣ ಔಷಧಿಯನ್ನು ಸಾವಿರಾರು ರು. ಖರ್ಚು ಮಾಡಿ ತಂದು ಸಿಂಪಡಿಸುವ ಕಾರ್ಯದಲ್ಲಿ ತೊಡಗಿರುವುದು ಕಂಡು ಬರುತ್ತಿದೆ.

ತೊಗರಿಗೆ ಕಾಯಿಕೊರಕ ಲಕ್ಷಣ: ಕಾಯಿಕೊರಕ ಕೀಟವು ತೊಗರಿಕಾಯಿ ಮತ್ತು ಹೂವು ಹಾನಿ ಮಾಡುತ್ತದೆ. ಹೆಣ್ಣು ಪತಂಗವು ತೊಗರಿ ಮೊಗ್ಗು, ಕುಡಿ, ಹೂವು, ಅಥವಾ ಎಳೆಕಾಯಿಗಳ ಮೇಲೆ ಸಾವಿರಾರು ಮೊಟ್ಟೆಗಳನ್ನು ಬಿಡಿಬಿಡಿಯಾಗಿ ಇಡುತ್ತದೆ. ಅದರಿಂದ ಹೊರಬರುವ ಮರಿಹುಳುಗಳು ಮೊದಲಿಗೆ ಹಸಿರು ಭಾಗ ಕೆರೆದು ತಿನ್ನುತ್ತವೆ. ಆನಂತರ ಹೂವು, ಮೊಗ್ಗು ಮತ್ತು ಕಾಯಿ ಕೊರೆಯಲು ಪ್ರಾರಂಭಿಸುತ್ತವೆ. ಇದರಿಂದ ಇಳುವರಿ ಕಡಿಮೆಯಾಗುತ್ತದೆ.

ಸಮಗ್ರ ಪೀಡೆ ನಿರ್ವಹಣೆ: ತೊಗರಿ ಹೂ ಬಿಡುವ ಮತ್ತು ಕಾಯಿ ಬಲಿಯುವ ಹಂತದಲ್ಲಿದ್ದಾಗ ೦.೬ ಗ್ರಾಂ. ಥೈಯೋಡಿಕರ್ಬ್‌-೭೫ಡಬ್ಲುಪಿ, ಅಥವಾ ೨ ಮಿ.ಲೀ. ಪ್ರೋಪೆನೊಫಾಸ್-೫೦ಇಸಿ ಅಥವಾ ೦.೬ ಗ್ರಾಂ. ಮಿಥೋಮಿಲ್-೪೦ ಎಸ್‌ಪಿಯನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು ಎನ್ನುತ್ತಾರೆ ಕೃಷಿ ಅಧಿಕಾರಿಗಳು.

ತಾಲೂಕಿನಲ್ಲಿ ಮುಂಗಾರಿನಲ್ಲಿ ಬಿತ್ತನೆಗೊಂಡ ತೊಗರಿ ಬೆಳೆ ಹೂವು, ಕಾಯಿ ಕಟ್ಟುವ ಹಂತದಲ್ಲಿದೆ. ರೈತರು ಮುಂಜಾಗ್ರತಾ ಕ್ರಮವಾಗಿ ಬೆಳೆಯಲ್ಲಿನ ಕೀಟ ನಿರ್ವಹಣೆಗೆ ಮೋಹಕ ಬಲೆ ಅಳವಡಿಸಬೇಕು. ಅಲ್ಲದೆ ರೈತ ಸಂಪರ್ಕ ಕೇಂದ್ರಗಳಲ್ಲಿ ದೊರೆಯುವ ಕೀಟನಾಶಕ ಸಿಂಪಡಿಸುವುದರಿಂದ ಸಮಗ್ರ ಪೀಡೆ ನಿರ್ವಹಣೆ ಮಾಡಬಹುದು ಎಂದು ಯಲಬರ್ಗಾ ಸಹಾಯಕ ಕೃಷಿ ನಿರ್ದೇಶಕ ಪ್ರಮೋದ ತುಂಬಳ ಹೇಳಿದರು.

ಮುಂಗಾರಿನಲ್ಲಿ ಬಿತ್ತನೆಗೊಂಡ ತೊಗರಿ ಉತ್ತಮವಾಗಿ ಬೆಳೆದಿದೆ. ಕೀಟಬಾಧೆ ಆವರಿಸುವ ಮುಂಚೆ ಟ್ರ‍್ಯಾಕ್ಟರ್ ಚಾಲಿತ ಯಂತ್ರದಿಂದ ಔಷಧಿ ಸಿಂಪಡಣೆ ಮಾಡಲಾಗುತ್ತಿದೆ. ರೈತ ಸಂಪರ್ಕ ಕೇಂದ್ರದಲ್ಲಿ ಔಷಧಿ ತರಲಾಗಿದ್ದು, ಸಿಂಪಡಿಸಲು ಎಕರೆಗೆ ₹೭೦೦ ಇದೆ ಎಂದು ರೈತ ಹನುಮೇಶ ತಾಳಕೇರಿ ಹೇಳಿದರು.