ಕನ್ನಡಪ್ರಭ ವಾರ್ತೆ ಬೆಳಗಾವಿನಗರದ ಬಿಮ್ಸ್, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಹಾಗೂ ಕೇಂದ್ರ ಬಸ್ ನಿಲ್ದಾಣ, ಮಹಾನಗರ ಪಾಲಿಕೆಗೆ ಗುರುವಾರ ದಿಢೀರ್ ಭೇಟಿ ನೀಡಿದ ಉಪಲೋಕಾಯುಕ್ತ ನ್ಯಾ.ಬಿ.ವೀರಪ್ಪ ಅವರು, ವಿವಿಧ ಅವ್ಯವಸ್ಥೆಗಳನ್ನು ಪರಿಶೀಲಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ಚಾಟಿ ಬೀಸಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ನಗರದ ಬಿಮ್ಸ್, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಹಾಗೂ ಕೇಂದ್ರ ಬಸ್ ನಿಲ್ದಾಣ, ಮಹಾನಗರ ಪಾಲಿಕೆಗೆ ಗುರುವಾರ ದಿಢೀರ್ ಭೇಟಿ ನೀಡಿದ ಉಪಲೋಕಾಯುಕ್ತ ನ್ಯಾ.ಬಿ.ವೀರಪ್ಪ ಅವರು, ವಿವಿಧ ಅವ್ಯವಸ್ಥೆಗಳನ್ನು ಪರಿಶೀಲಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ಚಾಟಿ ಬೀಸಿದರು.ಬಿಮ್ಸ್ ಔಷಧ ಉಗ್ರಾಣದಲ್ಲಿ ಲಕ್ಷಾಂತರ ರುಪಾಯಿ ಮೌಲ್ಯದ ಅವಧಿ ಮೀರಿದ ಲಸಿಕೆಗಳು ಪತ್ತೆಯಾಗಿವೆ. ಜತೆಗೆ ಸಮಗ್ರ ವರದಿ ಸಲ್ಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಎಪಿಎಂಸಿಯಲ್ಲಿ ತೂಕದ ಮೋಸಕ್ಕೆ ಆಕ್ಷೇಪ:ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ತರಕಾರಿ ವ್ಯಾಪಾರಿಗಳ ತೂಕದ ಯಂತ್ರಗಳನ್ನು ಪರಿಶೀಲಿಸಿದ ಅವರು, ತೂಕದಲ್ಲಿ ಮೋಸ ಹಾಗೂ ದಲ್ಲಾಳಿಗಳ ಹೆಚ್ಚಿನ ಕಮಿಷನ್ ಕುರಿತು ಮಾಹಿತಿ ಪಡೆದರು. ಸಗಟು ವ್ಯಾಪಾರಿಗಳು ಮಾರಾಟದ ರಸೀದಿ ನೀಡದಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಮಾರುಕಟ್ಟೆಯ ಕುಡಿಯುವ ನೀರಿನ ಘಟಕ ಸ್ಥಗಿತಗೊಂಡಿರುವುದು, ಉಪಾಹಾರ ಗೃಹದ ಸ್ವಚ್ಛತೆ ಕೊರತೆ ಹಾಗೂ ಶೌಚಾಲಯಗಳ ದುಸ್ಥಿತಿಗೆ ಅಸಮಾಧಾನ ವ್ಯಕ್ತಪಡಿಸಿ ಕಾರ್ಯದರ್ಶಿಯನ್ನು ತರಾಟೆಗೆ ತೆಗೆದುಕೊಂಡರು. ರೈತರು ಮತ್ತು ಹಮಾಲಿಗಳಿಗೆ ವಿಶ್ರಾಂತಿ ಗೃಹ ಹಾಗೂ ವಾಹನ ನಿಲುಗಡೆ ವ್ಯವಸ್ಥೆ ಇಲ್ಲದಿರುವುದನ್ನೂ ಗಮನಿಸಿದರು.
ಹಮಾಲಿಗಳಿಗೆ ಸರ್ಕಾರಿ ಸೌಲಭ್ಯಗಳು ದೊರೆಯುತ್ತಿಲ್ಲ ಎಂಬ ದೂರಿನ ಹಿನ್ನೆಲೆಯಲ್ಲಿ, ಎರಡು ದಿನಗಳೊಳಗೆ ಎಲ್ಲ ಅಂಗಡಿಗಳ ಕಾರ್ಮಿಕರ ಮಾಹಿತಿ ಸಂಗ್ರಹಿಸಿ ಅರ್ಹರಿಗೆ ಸೌಲಭ್ಯ ಒದಗಿಸುವಂತೆ ಕಾರ್ಮಿಕ ಇಲಾಖೆಗೆ ಸೂಚಿಸಿದರು. ರೈತ ಭವನದ ವ್ಯವಸ್ಥೆಯನ್ನೂ ಪರಿಶೀಲಿಸಿದರು.ಬಸ್ ನಿಲ್ದಾಣದಲ್ಲಿ ಅವಧಿ ಮೀರಿದ ಆಹಾರ ಪತ್ತೆ:
ಕೇಂದ್ರ ಬಸ್ ನಿಲ್ದಾಣದ ಶೌಚಾಲಯಗಳಲ್ಲಿ ಸ್ವಚ್ಛತೆ ಕೊರತೆ, ದರಪಟ್ಟಿ ಇಲ್ಲದಿರುವುದು ಹಾಗೂ ಬಳಕೆದಾರರಿಗೆ ರಸೀದಿ ನೀಡದಿರುವುದನ್ನು ಗಮನಿಸಿದ ಉಪಲೋಕಾಯುಕ್ತರು, ನಿಯಮ ಪಾಲಿಸುವಂತೆ ಸೂಚಿಸಿದರು. ಉಪಾಹಾರ ಗೃಹಗಳಲ್ಲಿ ಸ್ವಚ್ಛತೆ ಮತ್ತು ಸುರಕ್ಷತೆಯ ಕೊರತೆ ಕಂಡುಬಂದ ಹಿನ್ನೆಲೆಯಲ್ಲಿ ಆಹಾರ ಪದಾರ್ಥಗಳ ದರಪಟ್ಟಿ ಪ್ರದರ್ಶಿಸುವಂತೆ ನಿರ್ದೇಶನ ನೀಡಿದರು. ಆಹಾರ ಸುರಕ್ಷತಾ ಅಧಿಕಾರಿಗಳು ನಿಯಮಿತ ತಪಾಸಣೆ ನಡೆಸದಿರುವುದಕ್ಕೂ ಅಸಮಾಧಾನ ವ್ಯಕ್ತಪಡಿಸಿದರು. ವಿವಿಧ ಆಹಾರ ಮಳಿಗೆಗಳಲ್ಲಿ ಪತ್ತೆಯಾದ ಅವಧಿ ಮೀರಿದ ಪದಾರ್ಥಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಸೂಚಿಸಿದರು.ನಿಲ್ದಾಣದ ನಮ್ಮ ಕ್ಲಿನಿಕ್ನಲ್ಲಿ ಔಷಧ ವಿತರಣೆ ಮತ್ತು ಚಿಕಿತ್ಸಾ ವಿಧಾನದ ಕುರಿತು ಮಾಹಿತಿ ಪಡೆದರು. ಔಷಧ ಮಳಿಗೆಯ ಆಹಾರ ಸುರಕ್ಷತಾ ಪ್ರಮಾಣಪತ್ರದ ಅವಧಿ ಮುಗಿದಿರುವುದನ್ನು ಗಮನಿಸಿ, ಉದ್ಯೋಗಿಗಳಿಗೆ ಕನಿಷ್ಠ ವೇತನ ನೀಡುವಂತೆ ಕಾರ್ಮಿಕ ಇಲಾಖೆಗೆ ಸೂಚಿಸಿದರು. ಉದ್ಯೋಗಿಗಳಿಗೆ ತೊಂದರೆ ನೀಡದಂತೆಯೂ ನಿರ್ದೇಶನ ನೀಡಿದರು.
ವಸತಿ ಗೃಹದ ದಾಖಲೆ ಪರಿಶೀಲಿಸಿದಾಗ ಬಿಲ್ಲುಗಳಲ್ಲಿ ತೆರಿಗೆ ಮೊತ್ತ ನಮೂದಿಸದಿರುವುದು ಹಾಗೂ ಸಿಸಿಟಿವಿ ಸೇರಿದಂತೆ ಸುರಕ್ಷತಾ ವ್ಯವಸ್ಥೆಗಳ ಕೊರತೆ ಕಂಡುಬಂದಿತು. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ನಿಯಮಿತ ತಪಾಸಣೆ ನಡೆಸುವಂತೆ ಸೂಚಿಸಿದರು.ಈ ವೇಳೆ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಎನ್. ಶಿವಕುಮಾರ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಉಪವಿಭಾಗಾಧಿಕಾರಿ ಶ್ರವಣ ನಾಯಕ, ಮಹಾನಗರ ಪಾಲಿಕೆ ಆಯುಕ್ತ ಕಾರ್ತಿಕ ಎಂ., ಬಿಮ್ಸ್ ನಿರ್ದೇಶಕ ವಿನಯ ದಾಸ್ತಿಕೊಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಐ.ಪಿ.ಗಡಾದ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಬಿಮ್ಸ್ನಲ್ಲಿ ಅವಧಿ ಮೀರಿದ ಲಸಿಕೆ ಪತ್ತೆ
ಬಿಮ್ಸ್ನ ಒಳರೋಗಿಗಳ ವಿಭಾಗ, ತೀವ್ರ ನಿಗಾ ಘಟಕ, ಪ್ರಸೂತಿ ವಿಭಾಗ ಹಾಗೂ ಹೊರರೋಗಿಗಳ ವಿಭಾಗಗಳಿಗೆ ಭೇಟಿ ನೀಡಿದ ಉಪಲೋಕಾಯುಕ್ತರು, ರೋಗಿಗಳೊಂದಿಗೆ ಮಾತನಾಡಿ, ಚಿಕಿತ್ಸೆಯ ಕುರಿತು ಮಾಹಿತಿ ಪಡೆದರು. ಔಷಧ ವಿತರಣಾ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸುವಂತೆ ಹಾಗೂ ವೈದ್ಯರು ರೋಗಿಗಳಿಂದ ಹಣ ಪಡೆಯದಂತೆ, ಹೊರಗಿನಿಂದ ಔಷಧ ಖರೀದಿಸಲು ಚೀಟಿ ಬರೆದುಕೊಡದಂತೆ ನಿಗಾವಹಿಸಲು ಸೂಚಿಸಿದರು. ಔಷಧ ಉಗ್ರಾಣದಲ್ಲಿ ರೇಬೀಸ್ ಸೇರಿದಂತೆ ವಿವಿಧ ಕಾಯಿಲೆಗಳಿಗೆ ಸಂಬಂಧಿಸಿದ ಲಕ್ಷಾಂತರ ರುಪಾಯಿ ಮೌಲ್ಯದ ಅವಧಿ ಮೀರಿದ ಲಸಿಕೆಗಳನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿದರು. ಬಳಿಕ ರಕ್ತ ಭಂಡಾರಕ್ಕೆ ಭೇಟಿ ನೀಡಿ ರಕ್ತದ ದಾಸ್ತಾನು ಪರಿಶೀಲಿಸಿದರು.