ಅಮೃತ ಯೋಜನೆಯಡಿ ಭಾಗ್ಯನಗರದ 6900 ಮನೆಗಳಿಗೆ ಪೈಪ್‌ಲೈನ್ ಅಳವಡಿಸುವ ಹಾಗೂ ನಲ್ಲಿ ಅಳವಡಿಸುವ ಕಾರ್ಯ ಶೇ. 80ರಷ್ಟು ಪೂರ್ಣಗೊಂಡಿದೆ.
ಸೋಮರಡ್ಡಿ ಅಳವಂಡಿ ಕೊಪ್ಪಳ
ಕೊಪ್ಪಳ ಸಮೀಪದ ಭಾಗ್ಯನಗರ ಪಟ್ಟಣದ ಮನೆಗಳಿಗೆ ತುಂಗಭದ್ರಾ ನದಿಯ ನೀರನ್ನು ಅಮೃತ ಯೋಜನೆಯ ಮೂಲಕ ಪ್ರಾಯೋಗಿಕವಾಗಿ ಪೂರೈಕೆ ಮಾಡಲಾಗುತ್ತಿದ್ದು, ಬಹುತೇಕ ಯಶಸ್ವಿಯಾಗಿದೆ.ಸ್ವಾತಂತ್ರ್ಯ ಬಳಿಕ ಭಾಗ್ಯನಗರ ಪಟ್ಟಣದ ಜನತೆಗೆ ಈಗ ತುಂಗಭದ್ರಾ ನದಿಯ ನೀರು ಪೂರೈಸಲಾಗುತ್ತಿದೆ. 6900 ಮನೆಗಳ ಪೈಕಿ 4900 ಮನೆಗಳಿಗೆ ನೀರು ಪೂರೈಕೆ ಮಾಡಲಾಗಿದೆ.
ಅಮೃತ ಯೋಜನೆಯಡಿ ಭಾಗ್ಯನಗರದ 6900 ಮನೆಗಳಿಗೆ ಪೈಪ್‌ಲೈನ್ ಅಳವಡಿಸುವ ಹಾಗೂ ನಲ್ಲಿ ಅಳವಡಿಸುವ ಕಾರ್ಯ ಶೇ. 80ರಷ್ಟು ಪೂರ್ಣಗೊಂಡಿದೆ. ಉಳಿದ ಮನೆಗಳಿಗೆ ನಲ್ಲಿ ಅಳವಡಿಸುವ ಕಾರ್ಯ ನಡೆದಿದೆ.ಇನ್ನೆರಡು ತಿಂಗಳ ಬೇಕು: ಭಾಗ್ಯನಗರ ಪಟ್ಟಣಕ್ಕೆ ಪ್ರಾಯೋಗಿಕವಾಗಿ ತುಂಗಭದ್ರಾ ನದಿ ನೀರು ಪೂರೈಕೆ ಮಾಡಲಾಗಿದ್ದರೂ ಇನ್ನು ಎರಡು ತಿಂಗಳ ಕಾಲ ಕಾಯಬೇಕಾದ ಸ್ಥಿತಿ ಇದೆ. ಭಾಗ್ಯನಗರ ನೀರು ಶುದ್ಧೀಕರಣ ಘಟಕ ಕಾಮಗಾರಿ ಪ್ರಗತಿಯಲ್ಲಿದ್ದು, ಅದು ಪೂರ್ಣಗೊಳ್ಳಲು ಇನ್ನು ಎರಡು ತಿಂಗಳ ಬೇಕಾಗುತ್ತದೆ. ಅದು ಪೂರ್ಣಗೊಂಡ ನಂತರವೇ ಭಾಗ್ಯನಗರ ಪಟ್ಟಣದ ಜನತೆಗೆ ತುಂಗಭದ್ರಾ ನದಿಯ ನೀರು ದಿನದ 24 ಗಂಟೆಯೂ ಪೂರೈಕೆಯಾಗಲಿದೆ.
ಕೊಪ್ಪಳ ನಗರಸಭೆ ಸಹಕಾರ: ಕೊಪ್ಪಳ ನೀರು ಶುದ್ಧೀಕರಣ ಘಟಕದಿಂದ ಕೊಪ್ಪಳ ನಗರಸಭೆ ಸಹಕಾರದಿಂದ ಪ್ರಾಯೋಗಿಕವಾಗಿ ಭಾಗ್ಯನಗರ ಪಟ್ಟಣದ ಜನತೆಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ ನಿತ್ಯವೂ ಪೂರೈಕೆ ಮಾಡಲು ಸಾಧ್ಯವಿಲ್ಲ. ಭಾಗ್ಯನಗರ ಪಪಂ ಅಧ್ಯಕ್ಷ ರಮೇಶ ಹ್ಯಾಟಿ ಕಾಳಜಿ ಮತ್ತು ಉತ್ಸಾಹ, ಕೊಪ್ಪಳ ನಗರಸಭೆ ಅಧಿಕಾರಿಗಳ ಸಹಕಾರ ಪಡೆದು ಪ್ರಾಯೋಗಿಕವಾಗಿ ಪೂರೈಕೆ ಮಾಡುವ ಕಾರ್ಯ ಆರಂಭವಾಗಿದೆ.32,50,000 ಲೀ. ಸಾಮರ್ಥ್ಯದ ಟ್ಯಾಂಕ್: ಭಾಗ್ಯನಗರ ಪಪಂ ವ್ಯಾಪ್ತಿಯಲ್ಲಿ ಈಗಾಗಲೇ 15 ಲಕ್ಷ ಲೀ. ಸಾಮರ್ಥ್ಯದ ಎರಡು ಟ್ಯಾಂಕ್ ಇದ್ದು, ಕಿನ್ನಾಳ ರಸ್ತೆಯ ಗಂಗಾಧರ್ ಲೇಔಟ್ ನಲ್ಲಿ 2.5 ಲಕ್ಷ ಲೀ. ಸಾಮರ್ಥ್ಯದ ಮತ್ತೊಂದು ಟ್ಯಾಂಕ್ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಈ ಟ್ಯಾಂಕ್‌ಗಳಿಗೆ ತುಂಗಭದ್ರಾ ನದಿಯಿಂದ ಬಂದಿರುವ ನೀರನ್ನು ಶುದ್ಧೀಕರಣ ಮಾಡಿ ಪೂರೈಕೆ ಮಾಡಿದರೆ ಭಾಗ್ಯನಗರ ಪಪಂ ವ್ಯಾಪ್ತಿಯ ಮನೆಗಳಿಗೆ ದಿನದ 24 ಗಂಟೆ ನೀರು ಪೂರೈಕೆ ಮಾಡಲು ಅನುಕೂಲವಾಗುತ್ತದೆ.
ಭಾಗ್ಯನಗರ ಪಟ್ಟಣ ಪಂಚಾಯಿತಿಗೆ ಪ್ರತ್ಯೇಕವಾಗಿ ತುಂಗಭದ್ರಾ ನದಿಯಿಂದ ನೀರು ಪೂರೈಕೆ ಶೀಘ್ರದಲ್ಲೇ ಪೂರ್ಣಗೊಳ್ಳಲಿದ್ದು, ಆಗ ಅಮೃತ ಯೋಜನೆಯಡಿ ದಿನದ 24 ಗಂಟೆ ನೀರು ಪೂರೈಕೆಯಾಗಲಿದೆ ಎಂದು ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ತಿಳಿಸಿದ್ದಾರೆ.ಭಾಗ್ಯನಗರ ಪಟ್ಟಣಕ್ಕೆ ಕೊಪ್ಪಳ ನಗರಸಭೆ ಸಹಕಾರದಿಂದ ಪ್ರಾಯೋಗಿಕವಾಗಿ ಈಗಾಗಲೇ 4900 ಮನೆಗಳಿಗೆ ನೀರು ಪೂರೈಕೆ ಮಾಡಿ ಪರೀಕ್ಷೆ ಮಾಡಲಾಗಿದ್ದು, ಯಶಸ್ವಿಯಾಗಿದೆ. ಉಳಿದ ಮನೆಗಳಿಗೂ ಪ್ರಾಯೋಗಿಕವಾಗಿ ಪೂರೈಕೆ ಮಾಡುವ ಕಾರ್ಯ ಪ್ರಗತಿಯಲ್ಲಿದೆ. ಆದರೆ ನಿರಂತರವಾಗಿ ಪೂರೈಕೆ ಮಾಡಲು ಇನ್ನು ಎರಡು ತಿಂಗಳ ಸಮಯ ಬೇಕಾಗುತ್ತದೆ ಎಂದು ಭಾಗ್ಯನಗರ ಪಪಂ ಅಧ್ಯಕ್ಷ ರಮೇಶ ಹ್ಯಾಟಿ ತಿಳಿಸಿದ್ದಾರೆ.