ರೈತರ ಮೇಲೆ ಮೆಸ್ಕಾಂ ಶೋಷಣೆ; ಅಧಿಕಾರಿಗಳಿಗೆ ಶಾಸಕ ಬಿ.ವೈ.ವಿಜಯೇಂದ್ರ ಕ್ಲಾಸ್‌

| Published : Jul 03 2024, 12:23 AM IST

ರೈತರ ಮೇಲೆ ಮೆಸ್ಕಾಂ ಶೋಷಣೆ; ಅಧಿಕಾರಿಗಳಿಗೆ ಶಾಸಕ ಬಿ.ವೈ.ವಿಜಯೇಂದ್ರ ಕ್ಲಾಸ್‌
Share this Article
  • FB
  • TW
  • Linkdin
  • Email

ಸಾರಾಂಶ

ಸೋಮವಾರ ಶಿಕಾರಿಪುರದ ಮೆಸ್ಕಾಂ ವಿಭಾಗೀಯ ಕಚೇರಿಗೆ ಭೇಟಿ ನೀಡಿದ ಶಾಸಕ ವಿಜಯೇಂದ್ರ ಅಧಿಕಾರಿಗಳ ಜತೆ ದುರಸ್ತಿ ಕೇಂದ್ರಕ್ಕೆ ಧಾವಿಸಿ ಪರಿಶೀಲಿಸಿದರು.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ಇಲ್ಲಿನ ಮೆಸ್ಕಾಂ ಕಚೇರಿಯಲ್ಲಿ ರೈತ ಸಮುದಾಯವನ್ನು ಅಧಿಕಾರಿಗಳು ಶೋಷಿಸುತ್ತಿದ್ದಾರೆ ಎಂದು ವಿವಿಧ ಗ್ರಾಮದ ಹಲವು ರೈತರು ಕ್ಷೇತ್ರದ ಶಾಸಕ ಬಿ.ವೈ.ವಿಜಯೇಂದ್ರ ರವರ ಬಳಿ ಆಗಮಿಸಿ ಅಧಿಕಾರಿಗಳ ವಿರುದ್ಧ ಕ್ರಮಕ್ಕೆಷೊತ್ತಾಯಿಸಿದ ಹಿನ್ನೆಲೆಯಲ್ಲಿ ಮೆಸ್ಕಾಂ ವಿಭಾಗೀಯ ಕಚೇರಿಗೆ ದಿಢೀರ್ ಭೇಟಿ ನೀಡಿ, ಅಧಿಕಾರಿಗಳನ್ನು ಶಾಸಕರು ತರಾಟೆ ತೆಗೆದುಕೊಂಡ ಘಟನೆ ನಡೆಯಿತು.

ಬೆಳಿಗ್ಗೆ ನೂರಾರು ರೈತರು ಶಾಸಕರನ್ನು ಭೇಟಿ ಮಾಡಿ ಮೆಸ್ಕಾಂ ಕಚೇರಿಯಲ್ಲಿನ ಉದ್ದೇಶಪೂರ್ವಕ ತೊಂದರೆ ಬಗ್ಗೆ ಗಮನ ಸೆಳೆದ ಹಿನ್ನೆಲೆಯಲ್ಲಿ ಶಾಸಕರು ಕಚೇರಿಗೆ ಭೇಟಿ ನೀಡಿ, ಅಧಿಕಾರಿಗಳ ಸಭೆ ನಡೆಸಿದರು. ಗಾಮ ಗ್ರಾಮದ ರೈತ ಬಸವರಾಜಪ್ಪ ಮಟ್ಟಿ ಎಂಬುವರ ಜಮೀನಿಗೆ ಅಕ್ರಮ ಸಕ್ರಮ ಯೋಜನೆಯಡಿ ಮಂಜೂರಾದ ಕಾಮಗಾರಿ ಯನ್ನು ಕೆಲಸ ಮಾಡದೆಯೇ ಹಣ ಪಾವತಿಸಿಕೊಂಡ ಬಗ್ಗೆ ಮೆಸ್ಕಾಂ ಕಾರ್ಯ ಪಾಲಕ ಎಂಜಿನಿಯರ್ ಯೋಗೀಶ್‌ರವರಿಗೆ ತನಿಖೆ ಕೈಗೊಂಡು ವರದಿ ಸಲ್ಲಿಸುವಂತೆ ಸೂಚಿಸಿದರು.

ತಾಲೂಕಿನ ರೈತರಿಗೆ ವಿತರಿಸಬೇಕಾಗಿರುವ ಅಕ್ರಮ ಸಕ್ರಮ ಯೋಜನೆಯ ವಿದ್ಯುತ್ ಸಂಪರ್ಕ, ಶೀಘ್ರ ಸಂಪರ್ಕ, ಜಿ.ಎಸ್.ಎಂ ಸೇರಿದಂತೆ ರೈತರ ವಿದ್ಯುತ್ ಸಮಸ್ಯೆಗಳ ಬಗೆಗಿನ ದೂರುಗಳನ್ನು ಆಧರಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.

ನಂತರದಲ್ಲಿ ಟಿ.ಸಿ. ದುರಸ್ತಿ ಕೇಂದ್ರ ಹಾಗೂ ಸಾಮಗ್ರಿ ಕೊಠಡಿ ವೀಕ್ಷಿಸಿದ ಶಾಸಕರು ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಅವಧಿಯಲ್ಲಿ ರೈತ ಸಮುದಾಯ ಟಿ.ಸಿ ದುರಸ್ತಿಗಾಗಿ ಸಾಗರಕ್ಕೆ ತೆಗೆದುಕೊಂಡು ಹೋಗುವ ತೊಂದರೆ ಅನುಭವಿಸದಂತೆ ಎಲ್ಲ ರೀತಿಯಲ್ಲಿ ಸುಸಜ್ಜಿತ ದುರಸ್ತಿ ಕೇಂದ್ರವನ್ನು ಆರಂಭಿಸಲಾಗಿದೆ. ದುರಸ್ತಿ ಕೇಂದ್ರ ಆರಂಭದ ನಂತರದಲ್ಲಿಯೂ ರೈತರಿಗೆ ಕೇಂದ್ರದ ಸೌಲಭ್ಯ ದೊರಕದಿದ್ದಲ್ಲಿ ಜನಪ್ರತಿನಿಧಿಗಳಿಗೆ ಮರ್ಯಾದೆ ಗೌರವಕ್ಕೆ ಚ್ಯುತಿ ಉಂಟಾಗಲಿದೆ, ಅಧಿಕಾರಿಗಳ ವರ್ತನೆಯಿಂದ ನೊಂದ ರೈತರ ಶಾಪ ತಟ್ಟಲಿದೆ ಎಂಬ ಭಯದಿಂದ ಕರ್ತವ್ಯ ನಿರ್ವಹಿಸುವಂತೆ ತಿಳಿಹೇಳಿದರು.

ಅಂಜನಾಪುರ ಜಲಾಶಯದಿಂದ ಶಿಕಾರಿಪುರ ಪಟ್ಟಣಕ್ಕೆ ಕುಡಿಯುವ ನೀರು ಒದಗಿಸಲು ದಿನದ 24 ಗಂಟೆಯೂ ವಿದ್ಯುತ್ ಒದಗಿಸುವಂತೆ ಸೂಚಿಸಿದ ಅವರು ರೈತರಿಗೆ ವಿದ್ಯುತ್ ಸಂಬಂಧಿತ ಯಾವುದೇ ಸಮಸ್ಯೆಗಳು ಎದುರಾಗದಂತೆ ತುರ್ತು ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಈ ಸಂದರ್ಭದಲ್ಲಿ ವಿಭಾಗೀಯ ಕಾರ್ಯಪಾಲಕ ಎಂಜಿನಿಯರ್ ಯೋಗೀಶ್, ಎಇಇ ಮಂಜಪ್ಪ,ಶ್ರೀಧರ್‌, ಮಡಿವಾಳಪ್ಪ ಸಹಿತ ವಿವಿಧ ಹಂತದ ಅಧಿಕಾರಿಗಳು ಹಾಗೂ ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ ಪುರಸಭಾ ಸದಸ್ಯ ಪಾಲಾಕ್ಷಪ್ಪ ಭದ್ರಾಪುರ, ಬಿಜೆಪಿ ತಾಲೂಕು ಅಧ್ಯಕ್ಷ ಹನುಮಂತಪ್ಪ ಸಂಕ್ಲಾಪುರ, ಅಶೋಕ ಮಾರವಳ್ಳಿ, ಗಣೇಶ್ ನಾಗೀಹಳ್ಳಿ, ಬೆಣ್ಣೆ ಪ್ರವೀಣ್, ವಿನಯ್‌ ಸೇಬು ಮತ್ತಿತರರು ಹಾಜರಿದ್ದರು.