ಸಾರಾಂಶ
ಜಿಎಸ್‌ಐ ಹಿರಿಯ ವಿಜ್ಞಾನಿಗಳು ಕೆತ್ತಿಕಲ್ ಗುಡ್ಡ ಭಾಗದ ಮಣ್ಣು ಪರಿಶೀಲನೆ ನಡೆಸಿ ವರದಿ ನೀಡಿದರೆ, ಎನ್‌ಐಟಿಕೆ ತಜ್ಞರ ತಂಡವು ಗುಡ್ಡದಿಂದ ಮಣ್ಣು ತೆಗೆದುಹಾಕಿರುವ ಜತೆಗೆ ಹೆದ್ದಾರಿ ಕಾಮಗಾರಿಯ ಕುರಿತು ವರದಿ ನೀಡಲಿದೆ.
ಕನ್ನಡಪ್ರಭ ವಾರ್ತೆ ಮಂಗಳೂರು
ಬಿಕರ್ನಕಟ್ಟೆ- ಕಾರ್ಕಳ ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯಿಂದ ಕುಸಿತದ ಅಪಾಯ ಎದುರಿಸುತ್ತಿರುವ ಕೆತ್ತಿಕಲ್ ಗುಡ್ಡ ಪ್ರದೇಶಕ್ಕೆ ಭೇಟಿ ನೀಡಿರುವ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ (ಜಿಎಸ್‌ಐ)ದ ಹಿರಿಯ ವಿಜ್ಞಾನಿಗಳಿಬ್ಬರು ಇನ್ನೂ ಒಂದೆರಡು ದಿನಗಳ ಕಾಲ ಇಲ್ಲೇ ಇದ್ದು ಪೂರ್ಣ ರೂಪದಲ್ಲಿ ಅಧ್ಯಯನ ನಡೆಸಲಿದ್ದಾರೆ.ಈ ನಡುವೆ, ಕೆತ್ತಿಕಲ್ ಗುಡ್ಡ ಕುಸಿತದ ಸಾಧ್ಯತೆ ಹಿನ್ನೆಲೆಯಲ್ಲಿ ಈಗಾಗಲೇ ಇದರ ಅಸುಪಾಸಿನ 12 ಮನೆಗಳ 60ಕ್ಕೂ ಹೆಚ್ಚು ಮಂದಿಯನ್ನು ಸ್ಥಳಾಂತರ ಮಾಡುವ ಪ್ರಕ್ರಿಯೆ ನಡೆದಿದ್ದು, ಅವರನ್ನು 15 ದಿನಗಳ ಕಾಲ ಸಂಬಂಧಿಕರ ಮನೆಗೆ ಅಥವಾ ಬಾಡಿಗೆ ಮನೆಗೆ ಹೋಗಲು ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಜಿಎಸ್‌ಐ ಹಿರಿಯ ವಿಜ್ಞಾನಿಗಳು ಕೆತ್ತಿಕಲ್ ಗುಡ್ಡ ಭಾಗದ ಮಣ್ಣು ಪರಿಶೀಲನೆ ನಡೆಸಿ ವರದಿ ನೀಡಿದರೆ, ಎನ್‌ಐಟಿಕೆ ತಜ್ಞರ ತಂಡವು ಗುಡ್ಡದಿಂದ ಮಣ್ಣು ತೆಗೆದುಹಾಕಿರುವ ಜತೆಗೆ ಹೆದ್ದಾರಿ ಕಾಮಗಾರಿಯ ಕುರಿತು ವರದಿ ನೀಡಲಿದೆ. ಈ ವರದಿಯ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳಲು ಯೋಜಿಸಲಾಗಿದೆ.ಕೆತ್ತಿಕಲ್ ಗುಡ್ಡ ತೀವ್ರ ಅಪಾಯಕಾರಿಯಾಗಿರುವ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಇತ್ತೀಚೆಗೆ ಸ್ವತಃ ವೀಕ್ಷಣೆ ಮಾಡಿ ಉನ್ನತ ಮಟ್ಟದ ತನಿಖೆ ನಡೆಸಿ ವರದಿ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದರು. ಬಳಿಕ ಸಂಸದ ಕ್ಯಾ. ಬ್ರಿಜೇಶ್ ಚೌಟ ಕೂಡ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳ ಸಭೆ ಕರೆಯುವಂತೆ ಸೂಚಿಸಿದ್ದರು. ಇದರ ಪ್ರಕಾರ ನಾಲ್ಕು ಪ್ರಮುಖ ಇಲಾಖೆಗಳ ಅಧಿಕಾರಿಗಳ ಸಭೆಯನ್ನು ಜಿಲ್ಲಾಧಿಕಾರಿ ನಡೆಸಿದ್ದಾರೆ. ಇದೀಗ ತಜ್ಞರ ತಂಡ ಅಧ್ಯಯನ ನಿರತವಾಗಿದೆ.
ಕೆತ್ತಿಕಲ್ ಗುಡ್ಡ ಪ್ರದೇಶದಲ್ಲಿ ಪರಿಶೀಲನೆ ನಡೆಸುತ್ತಿರುವ ಜಿಎಸ್‌ಐ ಹಿರಿಯ ವಿಜ್ಞಾನಿಗಳ ಜತೆಗೆ ಮಂಗಳೂರು ತಹಸೀಲ್ದಾರ್ ಪ್ರಶಾಂತ್ ಪಾಟೀಲ್, ಮನಪಾ ಕಮಿಷನರ್ ಆನಂದ್ ಸಿ.ಎಲ್., ಮಂಗಳೂರು ಮಹಾನಗರ ಪಾಲಿಕೆಯ ಕಾರ್ಯನಿರ್ವಾಹಕ ಎಂಜಿನಿಯರ್ ಸೇರಿದಂತೆ ಗಣಿ ಇಲಾಖೆಯ ಹಿರಿಯ ಅಧಿಕಾರಿಗಳು ಇದ್ದರು.