ಸಕಾಲಕ್ಕೆ ಮಾರಾಟವಾಗದೇ ಅವಧಿ ಮೀರಿದ ಸುಮಾರು 76 ಲಕ್ಷ ರು. ಮೌಲ್ಯದ ಮದ್ಯವನ್ನು ಮಂಗಳವಾರ ಅಬಕಾರಿ ಇಲಾಖೆ ನಾಶಪಡಿಸಿದೆ.

ಹಾವೇರಿ: ಸಕಾಲಕ್ಕೆ ಮಾರಾಟವಾಗದೇ ಅವಧಿ ಮೀರಿದ ಸುಮಾರು 76 ಲಕ್ಷ ರು. ಮೌಲ್ಯದ ಮದ್ಯವನ್ನು ಮಂಗಳವಾರ ಅಬಕಾರಿ ಇಲಾಖೆ ನಾಶಪಡಿಸಿದೆ.

ನಗರದ ಹೊರ ವಲಯದಲ್ಲಿರುವ ರಾಜ್ಯ ಪಾನೀಯ ನಿಗಮದ ಗೋದಾಮಿನ ಆವರಣದಲ್ಲಿ 2803 ಬಿಯರ್ ಬಾಕ್ಸ್‌ಗಳಲ್ಲಿದ್ದ 45,466 ಬಾಟಲ್‌ಗಳಲ್ಲಿನ ಮದ್ಯವನ್ನು ಚೆಲ್ಲಿ ನಾಶಪಡಿಸಲಾಯಿತು.

ಈ ಬಾರಿ ಕೊಬ್ಬರಿ ಹೋರಿ ಬೆದರಿಸುವ ಸ್ಪರ್ಧೆಗೆ ಕಡಿವಾಣ ಹಾಗೂ ಹುಕ್ಕೇರಿಮಠದ ಶ್ರೀಗಳು ದುಶ್ಚಟಗಳನ್ನು ಬಿಡಿ ಎಂಬ ಅಭಿಯಾನ ನಡೆಸಿದ ಪರಿಣಾಮ ಲಕ್ಷಾಂತರ ರು. ಮೌಲ್ಯದ ಮದ್ಯ ಮಾರಾಟವಾಗದೇ ಅವಧಿ ಮೀರಿದೆ. ದೀಪಾವಳಿ ಹಬ್ಬದ ದಿನವೇ ನಡೆದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಅವಘಡ ಸಂಭವಿಸಿದ್ದರಿಂದ ನಾಲ್ವರು ಮೃತಪಟ್ಟಿದ್ದರು. ಪರಿಣಾಮ ಹೋರಿ ಹಬ್ಬಕ್ಕೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿತ್ತು. ಪ್ರತಿ ವರ್ಷ ನಡೆದಂತೆ ಹೋರಿ ಹಬ್ಬ ನಡೆದಿದ್ದರೆ ಲಕ್ಷಾಂತರ ಜನ ಒಂದೆಡೆ ಸೇರಿ ಸಂಭ್ರಮಿಸುತ್ತಿದ್ದರು. ಆಗ ನೀರು ಮಾರಾಟದಂತೆ ಮದ್ಯ ಮಾರಾಟ ನಡೆಯುತ್ತಿತ್ತು. ಹೀಗಾಗಿ ಹೋರಿ ಹಬ್ಬ ನಡೆಯದ ಪರಿಣಾಮ ಮದ್ಯ ಮಾರಾಟಕ್ಕೆ ಹೊಡೆತ ಬಿದ್ದಿದೆ. ಅಲ್ಲದೇ ಡಿಸೆಂಬರ್ ತಿಂಗಳಲ್ಲಿ ನಡೆದ ಹುಕ್ಕೇರಿಮಠದ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಹುಕ್ಕೇರಿಮಠದ ಸದಾಶಿವ ಶ್ರೀಗಳ ನೇತೃತ್ವದಲ್ಲಿ ಹತ್ತಾರು ಶ್ರೀಗಳು ಹಾವೇರಿ ನಗರ ಸೇರಿ ನೂರಾರು ಹಳ್ಳಿಹಳ್ಳಿ ಪಾದಯಾತ್ರೆ ನಡೆಸಿ ದುಶ್ಚಟಗಳನ್ನು ಜೋಳಿಗೆಗೆ ಹಾಕಿ ಎಂಬ ಅಭಿಯಾನ ನಡೆಸಿದ್ದರು. ಇದರ ಪರಿಣಾಮ ಸಾಕಷ್ಟು ಯುವಕರು ಮದ್ಯ ತ್ಯಜಿಸಿದ್ದರು. ಹೀಗಾಗಿ ಜಿಲ್ಲೆಯ ಮದ್ಯ ಮಾರಾಟದ ಇತಿಹಾಸದಲ್ಲೇ ದೊಡ್ಡ ಹೊಡೆದ ಬಿದ್ದಿದೆ ಎನ್ನಲಾಗುತ್ತಿದೆ.

ಈ ವೇಳೆ ಅಬಕಾರಿ ಡಿಸಿ ವನಜಾಕ್ಷಿ ಎಂ., ತಹಸೀಲ್ದಾರ್ ಶರಣಮ್ಮ ಕಾರಿ, ಅಬಕಾರಿ ಡಿಎಸ್ಪಿ ಹೊನ್ನಪ್ಪ ಓಲೇಕಾರ, ಕೆಎಸ್‌ಬಿಸಿಎಲ್ ಮ್ಯಾನೇಜರ್ ಸಿ.ಡಿ. ನಾಡಗೇರ ಇತರರು ಇದ್ದರು.

ಅವಧಿ ಮೀರಿದ ಮದ್ಯ ಮಾರಾಟ ಮಾಡಿದರೆ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಜಿಲ್ಲೆಯಲ್ಲಿ 76 ಲಕ್ಷ ರು. ಮೌಲ್ಯದ 2803 ಬಿಯರ್ ಬಾಕ್ಸಗಳನ್ನು ಕೆಎಸ್‌ಬಿಸಿಎಲ್ ಗೋದಾಮು ಆವರಣದಲ್ಲಿ ನಾಶಪಡಿಸಲಾಗಿದೆ. ಕೊಬ್ಬರಿ ಹೋರಿ ಬೆದರಿಸುವ ಸ್ಪರ್ಧೆ ನಡೆಯದಿರುವುದರಿಂದ ಹಾಗೂ ಸ್ವಾಮೀಜಿಗಳು ಮದ್ಯ ತ್ಯಜಿಸುವಂತೆ ಅಭಿಯಾನ ನಡೆಸಿದ್ದ ಪರಿಣಾಮ ಮದ್ಯ ಮಾರಾಟ ಕಡಿಮೆಯಾಗಿದೆ ಎಂದು ಅಬಕಾರಿ ಡಿಸಿ ವನಜಾಕ್ಷಿ ಎಂ. ಹೇಳಿದರು.